ಆಲಂಕಾರು: ಮೂರ್ತೆದಾರರ ಸೇವಾ ಸಹಕಾರಿ ಸಂಘದ ವತಿಯಿಂದ ಕೆ.ಚಂದ್ರಶೇಖರ ಪೂಜಾರಿಯವರಿಗೆ ಶ್ರದ್ಧಾಂಜಲಿ

0



ಸಮಾಜಮುಖಿಯಾಗಿ ಬದುಕುವವರನ್ನು ಸಮಾಜ ಎಂದಿಗೂ ಮರೆಯುವುದಿಲ್ಲ: ಕೃಷ್ಣಪ್ಪ ಪೂಜಾರಿ

ಆಲಂಕಾರು: ಆಲಂಕಾರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ಮಾಜಿ ಅಧ್ಯಕ್ಷ, ಹಾಲಿ ನಿರ್ದೇಶಕರೂ ಆದ ಕೆ.ಚಂದ್ರಶೇಖರ ಪೂಜಾರಿ ಆಲಂಕಾರು ಅವರಿಗೆ ಆಲಂಕಾರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ವತಿಯಿಂದ ಶ್ರದ್ದಾಂಜಲಿ ಸಭೆ ಜೂ.3ರಂದು ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ದೀನದಯಾಳು ಸಭಾಭವನದಲ್ಲಿ ನಡೆಯಿತು.


ನುಡಿನಮನ ಸಲ್ಲಿಸಿದ ಬೆಳ್ತಂಗಡಿ ಶ್ರೀ ಗುರುದೇವ ಪದವಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಎ.ಕೃಷ್ಣಪ್ಪ ಪೂಜಾರಿಯವರು, ಸಮಾಜಮುಖಿಯಾಗಿ ಬದುಕುವವರನ್ನು ಸಮಾಜ ಎಂದಿಗೂ ಮರೆಯುವುದಿಲ್ಲ ಎಂಬುದಕ್ಕೆ ಕೆ.ಚಂದ್ರಶೇಖರ ಪೂಜಾರಿಯವರೇ ನಿದರ್ಶನರಾಗಿದ್ದಾರೆ. ಸಮಾಜದ ಎಲ್ಲಾ ಜಾತಿ, ಧರ್ಮದವರ ಪ್ರೀತಿಗೆ ಪಾತ್ರರಾಗಿರುವ ಅವರೊಬ್ಬ ಧನ್ಯತಾಜೀವಿಯಾಗಿದ್ದರು. ಕಡು ಬಡತನದ ಕುಟುಂಬದಲ್ಲಿ ಜನಿಸಿದ ಚಂದ್ರಶೇಖರ ಅವರು ಶಾಲೆಗೆ ಹೋಗಲು ಕಷ್ಟಕರವಾಗಿದ್ದ ಸಂದರ್ಭದಲ್ಲೂ ಪ.ಪೂ.ಶಿಕ್ಷಣ ಪಡೆದುಕೊಂಡು ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕೆಂಬ ಛಲದಲ್ಲಿ ಬೆಳೆದವರು. ತಂದೆಯಾಗಿ ಅವರು ಮಾಡಬೇಕಾದ ಜವಾಬ್ದಾರಿಯನ್ನೂ ಸಮರ್ಥವಾಗಿ ನಿರ್ವಹಿಸಿದ್ದಾರೆ ಎಂದರು. ಅನೇಕ ಸಂಘ ಸಂಸ್ಥೆಗಳಲ್ಲೂ ಗುರುತಿಸಿಕೊಂಡಿದ್ದ ಕೆ.ಚಂದ್ರಶೇಖರ ಪೂಜಾರಿಯವರದ್ದು ಸ್ವಾರ್ಥರಹಿತ, ಫಲಾಪೇಕ್ಷೆ ಇಲ್ಲದ ಮೌನ ಸೇವೆಯಾಗಿದೆ. ಯಕ್ಷಗಾನದ ಪ್ರಬುದ್ಧ ಅರ್ಥದಾರಿಯಾಗಿ ಜಿಲ್ಲೆಯ ಮೂಲೆ ಮೂಲೆಯಲ್ಲೂ ಸೇವೆ ನೀಡಿದ್ದಾರೆ. ಯಶಸ್ವಿ ಕಾರ್ಯಕ್ರಮ ಸಂಘಟಕ, ನಿರೂಪಕರೂ ಆಗಿದ್ದರು. ಶರವೂರು ದೇವರ ಅವಭೃತ ಸೇವೆಯ ಕೈಂಕರ್ಯದಲ್ಲಿ ಪ್ರತಿವರ್ಷವೂ ತೊಡಗಿಕೊಳ್ಳುತ್ತಿದ್ದ ಚಂದ್ರಶೇಖರ ಅವರು, ದೇವರ ಅವಭೃತ ನಡೆಯುತ್ತಿದ್ದ ಕುಮಾರಧಾರ ನದಿಯ ಪರಿಸರದಲ್ಲೇ ಪ್ರಾಣತ್ಯಾಗ ಮಾಡಿದ್ದಾರೆ ಎಂದು ಕೃಷ್ಣಪ್ಪ ಪೂಜಾರಿ ಹೇಳಿದರು.

ಆತ್ಮಹತ್ಯೆ ಮಹಾಪಾಪ:
ಕಷ್ಟಗಳು ಜೀವನದಲ್ಲಿ ಬರುವುದು ಸ್ವಾಭಾವಿಕ. ಜಗತ್ತಿನಲ್ಲಿ ಯಾರೂ ಪರಿಪೂರ್ಣ ವ್ಯಕ್ತಿಯಾಗಲು ಸಾಧ್ಯವಿಲ್ಲ. ಪ್ರತಿಯೊಬ್ಬರಲ್ಲೂ ಲೋಪವಿದೆ. ಇಂತಹ ಸಂದರ್ಭದಲ್ಲಿ ಜೀವನದ ಘನತೆ ಉಳಿಸಿಕೊಂಡು ಹೋಗುವಂತದ್ದು ಸವಾಲಿನ ಕೆಲಸ ಆಗಿದೆ. ಆತ್ಮಹತ್ಯೆಯಂತಹ ಮಹಾಪಾಪ ಯಾವುದೂ ಇಲ್ಲ. ಆತ್ಮಹತ್ಯೆ ಮಾಡಬಾರದು. ಅದು ತಪ್ಪು ನಿರ್ಧಾರ. ನಮ್ಮನ್ನು ನಾವೇ ಸಾಯಿಸುವ ಅಧಿಕಾರವಿಲ್ಲ. ಹುಟ್ಟಿಸಿದ ಪರಮಾತ್ಮನಿಗೇ ಮಾತ್ರ ಸಾಯಿಸುವ ಅಧಿಕಾರವಿರುವುದು ಎಂದು ಕೃಷ್ಣಪ್ಪ ಪೂಜಾರಿ ಹೇಳಿದರು.

ಎಲ್ಲರೊಂದಿಗೂ ಉತ್ತಮ ಬಾಂಧವ್ಯ:
ಪುತ್ತೂರು ತಾಲೂಕು ಬಿಲ್ಲವ ಸಂಘದ ಅಧ್ಯಕ್ಷ ಸತೀಶ್‌ಕುಮಾರ್ ಕೆಡೆಂಜಿ ಮಾತನಾಡಿ, ಕೆ.ಚಂದ್ರಶೇಖರ ಪೂಜಾರಿಯವರು ಎಲ್ಲಾ ಸಮಾಜದವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು. ತಮ್ಮ ಜೀವಿತಾವಧಿಯಲ್ಲಿ ಎಲ್ಲರಿಗೂ ಒಳಿತನ್ನೇ ಬಯಸಿದ್ದರು. ಬಿಲ್ಲವ ಸಮಾಜದ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳುತ್ತಿದ್ದರು ಎಂದು ಹೇಳಿದರು.

ಉತ್ತಮ ವ್ಯಕ್ತಿತ್ವದವರು:
ಆಲಂಕಾರು ಗ್ರಾ.ಪಂ.ಅಧ್ಯಕ್ಷ ಸದಾನಂದ ಆಚಾರ್ಯ ಅವರು ಮಾತನಾಡಿ, ಚಂದ್ರಶೇಖರ ಅವರು ಉತ್ತಮ ವ್ಯಕ್ತಿತ್ವ ಉಳ್ಳವರಾಗಿದ್ದಾರೆ. ಅವರ ಕುಟುಂಬಕ್ಕೆ ಅವರ ಅಗಲುವಿಕೆಯ ದು:ಖವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಹೇಳಿದರು.

