ನೆಲ್ಯಾಡಿ: ಮೇ.29 ರಂದು ನಿಧನರಾದ ಕೊಣಾಲು-ಆರ್ಲ ಹಾ.ಉ.ಮಹಿಳಾ ಸಹಕಾರ ಸಂಘದ ನಿರ್ದೇಶಕಿ, ಗೋಳಿತ್ತೊಟ್ಟು ಗ್ರಾ.ಪಂ.ಮಾಜಿ ಸದಸ್ಯೆ, ಪುತ್ತೂರು ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ನೆಲ್ಯಾಡಿ ಶಾಖಾ ಸಲಹಾ ಸಮಿತಿ ಸದಸ್ಯೆ, ಕೊಣಾಲು ಗ್ರಾಮದ ಹೊಸಮನೆ ಮಹಾಲಕ್ಷ್ಮೀ ನಿಲಯದ ಶ್ರೀಮತಿ ಲೀಲಾವತಿ ಅವರಿಗೆ ಶ್ರದ್ಧಾಂಜಲಿ ಹಾಗೂ ಉತ್ತರಕ್ರಿಯೆ ಜೂ.8 ರಂದು ಕೊಣಾಲು ಹೊಸಮನೆಯಲ್ಲಿ ನಡೆಯಿತು.
ಜನಾರ್ದನ ಗೌಡ ಕೆಳೆಂಜಿರೋಡಿ ಅವರು ನುಡಿನಮನ ಸಲ್ಲಿಸಿ, ಬೆಳ್ತಂಗಡಿ ತಾಲೂಕಿನ ಪ್ರತಿಷ್ಠಿತ ಮಠ ಕುಟುಂಬದಲ್ಲಿ ಜನಿಸಿದ ಲೀಲಾವತಿಯರು ಹೊಸಮನೆ ಪ್ರಭಾನಂದ ಅವರ ಕೈ ಹಿಡಿದು ಬಂದು ಸಾಂಸಾರಿಕ ಜೀವನವನ್ನೂ ಉತ್ತಮವಾಗಿ ಸಾಗಿಸಿದ್ದಾರೆ. ಮಕ್ಕಳಿಗೂ ಬದುಕಿನ ನೆಲಗಟ್ಟು ಕಲ್ಪಿಸಿದ್ದಾರೆ. ಅವರು ಧರ್ಮಾಚರಣೆ, ಸಂಪ್ರದಾಯದಲ್ಲಿ ಬದುಕಿದವರು. ಸಾಮಾಜಿಕ ಚಟುವಟಿಕೆಗಳ ಮೂಲಕ ಸಮಾಜದಲ್ಲೂ ಗುರುತಿಸಿಕೊಂಡಿದ್ದರು. ಅಕಾಲಿಕವಾಗಿ ಅಗಲಿದ ಅವರ ಆತ್ಮಕ್ಕೆ ಭಗವಂತ ಚಿರಶಾಂತಿ ಕರುಣಿಸಲಿ ಎಂದು ಪ್ರಾರ್ಥಿಸಿದರು. ಲಕ್ಷ್ಮೀನಾರಾಯಣ ಗೌಡ ಐವರ್ನಾಡು ಮಾತನಾಡಿ, ಮೃತ ಲೀಲಾವತಿಯವರು ಎಲ್ಲರಿಗೂ ನಗುಮೊಗದ ಆತಿಥ್ಯ ನೀಡುತ್ತಿದ್ದರು. ಅವರು ತಮ್ಮ ಹುಟ್ಟು-ಸಾವಿನ ಮಧ್ಯದ ಪ್ರಯಾಣವನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಯಾರಿಗೂ ನೋವು ಕೊಟ್ಟವರಲ್ಲ, ಇನ್ನೊಬ್ಬರ ಸಂತೋಷದಲ್ಲೂ ಸಂಭ್ರಮಿಸುವ ಗುಣ ಹೊಂದಿದ್ದರು. ತನಗೆ ಬಂದ ಕಷ್ಟ ನೋವನ್ನು ಯಾರ ಮುಂದೆಯೂ ತೋರಿಸುತ್ತಿರಲಿಲ್ಲ. ತನ್ನಲ್ಲಿನ ಸನ್ನಡತೆಯನ್ನು ಮಕ್ಕಳಿಗೂ ಧಾರೆ ಎರೆದಿದ್ದಾರೆ ಎಂದರು.
ಜಿ.ಪಂ.ಮಾಜಿ ಸದಸ್ಯ ಸರ್ವೋತ್ತಮ ಗೌಡ, ಕೊಣಾಲು ಆರ್ಲ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ಉಷಾ ಅಂಚನ್, ಉದ್ಯಮಿ ಕೆ.ಪಿ.ತೋಮಸ್, ತಾ.ಪಂ.ಮಾಜಿ ಸದಸ್ಯೆ ತೇಜಸ್ವಿನಿಶೇಖರ ಗೌಡ ಕಟ್ಟಪುಣಿ, ಗೋಳಿತ್ತೊಟ್ಟು ಗ್ರಾ.ಪಂ.ಅಧ್ಯಕ್ಷ ಜನಾರ್ದನ ಗೌಡ ಪಟೇರಿ, ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಧಾಕರ ಕೆ., ರಾಧಾಕೃಷ್ಣ ಕೆರ್ನಡ್ಕ, ಸುಂದರ ಗೌಡ ಅತ್ರಿಜಾಲು, ವಾರಿಜಾಕ್ಷಿ, ಅಝೀಝ್ ಕೋಲ್ಪೆ, ಪ್ರಜಲ, ಇಸ್ಮಾಯಿಲ್ ಕೋಲ್ಪೆ ಸೇರಿದಂತೆ ಮೃತರ ಕುಟುಂಬಸ್ಥರು, ಬಂಧುಮಿತ್ರರು, ಗ್ರಾಮಸ್ಥರು ಆಗಮಿಸಿ ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಮನ ಸಲ್ಲಿಸಿದರು. ರವಿಚಂದ್ರ ಹೊಸವಕ್ಲು ನಿರೂಪಿಸಿದರು. 1 ನಿಮಿಷ ಮೌನ ಪ್ರಾರ್ಥನೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಮೃತ ಲೀಲಾವತಿಯವರ ಪತಿ ಎಚ್.ಪ್ರಭಾನಂದ ಗೌಡ, ಪುತ್ರ ಕಿರಣ್, ಸೊಸೆ ಚಿಂತನಾ, ಪುತ್ರಿಯರಾದ ರಶ್ಮಿ, ಪುನೀತ, ಪ್ರತಿಭಾ, ಅಳಿಯಂದಿರಾದ ದಿನೇಶ್ ದೇವಸ್ಯ, ಸಂತೋಷ್ ಸವಣಾಲು ಹಾಗೂ ಕುಟುಂಬಸ್ಥರು ಸಹಕರಿಸಿದರು.