ನಿಡ್ಪಳ್ಳಿ: ಪಾಣಾಜೆ ಸುಬೋಧ ಪ್ರೌಢಶಾಲೆ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ಪಡೆದ ಹಿನ್ನೆಲೆಯಲ್ಲಿ ಶಾಲೆಗೆ ಕೀರ್ತಿ ತಂದ ವಿದ್ಯಾರ್ಥಿಗಳನ್ನು, ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿಯವರನ್ನು ಆಡಳಿತ ಮಂಡಳಿ ವತಿಯಿಂದ ಜೂ.3 ರಂದು ಅಭಿನಂದಿಸಲಾಯಿತು.
ಮಕ್ಕಳಲ್ಲಿ ಗುರಿ, ಪರಿಶ್ರಮ ಅಗತ್ಯ- ಸಂತೋಷ್ ಕುಮಾರ್ ರೈ
ಅಭಿನಂದನಾ ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮೊಕ್ತೇಸರರು, ಉದ್ಯಮಿ, ಕೊಡುಗೈದಾನಿಗಳಾದ ಸಂತೋಷ್ ಕುಮಾರ್ ರೈ ನಳೀಲು ಮಾತನಾಡಿ ಮಕ್ಕಳ ಕಲಿಕೆಯಲ್ಲಿ ಒಂದು ನಿರ್ದಿಷ್ಟ ಗುರಿ ಹಾಗೂ ಸಾಧಿಸುವ ಛಲ ಇರಬೇಕು. ಅದಕ್ಕೆ ಒಳ್ಳೆಯ ಪರಿಶ್ರಮ ಅಗತ್ಯವಿದ್ದು ಅದರಿಂದ ಯಶಸ್ಸು ಗಳಿಸಲು ಸಾಧ್ಯ ಎಂದು ಹೇಳಿದರು. ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸಿ ಸಮಾಜದಲ್ಲಿ ಜವಾಬ್ದಾರಿಯುತ ಪ್ರಜೆಗಳಾಗಿ ಬಾಳುವಂತೆ ಶುಭ ಹಾರೈಸಿದರು.
ಸುಬೋಧ ಪ್ರೌಢಶಾಲೆ ಪ್ರತಿಷ್ಠಿತ ವಿದ್ಯಾ ಸಂಸ್ಥೆ-ಭಾರತಿ ಭಟ್
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪಾಣಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಭಾರತಿ ಭಟ್ ಮಾತನಾಡಿ ಸುಬೋಧ ಪ್ರೌಢಶಾಲೆ ನಮ್ಮ ಗ್ರಾಮದ ಒಂದು ಪ್ರತಿಷ್ಠಿತ ವಿದ್ಯಾ ಸಂಸ್ಥೆಯಾಗಿದೆ. ಮಕ್ಕಳನ್ನು ದೂರದ ಶಾಲೆಗಳಿಗೆ ವಿದ್ಯಾಭ್ಯಾಸಕ್ಕೆ ಕಳಿಸುವ ಬದಲು ಈ ಶಾಲೆಯಲ್ಲಿ ದಾಖಲಾತಿ ಮಾಡಬೇಕು ಎಂದು ಹೆತ್ತವರಿಗೆ ಕರೆ ನೀಡಿದರು. ಶಾಲೆಗೆ ಕೀರ್ತಿ ತಂದ ಎಲ್ಲಾ ವಿದ್ಯಾರ್ಥಿಗಳನ್ನು ಅಭಿನಂದಿಸಿ ಮುಂದಿನ ವಿದ್ಯಾಭ್ಯಾಸದಲ್ಲಿ ಇನ್ನೂ ಹೆಚ್ಚಿನ ಯಶಸ್ಸನ್ನು ಗಳಿಸಿ ಈ ಶಾಲೆ ಇನ್ನಷ್ಟು ಅಭಿವೃದ್ಧಿ ಹೊಂದಿ ಮುಂದೆ ಪ್ರತಿ ವರ್ಷ ಇದೇ ಫಲಿತಾಂಶ ಪಡೆಯಲಿ ಎಂದು ಶುಭ ಹಾರೈಸಿದರು.
ಎಸ್ ಎಸ್ ಎಲ್ ಸಿ ಯಲ್ಲಿ ತೇರ್ಗಡೆಯಾದ ಎಲ್ಲಾ ಮಕ್ಕಳಿಗೆ, ಶಿಕ್ಷಕರಿಗೆ ಹಾಗೂ ಶಿಕ್ಷಕೇತರ ಸಿಬ್ಬಂದಿ ವರ್ಗದವರಿಗೆ ಉಡುಗೊರೆ, ಸ್ಮರಣಿಕೆ ಹಾಗೂ ನಗದು ಬಹುಮಾನ ನೀಡಿ ಗೌರವಿಸಲಾಯಿತು. ಆಡಳಿತ ಮಂಡಳಿ ಸದಸ್ಯರಾದ ವಿದ್ಯಾ ಮಣ್ಣಂಗಳ ಅವರು ತಮ್ಮ ವೈಯಕ್ತಿಕ ನೆಲೆಯಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೆ ಹಾಗೂ ಸಿಬ್ಬಂದಿ ವರ್ಗದವರಿಗೆ ನಗದು ಬಹುಮಾನ ನೀಡಿ ಗೌರವಿಸಿದರು.