ಆತ್ಮೀಯತೆಯ ಸಂಬಂಧ ಬೆಳೆಸಿಕೊಂಡಿದ್ದರು:
ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ದಾಮೋದರ ಗೌಡ ಕಕ್ವೆ ಮಾತನಾಡಿ, ಸಾಮಾನ್ಯ ವ್ಯಕ್ತಿಯ ಜೊತೆಗೂ ಆತ್ಮೀಯ ಸಂಬಂಧ ಬೆಳೆಸಿಕೊಂಡಿದ್ದವರು ಚಂದ್ರಶೇಖರ ಪೂಜಾರಿಯವರು. ಅವರದ್ದು ಬಹುಮುಖ ವ್ಯಕ್ತಿತ್ವ. ಆಲಂಕಾರು ಶಾಲೆಯ ಶತಮಾನೋತ್ಸವ ಸಮಿತಿ ಅಧ್ಯಕ್ಷರಾಗಿ ಯಶಸ್ವಿಯಾಗಿ ಕೆಲಸ ನಿರ್ವಹಿಸಿದ್ದರು. ಶರವೂರು ದೇವಸ್ಥಾನದ ಆಡಳಿತ ಸಮಿತಿಯಲ್ಲಿ ಹಲವು ವರ್ಷ ಸೇವೆ ಸಲ್ಲಿಸಿದ್ದಾರೆ. ದೇವಸ್ಥಾನದ ಇತರೇ ಸಮಿತಿಗಳಲ್ಲೂ ತೊಡಗಿಕೊಂಡು ದೇವಸ್ಥಾನದ ಕೀರ್ತಿ ಬೆಳಗಿಸಿದ್ದಾರೆ ಎಂದರು.

ಕಷ್ಟದಲ್ಲಿದ್ದವರಿಗೆ ಸಹಾಯ ಮಾಡುತ್ತಿದ್ದರು:
ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಪ್ರದೀಪ್ ರೈ ಮನವಳಿಕೆ ಮಾತನಾಡಿ, ಕೆ.ಚಂದ್ರಶೇಖರ ಪೂಜಾರಿಯವರು ಸಮಾಜಕ್ಕೆ ಮಾರ್ಗದರ್ಶಕರಾಗಿದ್ದವರು. ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ನಂಬಲೂ ಅಸಾಧ್ಯವಾಗಿದೆ. ಆಲಂಕಾರಿನಲ್ಲಿ ಜೇಸಿಐ ಆರಂಭಗೊಂಡಾಗ ಅದರಲ್ಲೂ ತೊಡಗಿಕೊಂಡಿದ್ದರು. ಎಲ್ಲಾ ಸಂಘ ಸಂಸ್ಥೆಗಳಲ್ಲಿ ಗುರುತಿಸಿಕೊಂಡು ಎಲ್ಲರನ್ನೂ ಒಗ್ಗಟ್ಟಿನಲ್ಲಿ ಕೊಂಡೊಯ್ಯುತ್ತಿದ್ದರು. ಕಷ್ಟದಲ್ಲಿದ್ದವರಿಗೆ ಸಹಾಯ ಮಾಡುವ ಗುಣ ಅವರಲ್ಲಿತ್ತು ಎಂದರು.

ಜನರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದ್ದಾರೆ:
ಆಲಂಕಾರು ಶ್ರೀ ದುರ್ಗಾಂಬಾ ಕಲಾ ಸಂಗಮದ ಅಧ್ಯಕ್ಷ ಗೋಪಾಲಕೃಷ್ಣ ಭಟ್ ನೈಮಿಷ ಮಾತನಾಡಿ, ಪ್ರಬುದ್ಧ ಯಕ್ಷಗಾನ ಅರ್ಥದಾರಿಯಾಗಿದ್ದ ಕೆ.ಚಂದ್ರಶೇಖರ ಪೂಜಾರಿಯವರು ಎಲ್ಲರೊಂದಿಗೂ ಆತ್ಮೀಯ ನಂಟು ಹೊಂದಿದ್ದರು. ಕೆಲ ಸಮಯಗಳಿಂದ ಅವರಲ್ಲಿ ಖಿನ್ನತೆ ಆವರಿಸಿಕೊಂಡಿತ್ತು. ಅದರಿಂದ ಹೊರಬರಲಾರದೆ ಅವರು ಆತ್ಮಹತ್ಯೆಯಂತಹ ನಿರ್ಧಾರ ಮಾಡಿಕೊಂಡಿದ್ದಾರೆ. ಅವರು ಕೇವಲ ಬಿಲ್ಲವ ಸಮಾಜದ ಸೊತ್ತಲ್ಲ. ಆಲಂಕಾರಿನ ಸಮಸ್ತ ಜನರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದ್ದಾರೆ ಎಂದರು.

