ನಮ್ಮ ಪರಿಸರ, ನಮ್ಮ ಆರೋಗ್ಯ

0

ಪರಿಸರ ರಕ್ಷಣೆಯಿಂದ ಆರೋಗ್ಯ ಭಾಗ್ಯ!

ಡಾ. ಎಸ್.ಎನ್. ಅಮೃತ ಮಲ್ಲ
9482041307

’ವಿಶ್ವ ಪರಿಸರ ದಿನಾಚರಣೆ’ಯನ್ನು ವಿಶ್ವದೆಲ್ಲೆಡೆ ಜೂನ್ 5ರಂದು ಸರಕಾರ-ಸಾರ್ವಜನಿಕರು ಜೊತೆಗೂಡಿ ಆಚರಿಸುವುದಿದೆ. ಕೇವಲ ವನಮಹೋತ್ಸವ ಆಚರಣೆ ಮಾಡಿ, ಸಸಿಗಳನ್ನು ನೆಟ್ಟರೆ ಸಾಲದು. ಕನಿಷ್ಠ 3-4 ವರ್ಷಗಳ ಕಾಲಾವಧಿಯಲ್ಲಿ ಆ ಸಸಿಗಳಿಗೆ ನೀರುಣಿಸಿ, ಪೋಷಿಸಿ, ರಕ್ಷಿಸಿದಾಗ ಸಸಿಗಳು ಮರವಾಗಿ ಬೆಳೆಯಬಲ್ಲದು. ವೇದಿಕೆಗಳಲ್ಲಿ ಪರಿಸರ ಸಂರಕ್ಷಣೆ ಬಗ್ಗೆ ಭಾಷಣ ಮಾಡುವುದರಿಂದ ಗಿಡಗಳು ಬೆಳೆಯಲಾರವು! ಪರಿಸರ ಕಾಳಜಿ ಎಂದಾಗ ಕೇವಲ ಗಿಡ ನೆಡುವುದೆಂಬ ಭಾವನೆ ತಳೆಯುವುದು ತಪ್ಪು. ಕಳೆದ 50 ವರ್ಷಗಳಿಂದೀಚೆಗೆ ಪರಿಸರ ಸಂರಕ್ಷಣೆಯ ಕುರಿತು ದಿನನಿತ್ಯ ಹಲವು ವಿಧಗಳು ಕಾರ್ಯಕ್ರಮಗಳು ಆಯೋಜಿಸಲ್ಪಡುತ್ತದೆ. ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕದಲ್ಲಿ ಪ್ರಕೃತಿ, ಪರಿಸರ ಸಂರಕ್ಷಣೆಯ ವಿವರಗಳನ್ನು ವರ್ಣಿಸಲಾಗಿದೆ. ಸರಕಾರದ ವಿವಿಧ ಇಲಾಖೆಗಳೂ ಪರಿಸರ ಸಂರಕ್ಷಣೆಗೆ ಪೂರಕವಾಗಿ ಕಾರ್ಯನಿರ್ವಹಿಸಬೇಕಾಗಿ ನೀತಿನಿಯಮಾವಳಿಗಳು ರೂಪಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ‘ಕಾಗದ ರಹಿತ’ ಬ್ಯಾಂಕ್, ಕಚೇರಿ ವ್ಯವಹಾರದಿಂದಾಗಿ ಲಕ್ಷಾಂತರ ಟಿನ್ ಕಾಗದದ ಉಳಿತಾಯ ಆಗುತ್ತಿದೆ. ಕಾಗದದ ತಯಾರಿಕೆಗೆ ಅನಿವಾರ್ಯವಾಗಿರುವ ಮರಗಳನ್ನು ಉಳಿಸಿದಂತಾಗುತ್ತದೆಯಲ್ಲವೇ?
’ಪರಿಸರ ಸಂರಕ್ಷಣೆ’ ಕುರಿತು ನಮ್ಮ ದೇಶದಲ್ಲಿ ಹಿಂದಿನಿಂದಲೂ ಪೂರ್ವಜರು ಕಾಳಜಿ ವಹಿಸಿದ್ದರೆಂದು ದಾಖಲೆಗಳಿವೆ. ಮಳೆಗಾಲದ ಆರಂಭದಲ್ಲಿ ಹೊಸ ಗಿಡಗಳನ್ನು ನಾಟಿ ಮಾಡುವುದು, ಕಾಡು ಪ್ರದೇಶಗಳಲ್ಲಿ ಮಾವು, ಹುಣಸೆ, ಹಲಸು, ಹೆಬ್ಬಲಸು, ನೇರಳೆ ಪುನರ್ಪುಳಿ, ಧೂಪ ಮುಂತಾದ ಬೀಜ ಬಿತ್ತನೆ ಮಾಡುತ್ತಿದ್ದರು!

ಪ್ರಕೃತಿಯ ಆರಾಧನೆ: ಪೂರ್ವಜರು ಪ್ರಕೃತಿಯ ಆರಾಧಕರಾಗಿದ್ದರಿಂದ ಇವತ್ತು ಅರಣ್ಯ ಪ್ರದೇಶಗಳನ್ನು ಕಾಣಬಹುದು. ವನ್ಯ ಜೀವಿ ಪ್ರಾಣಿ, ಪಕ್ಷಿ, ಉರಗ ಸಂಕುಲ ವಿಹರಿಸುವ ತಾಣವಾಗಿದೆ. ಪರಿಸರಕ್ಕೆ ಹಾನಿಯುಂಟು ಮಾಡದೇ ಸಂರಕ್ಷಿಸುವ ಹೊಣೆಗಾರಿಕೆ ಬಳುವಳಿಯಾಗಿ ಬಂದಿದೆ. ವಿಪರ್ಯಾಸವೆಂದರೆ ಆಧುನಿಕ ಜೀವನ ಶೈಲಿಗಾಗಿ ನೂತನ ಮನೆ, ವಾಣಿಜ್ಯ ಸಂಕೀರ್ಣ, ವಸತಿ ಸಮುಚ್ಛಯದ ಹೊಸ ವಿನ್ಯಾಸಕ್ಕೆ ಮಾರುಹೋಗಿ 100-200 ವರ್ಷಗಳ ಅಪರೂಪದ ಮರಗಳನ್ನು ಕಡಿದು ಉರುಳಿಸಲಾಗುತ್ತಿದೆ. ಕಡಿದು ಉರುಳಿಸಿದ ಮರ ಅದೆಷ್ಟೋ ಜೀವವೈವಿಧ್ಯಗಳ ಆಶ್ರಯ ತಾಣವಾಗಿತ್ತೆನ್ನುವುದನ್ನು ಇಂದಿನ ವಿದ್ಯಾರ್ಥಿ ಸಮುದಾಯದವರಿಗೆ ತಿಳಿಹೇಳಬೇಕಾಗಿದೆ.

ಇಂದಿನ ವಿದ್ಯಾರ್ಥಿಗಳಿಗೆ ಪರಿಸರ ಸಂರಕ್ಷಣೆ ಕುರಿತು ವಿವರಿಸುವಾಗ ಪರಿಸರ ಮಾಲಿನ್ಯ ಮತ್ತು ತಡೆಗಟ್ಟುವ ವಿಧಾನಗಳನ್ನು ಹೇಳಲಾಗುತ್ತದೆ. ಕಳೆದುಕೊಂಡ ಅಮೂಲ್ಯ ವನಸಂಪತ್ತು, ಭೂಮಿಯ ಮಣ್ಣಿನ ಸವಕಳಿ, ಜೀವವೈವಿಧ್ಯತೆಯ ವಿನಾಶದ ಕುರಿತು ಅವಲೋಕಿಸುತ್ತಿಲ್ಲ. ಶಬ್ದ ಮಾಲಿನ್ಯ, ಜಲಮಾಲಿನ್ಯ, ವಾಯು ಮಾಲಿನ್ಯ, ತಡೆಗಟ್ಟಲು ಕೈಗೊಳ್ಳಬಹುದಾದ ಪರ್ಯಾಯ ನಿಯಮ ಪಾಲನೆ ಬಗ್ಗೆ ಪ್ರಸ್ತುತಪಡಿಸಲಾಗುತ್ತಿದೆ. ನಿಜವಾಗಿ ಮೂಲಸ್ವರೂಪದ ಪ್ರಕೃತಿಯನ್ನು ಕಾಪಾಡುವುದರಿಂದ ಪ್ರಾಕೃತಿಕ ಸಮತೋಲನ ಕಾಪಾಡಿದಂತಾಗುತ್ತದೆ. ನದಿ ನೀರಿನ ಮಾಲಿನ್ಯ ಕಂಡಾಗ ನಾವು ಬಿಸಾಡುವ ತ್ಯಾಜ್ಯ, ಪ್ಲಾಸ್ಟಿಕ್ ಚೀಲಗಳು, ಆಟಿಕೆಗಳು ವಿಷಕಾರಿ ವಸ್ತುಗಳು ನದಿಯ ಒಡಲನ್ನು ಹಾಳು ಮಾಡುತ್ತಿದೆ ಎಂಬುದು ಅರ್ಥವಾದೀತು. ನಾವು ಬಳಸುವ ವಸ್ತುಗಳು ಪ್ರಕೃತಿಯನ್ನು ಕಿಂಚಿತ್ತೂ ಹಾಳು ಮಾಡದಂತಾದರೆ ಅದೊಂದು ಪರಿಸರ ರಕ್ಷಣೆಯ ಮಹತ್ವದ ಅಂಗವಾಗುತ್ತದೆ.

ಪರಿಸರ ಪರಂಪರೆ ಉಳಿಸಿ : ನಿತ್ಯ ಜನಜೀವನದಲ್ಲಿ ತ್ಯಾಜ್ಯ ಸಂಗ್ರಾಹಕರು ಮನೆ ಬಾಗಿಲಿಗೆ ಬರುತ್ತಾರೆ. ಎಷ್ಟೋ ನಿರುಪಯುಕ್ತ ವಸ್ತುಗಳನ್ನು ‘ತ್ಯಾಜ್ಯ’ ವೆಂದೇ ಪರಿಗಣಿಸಲಾಗಿದೆ. ಆದರೆ ಮನೆ ಬಳಕೆಗೆ ಮಾಡುವ ವಸ್ತುಗಳನ್ನು ಬಳಸಿದಾಗ ‘ತ್ಯಾಜ್ಯ’ ಇರದು. ತ್ಯಾಜ್ಯದ ವಿಲೇವಾರಿ ಕಷ್ಟಕರ ಮತ್ತು ದುಷ್ಟರಿಣಾಮ ಬೀರುತ್ತದೆ.
ಆರೋಗ್ಯ ರಕ್ಷಣೆಯ ಕುರಿತು ಜನ ಜಾಗೃತಿ ಕೋವಿಡ್-19 ಸಾಂಕ್ರಾಮಿಕ ಪಿಡುಗು ಆವರಿಸಿದಾಗ ವಿಶ್ವದೆಲ್ಲೆಡೆ ಸ್ವಚ್ಛತೆಯ ಬಗ್ಗೆ ಮನವರಿಕೆಯಾಯಿತು. ಸರಕಾರ, ಸಾರ್ವಜನಿಕ ಸ್ವಯಂ-ಸೇವಾ ಸಂಘಗಳು, ಸಾಮಾಜಿಕ ಸೇವಾ ಕಾರ್ಯಕರ್ತರು ಮನೆ-ಮನೆಯಂಗಳ ರಸ್ತೆ, ವಠಾರ ಸ್ವಚ್ಛವಾಗಿರಿಸಲು ತಳಸ್ತರದಿಂದ ಹಲವಾರು ಜಾಗೃತಿ ಅಭಿನಯ ಯಶಸ್ವಿಯಾಯಿತು. ಪ್ರಧಾನಿ ನರೇಂದ್ರ ಮೋದಿಯವರು ರಾಷ್ಟ್ರಪಿತ ಮಹಾತ್ಮಾ ಗಾಂಽಜಿಯವರು ಸಾರಿದ ಸಂದೇಶವನ್ನು ಪುನರ್ ದೇಶದಲ್ಲಿ ಪ್ರಸಾರ ಮಾಡಿದರು. ‘ಸ್ವಚ್ಛ ಭಾರತ- ಸ್ವಚ್ಛ ಭಾರತ’ ಪರಿಕಲ್ಪನೆ ರಾಷ್ಟ್ರವ್ಯಾಪಿ ನವಸ್ಪರ್ಶ ನೀಡಿತು. ಅದರಂತೆ ಅಭಿವೃದ್ಧಿ ಯೋಜನೆಗಳಿಂದಾಗಿ ಮರಗಳನ್ನು ಕಡಿದರೂ, ಪರ್ಯಾಯವಾಗಿ ಗಿಡಗಳನ್ನು ನೆಟ್ಟು ಪ್ರಕೃತಿಯ ಜೀರ್ಣೋದ್ಧಾರ ಕಾರ್ಯವಾಗಲು ಕರೆ ನೀಡಿದರು.
ಭಾರತದಲ್ಲಿ ಪರಿಸರ ಜಾಗೃತಿಯ ಅಭಿಯಾನ ವಿಶ್ವ ಇತರ ರಾಷ್ಟ್ರಗಳ ಗಮನ ಸೆಳೆದಿದೆ. ಪರಿಸರ ಸಂರಕ್ಷಣೆಯ ನಾನಾ ವಿವಿಧ ಯೋಜನೆಗಳು, ಕಾರ್ಯಕ್ರಮಗಳು ಸಾಮಾಜಿಕ ಆರೋಗ್ಯ ರಕ್ಷಣೆಯ ತಳಹದಿಯಾಗಿದೆ.

ಜಾಲ್ಸೂರು ಕನಕಮಜಲಿನ ಪಂಜಿಕಲ್ಲು ಎಂಬಲ್ಲಿ ಪುತ್ತೂರು ವಲಯ ಅರಣ್ಯ ಇಲಾಖೆಯ ಸಸ್ಯಪಾಲನಾ ಕ್ಷೇತ್ರದಲ್ಲಿ 55 ಸಾವಿರ ವಿವಿಧ ಪ್ರಭೇದಗಳ ಗಿಡಗಳು ಸಾರ್ವಜನಿಕ ವಿತರಣೆಗೆ ಸಿದ್ಧವಾಗಿವೆ. 1.38 ಲಕ್ಷ ಗಿಡಗಳನ್ನು ಅರಣೀಕರಣಕ್ಕೆ ಅರಣ್ಯ ಇಲಾಖೆ ಬಳಸುತ್ತಿದೆ. ಕೆ. ಅಣ್ಣು (ನಿರ್ವಾಹಕ): 9483242693, ಸಂಜಯ್ ಎಚ್.ನಾಯ್ಕ್ ಉಪವಲಯ ಅರಣ್ಯಾಧಿಕಾರಿ-9481279091 ಅವರನ್ನು ಸಂಪರ್ಕಿಸಬಹುದು.

LEAVE A REPLY

Please enter your comment!
Please enter your name here