ವಿದ್ಯಾರ್ಥಿಗಳಾದ ಅರ್ಪಿತ ಪಿ, ತನುಶ್ರೀ ಕೆ, ಮಹಮ್ಮದ್ ಔಫ್ ಮತ್ತು ಪ್ರದೀಪ್ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು. ಸ್ಥಾಪಕ ಮುಖ್ಯೋಪಾಧ್ಯಾಯರಾದ ಪಿಲಿಂಗಲ್ಲು ಕೃಷ್ಣ ಭಟ್, ನಿವೃತ್ತ ಮುಖ್ಯ ಶಿಕ್ಷಕರಾದ ಮೊಳಕ್ಕಾಲು ಶ್ರೀಕೃಷ್ಣ ಭಟ್, ಪಾಣಾಜೆ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಉಪೇಂದ್ರ ಬಲ್ಯಾಯ ದೇವಸ್ಯ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ರವೀಂದ್ರ ಭಂಡಾರಿ ಹಾಗೂ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಜಯಶ್ರೀ ದೇವಸ್ಯ ಶುಭಾಶಂಸನೆಗೈದರು.
ಶಾಲಾ ಸಂಚಾಲಕರಾದ ಗಿಳಿಯಾಲು ಮಹಾಬಲೇಶ್ವರ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ ಶೇ.100 ಫಲಿತಾಂಶಕ್ಕೆ ಕಾರಣಕರ್ತರಾದ ಎಲ್ಲಾ ವಿದ್ಯಾರ್ಥಿಗಳನ್ನು ಹಾಗೂ ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿಯವರನ್ನು ಅಭಿನಂದಿಸಿ ವಿದ್ಯಾರ್ಥಿಗಳ ಮುಂದಿನ ಭವಿಷ್ಯಕ್ಕೆ ಶುಭ ಹಾರೈಸಿ ಸ್ವಾಗತಿಸಿದರು. ಶಾಲಾ ವಿದ್ಯಾರ್ಥಿಗಳಾದ ಗ್ರೀಷ್ಮ , ಚೈತನ್ಯ ಮತ್ತು ದೀಪಿಕಾ ಪ್ರಾರ್ಥಿಸಿ ಮುಖ್ಯ ಶಿಕ್ಷಕ ಶ್ರೀಪತಿ ಭಟ್ ಐ ವಂದಿಸಿದರು. ಸಹಶಿಕ್ಷಕಿ ನಿರ್ಮಲಾ.ಕೆ ಕಾರ್ಯಕ್ರಮ ನಿರೂಪಿಸಿದರು. ಪಾಣಾಜೆ ವಿದ್ಯಾವರ್ಧಕ ಸಂಘದ ಸದಸ್ಯರು, ಶಿಕ್ಷಕರು ಮಕ್ಕಳ ಹೆತ್ತವರು ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವರದರಾಜ ನಾಯಕ್ ರಿಂದ ನಗದು ಬಹುಮಾನ ವಿತರಣೆ
ಆರ್ಲಪದವು ಸ್ನೇಹಾ ಜನರಲ್ ಸ್ಟೋರ್ ನ ಮಾಲಕ ವರದರಾಜ ನಾಯಕ್ ಅವರ ಅಪೇಕ್ಷೆಯಂತೆ ಶಾಲೆಗೆ ಪ್ರಥಮ ಸ್ಥಾನಿಯಾದ ಅರ್ಪಿತ ಪಿ ರಿಗೆ ರೂ. 3000, ದ್ವಿತೀಯ ಸ್ಥಾನಿಯಾದ ಅನುಶ್ರೀ ರಿಗೆ ರೂ. 2000, ಮೂರು ಮತ್ತು ನಾಲ್ಕನೇ ಸ್ಥಾನ ಗಳಿಸಿದ ಚೇತನ್ ಕುಮಾರ್ ಮತ್ತು ಕೀರ್ತನ ಅವರಿಗೆ ತಲಾ 1000 ಹಾಗೂ ಉಳಿದ ಎಲ್ಲಾ ವಿದ್ಯಾರ್ಥಿಗಳಿಗೆ ರೂ.500/-ರಂತೆ ನಗದು ಬಹುಮಾನ ನೀಡಿ ಗೌರವಿಸಿದರು.