ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಳಕ್ಕೆ ಜಮೀನು ಖರೀದಿಸಲು ಮಂಜೂರಾತಿಗೆ ಮುಜರಾಯಿ ಖಾತೆ ಸಚಿವರಿಗೆ ಶಾಸಕ ಅಶೋಕ್ ಕುಮಾರ್ ರೈ ಮನವಿ

0

ಪುತ್ತೂರು: ಉಪ್ಪಿನಂಗಡಿಯ ಪ್ರಸಿದ್ದ ಶ್ರೀ ಸಹಸ್ರಲಿಂಗೇಶ್ವರ ದೇವಳದ ಉಪಯೋಗಕ್ಕೆ ಖಾಸಗಿ ಜಮೀನು ಖರೀದಿಸಲು ಮುಜರಾಯಿ ಇಲಾಖೆಯಿಂದ ಮಂಜೂರಾತಿ ನೀಡುವಂತೆ ಆಗ್ರಹಿಸಿ ಪುತ್ತೂರು ಶಾಸಕ ಅಶೋಕ್‌ ಕುಮಾರ್ ರೈಯವರು ರಾಜ್ಯ ಮುಜರಾಯಿ ಖಾತೆ ಸಚಿವ ರಾಮಲಿಂಗಾರೆಡ್ಡಿಗೆ ಮನವಿ ಮಾಡಿದ್ದಾರೆ.


ಬೆಂಗಳೂರಿನಲ್ಲಿ ಸಚಿವರ ಕಚೇರಿಗೆ ತೆರಳಿ ಸಚಿವರ ಜೊತೆ ಮಾತುಕತೆ ನಡೆಸಿದ ಶಾಸಕರು ಈ ಮನವಿಯನ್ನು ನೀಡಿದ್ದಾರೆ.
ಈ ದೇವಸ್ಥಾನವು ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಗೆ ಒಳಪಟ್ಟಿದ್ದು, ಪ್ರವರ್ಗ ಎ ಸೇರಿದ ಅಧೀಸೂಚಿತ ಸಂಸ್ಥೆಯಾಗಿರುತ್ತದೆ. ಪ್ರಸಿದ್ದಿಯನ್ನು ಹೊಂದಿರುವ ಈ ದೇವಸ್ಥಾನಕ್ಕೆ ಊರು ಹಾಗೂ ಪರವೂರುಗಳಿಂದ ಲಕ್ಷಾಂತರ ಭಕ್ತಾಧಿಗಳು ಆಗಮಿಸುತ್ತಿದ್ದು ಅವರಿಗೆ ತಂಗಲು ವಸತಿ,ಮೂಲಸೌಕರ್ಯಗಳು, ಸೇರಿದಂತೆ ವಾಹನ ಪಾರ್ಕಿಂಗ್ ವ್ಯವಸ್ಥೆಗೆ ಜಾಗದ ಕೊರತೆಯಿದೆ. ಈ ದೇವಸ್ಥಾನಕ್ಕೆ ಹೊಂದಿಕೊಂಡಿರುವ ಪ್ರಭಾತ್ ಪೈ ಎಂಬವರಿಗೆ ಸೇರಿದ ಸರ್ವೆ ನಂಬ 1-20 0.32 ಎಕ್ರೆ ಜಾಗವಿದ್ದು ಈ ಜಾಗವನ್ನು ದೇವಸ್ಥಾನದ ಉಪಯೋಗಕ್ಕಾಗಿ ಖರೀದಿಸಲು ದೇವಸ್ಥಾನದ ಆಡಳಿತ ಮಂಡಳಿ ಊರಿನ ಸಮಸ್ತ ಭಕ್ತಾದಿಗಳು ಸೇರಿ ಒಂದು ಮೊತ್ತವನ್ನು ನಿಗಧಿಮಾಡಿರುತ್ತಾರೆ. ಈ ಮೊತ್ತಕ್ಕೆ ಜಾಗ ನೀಡುವುದಾಗಿ ಜಾಗದ ಮಾಲಕರು ಒಪ್ಪಿಗೆಯನ್ನು ನೀಡಿರುತ್ತಾರೆ. ಜಾಗ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿಗಳು ಜಾಗದ ದಾಖಲೆ, ದರಪಟ್ಟಿ ಕುರಿತ ಸಂಪೂರ್ಣ ಮಾಹಿತಿಯನ್ನು ಸೂಕ್ತ ವರದಿಯೊಂದಿಗೆ ಇಲಾಖಾ ಅನುಮತಿಗಾಗಿ ಸಲ್ಲಿಸಿದ್ದಾರೆ ಎಂದು ಶಾಸಕರು ಮನವಿಯಲ್ಲಿ ತಿಳಿಸಿದ್ದು ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನದ ಎದುರು ಭಾಗದ ಈಶಾನ್ಯ ದಿಕ್ಕಿನಲ್ಲಿರುವ ಜಾಗವನ್ನು ಖರೀದಿಸಲು ಇಲಾಖೆ ಅನುವು ಮಾಡಿಕೊಡಬೇಕೆಂದು ಶಾಸಕರು ಸಚಿವರಲ್ಲಿ ಮನವಿಯನ್ನು ಮಾಡಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಮುಜರಾಯಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೂ ಶಾಸಕರು ಮನವಿಯನ್ನು ಸಲ್ಲಿಸಿದ್ದಾರೆ.

LEAVE A REPLY

Please enter your comment!
Please enter your name here