ಇಡೀ ಸಮಾಜಕ್ಕೆ ನಷ್ಟ:
ಪ್ರಸ್ತಾವನೆಗೈದ ಆಲಂಕಾರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಯನ್.ಮುತ್ತಪ್ಪ ಪೂಜಾರಿ ನೈಯ್ಯಲ್ಗ ಅವರು, ಕೆ.ಚಂದ್ರಶೇಖರ ಪೂಜಾರಿಯವರ ಸಾವಿನ ಸುದ್ದಿ ಬರಸಿಡಿಲು ಬಡಿದಂತೆ ಆಗಿದ್ದು ಅದರಿಂದ ಇನ್ನೂ ಚೇತರಿಸಿಕೊಂಡಿಲ್ಲ. ಕೃಷಿ ಕುಟುಂಬದಿಂದ ಬೆಳೆದು ಬಂದ ಕೆ.ಚಂದ್ರಶೇಖರ ಪೂಜಾರಿಯವರು ಪ.ಪೂ.ಶಿಕ್ಷಣ ಪಡೆದು ಕಾರು ಚಾಲಕರಾಗಿ ಸೇವೆ ಆರಂಭಿಸಿದ್ದರು. ದೇವರ ಮೇಲೆ ಅಪಾರ ನಂಬಿಕೆ ಹೊಂದಿದ್ದ ಅವರಿಗೆ ಶರವೂರು ದೇವಸ್ಥಾನದ ಆಡಳಿತ ಮಂಡಳಿಯಲ್ಲಿ ಸೇವೆ ಸಲ್ಲಿಸುವ ಅವಕಾಶವೂ ಒದಗಿಬಂತು. ಬಿಲ್ಲವ ಸಂಘದಲ್ಲಿಯೂ ಸಕ್ರೀಯವಾಗಿ ತೊಡಗಿಕೊಂಡು, ಸಮಾಜದ ಬಡ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ ಆರಂಭಿಸಿರುವ ಕೀರ್ತಿ ಚಂದ್ರಶೇಖರ ಅವರಿಗೆ ಸಲ್ಲಬೇಕು. 2004ರಿಂದ 2019ರ ತನಕ ಆಲಂಕಾರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿದ್ದರು. 2005ರಲ್ಲಿ ಅವರು ಸಂಘದ ಅಧ್ಯಕ್ಷರಾಗಿದ್ದ ವೇಳೆ ಬ್ಯಾಂಕಿಂಗ್ ಸೇವೆಯೂ ಆರಂಭಗೊಂಡಿದ್ದು ಪ್ರತಿವರ್ಷವೂ ಲಾಭದಲ್ಲಿ ಮುನ್ನಡೆಯುತ್ತಿದೆ. ಶರವೂರು ದೇವಸ್ಥಾನದ ಜಾತ್ರೆ ಸಂದರ್ಭದಲ್ಲಿ ಅಲಂಕಾರ ಸಮಿತಿ ಮೂಲಕ ದೇವರ ಪೇಟೆ ಸವಾರಿಯನ್ನೂ ಚಂದಗಾಣಿಸಿಕೊಟ್ಟಿದ್ದಾರೆ. ದೇವಸ್ಥಾನದಲ್ಲಿ ಪ್ರತಿ ಶುಕ್ರವಾರ ಭಜನಾ ಸೇವೆ ಆರಂಭಿಸಲು ಪ್ರೇರಣೆ ನೀಡಿದ್ದಾರೆ. ಯಕ್ಷಗಾನದಲ್ಲೂ ಛಾಪು ಮೂಡಿಸಿದ್ದ ಅವರು ಸಾರ್ವಜನಿಕ ಚಟುವಟಿಕೆಗಳಲ್ಲಿ ಅಪಾರ ಕಾಳಜಿ ವಹಿಸುತ್ತಿದ್ದರು. ಅವರ ಅಗಲುವಿಕೆ ಕೇವಲ ಬಿಲ್ಲವ ಸಮುದಾಯಕ್ಕೆ ಮಾತ್ರವಲ್ಲ, ಸಮಾಜಕ್ಕೆ ನಷ್ಟವಾಗಿದೆ ಎಂದರು.
ದ.ಕ.ಜಿಲ್ಲಾ ಎಂಡೋ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ಪೀರ್ ಮಹಮ್ಮದ್ ಸಾಹೇಬ್ ಆಲಂಕಾರುರವರು ಮಾತನಾಡಿ, ಆಲಂಕಾರಿನಲ್ಲಿ ಯಾವುದೇ ಕಾರ್ಯಕ್ರಮವಿದ್ದರೂ ಚಂದ್ರಶೇಖರ ಅವರು ಮುಂಚೂಣಿಯಲ್ಲಿ ನಿಂತು ಮಾಡುತ್ತಿದ್ದರು. ಹಿಂದೆ ಶರವೂರು ದೇವರ ಆಲಂಕಾರು ಪೇಟೆ ಸವಾರಿ ಸಂದರ್ಭದಲ್ಲಿ ಪೇಟೆಯಲ್ಲಿ ಲೈಟಿಂಗ್ಸ್ ವ್ಯವಸ್ಥೆ ಇರಲಿಲ್ಲ. ಈ ಸಂದರ್ಭದಲ್ಲಿ ಹುಟ್ಟಿಕೊಂಡ ಅಲಂಕಾರ ಸಮಿತಿಯಲ್ಲಿ ಚಂದ್ರಶೇಖರ ಅವರ ಮಾರ್ಗದರ್ಶನದಲ್ಲಿ ಸಮಿತಿಯಲ್ಲಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುವ ಅವಕಾಶ ದೊರೆತಿತ್ತು ಎಂದು ನೆನಪಿಸಿಕೊಂಡರು. ಆಲಂಕಾರಿನಲ್ಲಿ ದ್ವಾರ ನಿರ್ಮಾಣಗೊಳ್ಳಬೇಕೆಂಬ ಕನಸ್ಸು ಚಂದ್ರಶೇಖರ ಅವರದ್ದಾಗಿತ್ತು. ಅವರು ಯಶಸ್ವಿ ಉದ್ಯಮಿಯಾಗಿ, ಕ್ರೀಯಾಶೀಲ ನಾಯಕನಾಗಿಯೂ ಬೆಳೆದಿದ್ದಾರೆ. ಕೆಎಂಸಿಗೆ ದೇಹದಾನ ಮಾಡಬೇಕೆಂದು 10 ವರ್ಷದ ಹಿಂದೆಯೇ ಅವರು ಕರಾರು ಮಾಡಿಕೊಂಡಿದ್ದರು. ಆದರೆ ಆತ್ಮಹತ್ಯೆ ಮಾಡಿಕೊಂಡಿರುವುದರಿಂದ ಅವರ ಈ ಕನಸು ಸಾಕಾರಗೊಂಡಿಲ್ಲ. ಚಂದ್ರಶೇಖರ ಅವರ ಹೆಸರು ಶಾಶ್ವತವಾಗಿ ಉಳಿಯಲು ಆಲಂಕಾರಿನಲ್ಲಿ ಅವರ ಹೆಸರಿನಲ್ಲಿ ಯಾವುದಾದರೊಂದು ಯೋಜನೆ ಹಾಕಿಕೊಳ್ಳಬೇಕೆಂದು ಪೀರ್ ಮಹಮ್ಮದ್ ಅವರು ಹೇಳಿದರು.
ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಮಾಜ ಸೇವಕ, ನೆಲ್ಯಾಡಿ ಗ್ರಾ.ಪಂ.ಮಾಜಿ ಅಧ್ಯಕ್ಷ ಗಂಗಾಧರ ಶೆಟ್ಟಿ ಹೊಸಮನೆ, ಕರ್ನಾಟಕ ಪತ್ರಕರ್ತರ ಸಂಘದ ಪುತ್ತೂರು ತಾಲೂಕು ಘಟಕದ ಮಾಜಿ ಅಧ್ಯಕ್ಷ ಸದಾಶಿವ ಶೆಟ್ಟಿ ಮಾರಂಗ, ಆಲಂಕಾರು ಸರಕಾರಿ ಉ.ಹಿ.ಪ್ರಾ.ಶಾಲಾ ಮುಖ್ಯ ಶಿಕ್ಷಕ ನಿಂಗರಾಜು ಕೆ.ಪಿ., ನೆಲ್ಯಾಡಿ ಕಾಮಧೇನು ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ಉಷಾ ಅಂಚನ್, ನೋಟರಿ ನ್ಯಾಯವಾದಿ ಸುಂದರ ಗೌಡ ಆಲಂಕಾರು ಅವರು ಮೃತರ ಗುಣಗಾನ ಮಾಡಿ ನುಡಿನಮನ ಸಲ್ಲಿಸಿದರು. ಮೃತ ಕೆ.ಚಂದ್ರ ಶೇಖರ ಅವರ ಪುತ್ರ ಗಣರಾಜ ಆಲಂಕಾರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿವಿಧ ಕ್ಷೇತ್ರಗಳ ಗಣ್ಯರು, ವರ್ತಕರು, ಬಿಲ್ಲವ ಸಂಘಟನೆಗಳ ಮುಖಂಡರು ಸೇರಿದಂತೆ ನೂರಾರು ಮಂದಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸದಾನಂದ ಪೂಜಾರಿ ಮಡ್ಯೊಟ್ಟು ಕಾರ್ಯಕ್ರಮ ನಿರೂಪಿಸಿದರು. ಆಲಂಕಾರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಲಿಂಗಪ್ಪ ಪೂಜಾರಿ ನೈಯ್ಯಲ್ಗ, ಸಹಾಯಕ ಕಾರ್ಯನಿರ್ವಾಹಣಾಧಿಕಾರಿ ಯೋಗೀಶ್‌ಕುಮಾರ್ ಅಗತ್ತಾಡಿ, ಶಾಖಾ ವ್ಯವಸ್ಥಾಪಕರು, ಸಿಬ್ಬಂದಿಗಳು, ನಿರ್ದೇಶಕರು, ಕಡಬ, ಕಲ್ಲುಗುಡ್ಡೆ, ನೆಟ್ಟಣ, ಕೊಲ ಶಾಖಾ ಸಲಹಾ ಸಮಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಸಹಕರಿಸಿದರು.

ಯಕ್ಷಗಾನ ಹಾಡಿನ ಮೂಲಕ ನುಡಿನಮನ:


ಕು.ಶ್ರೇಯಾ ಆಲಂಕಾರು ಅವರು ಕೆ.ಚಂದ್ರಶೇಖರ ಆಲಂಕಾರು ಅವರ ಕುರಿತು ಯಕ್ಷಗಾನ ಹಾಡು ಹಾಡುವ ಮೂಲಕ ನುಡಿನಮನ ಸಲ್ಲಿಸಿದರು. ಮೋಹನ ಶರವೂರು ಮದ್ದಳೆಯಲ್ಲಿ ಸಹಕರಿಸಿದರು. ಕಾರ್ಯಕ್ರಮದ ಆರಂಭದಲ್ಲಿ 1 ನಿಮಿಷ ಮೌನ ಪ್ರಾರ್ಥನೆ ಮೂಲಕ ಮೃತ ಚಂದ್ರಶೇಖರ ಅವರ ಆತ್ಮಕ್ಕೆ ಚಿರಶಾಂತಿ ಕೋರಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಕಾರ್ಯಕ್ರಮದ ಕೊನೆಯಲ್ಲಿ ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ನಮನ ಸಲ್ಲಿಸಲಾಯಿತು. ಆಲಂಕಾರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ಸ್ಥಾಪಕ ನಿರ್ದೇಶಕ ಬಿ.ಕೆ.ಸುಂದರ ಪೂಜಾರಿ ಆಲಂಕಾರು ಅವರು ಮೃತರ ಭಾವಚಿತ್ರದ ಮುಂದೆ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

LEAVE A REPLY

Please enter your comment!
Please enter your name here