ಶಿರಾಡಿ: ಎರ್ಟಿಗಾ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಗುಂಡ್ಯ ಹೊಳೆಗೆ ಬಿದ್ದು ಕಾರಿನಲ್ಲಿದ್ದ ವ್ಯಕ್ತಿಯೋರ್ವರು ಮೃತ ಪಟ್ಟ ಘಟನೆ ಜೂ.11ರಂದು ಮುಂಜಾನೆ ಮಂಗಳೂರು -ಬೆಂಗಳೂರು ರಾ.ಹೆ.ಯ ಶಿರಾಡಿ ಗ್ರಾಮದ ಅಡ್ಡಹೊಳೆ ಎಂಬಲ್ಲಿ ನಡೆದಿದೆ. ಮೃತ ಪಟ್ಟ ವ್ಯಕ್ತಿಯನ್ನು ಹೊಸೂರು ನಿವಾಸಿ ಎಂದು ಗುರುತಿಸಲಾಗಿದೆ. ಕಾರಿನಲ್ಲಿದ್ದ ಇನ್ನೋರ್ವ ವ್ಯಕ್ತಿ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
UPDATE: ರಾ.ಹೆ. 75ರ ಕಡಬ ತಾಲೂಕು ಶಿರಾಡಿ ಗ್ರಾಮದ ಅಡ್ಡಹೊಳೆ ಎಂಬಲ್ಲಿ TN70D6905 ನಂಬರ್ ರಿಜಿಸ್ಟರ್ ನ ರಿಡ್ಜ್ ಕಾರು ಚಾಲಕನ ನಿಯಂತ್ರಣ ತಪ್ಪಿ ಸೇತುವೆಗೆ ಡಿಕ್ಕಿ ಹೊಡೆದು ಕಾರು ಸೇತುವೆ ಕೆಳಗೆ ನೀರಿಗೆ ಬಿದ್ದಿದ್ದು ಓರ್ವ ಮೃತಪಟ್ಟರೆ ಇನ್ನೋರ್ವ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಭಾನುವಾರ ಬೆಳಗಿನ 4.15 ಗಂಟೆಗೆ ಸಂಭವಿಸಿದೆ.
ಕಾರಿನಲ್ಲಿದ್ದ ತಮಿಳುನಾಡಿನ ಹೊಸೂರು ಕೃಷ್ಣಗಿರಿ ಮೂಲದ ಹರಿಪ್ರಸಾದ್(44) ಮೃತಪಟ್ಟಿರುತ್ತಾರೆ. ಗಾಯಗೊಂಡ ಚಾಲಕ ಗೋಪಿ (45)ಎಂಬುವರಿಗೆ ಕಾಲು ಮುರಿದಿದ್ದು ಇವರನ್ನು ಆಸ್ಪತ್ರೆ ದಾಖಲಿಸಲಾಗಿದೆ. ಕಾರು ಹೊಸೂರಿನಿಂದ ಮಂಗಳೂರು ಕಡೆಗೆ ಬರುತ್ತಿತ್ತು ಎನ್ನಲಾಗುತ್ತಿದೆ. ಗಾಯಾಳುವಿಗೆ ನೆಲ್ಯಾಡಿಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಬಳಿಕ ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳೀಯ ಪರಶುರಾಮ ಕ್ರೇನ್ ತಂಡ ಹಾಗೂ ಶೌರ್ಯ ವಿಪತ್ತು ನಿರ್ವಹಣಾ ತಂಡದ ಸದಸ್ಯರು ಕಾರು ಮೇಲೆತ್ತುವ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.
ಸ್ಥಳದಲ್ಲಿ ನೆಲ್ಯಾಡಿ ಹೊರಠಾಣಾ ಸಿಬ್ಬಂದಿ, ಉಪ್ಪಿನಂಗಡಿ ಠಾಣಾಧಿಕಾರಿ ಪರಿಶೀಲನೆ ನಡೆಸುತ್ತಿದ್ದಾರೆ. ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಾಗಿದೆ.