ಉಪ್ಪಿನಂಗಡಿ: ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕೆ.ಎಸ್. ಹೆಗ್ಡೆ ಮೆಡಿಕಲ್ ಕಾಲೇಜಿನ ಪಿ.ಜಿ. (ಪೋಸ್ಟ್ ಗ್ರಾಜ್ಯುವೆಟ್) ಎರಡನೇ ವರ್ಷದ 13 ವೈದ್ಯರ ಸೇವೆ ಲಭ್ಯವಿದ್ದು, ಅದರಲ್ಲಿ 10 ಮಂದಿ ವೈದ್ಯರು ಹಗಲು ಕರ್ತವ್ಯದಲ್ಲಿ ಹಾಗೂ 3 ಮಂದಿ ವೈದ್ಯರು ರಾತ್ರಿ ಪಾಳಿಯಲ್ಲಿ ಮತ್ತು ರಜಾ ದಿನಗಳಲ್ಲಿ ಲಭ್ಯರಿರುತ್ತಾರೆ.
ಅಲ್ಲದೇ, ಪ್ರತಿ ತಿಂಗಳ ನಾಲ್ಕನೇ ಶುಕ್ರವಾರ ಮನೋ ರೋಗ ತಜ್ಞರು ಬೆಳಗ್ಗೆ 9 ರಿಂದ ಮಧ್ಯಾಹ್ನ 1ರವರೆಗೆ ಸೇವೆ ನೀಡಲು ಲಭ್ಯರಿರುತ್ತಾರೆ ಹಾಗೂ ಪ್ರತಿ ತಿಂಗಳ ಮೂರನೇ ಮಂಗಳವಾರ ಎಂಡೋ ಸಂತ್ರಸ್ತರಿಗಾಗಿ ವಿಶೇಷ ವೈದ್ಯಕೀಯ ಶಿಬಿರ ಇದ್ದು, ಈ ಸಂದರ್ಭ ಯೆನೆಪೋಯ ಆಸ್ಪತ್ರೆಯಿಂದ ನುರಿತ ಎಲುಬು ತಜ್ಞರು, ಮಕ್ಕಳ ತಜ್ಞರು, ಮನೋರೋಗ ತಜ್ಞರು ಹಾಗೂ ವೈದ್ಯಕೀಯ ತಜ್ಞರು ಸೇವೆಗೆ ಲಭ್ಯರಿರುತ್ತಾರೆ. ಈ ಶಿಬಿರದಲ್ಲಿ ಎಂಡೋ ಸಂತ್ರಸ್ತರಲ್ಲದೆ, ಎಲ್ಲಾ ರೋಗಿಗಳು ಭಾಗವಹಿಸಿ ಅಗತ್ಯವಿರುವ ತಜ್ಞ ವೈದ್ಯರನ್ನು ಭೇಟಿಯಾಗಬಹುದು. ಇದರೊಂದಿಗೆ ಈ ಆರೋಗ್ಯ ಕೇಂದ್ರದಲ್ಲಿ ಓರ್ವ ಮಕ್ಕಳ ತಜ್ಞರು ಹಾಗೂ ಓರ್ವ ದಂತ ವೈದ್ಯಕೀಯ ತಜ್ಞರು ಖಾಯಂ ನೆಲೆಯಲ್ಲಿ ಕರ್ತವ್ಯದಲ್ಲಿರುತ್ತಾರೆ ಎಂದು ಸಮುದಾಯ ಆರೋಗ್ಯ ಕೇಂದ್ರದ ಆಡಳಿತಾಧಿಕಾರಿಯವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.