ಪುತ್ತೂರು ಸ್ವರ ಮಾಧುರ್ಯ ಸಂಗೀತ ಬಳಗದಿಂದ ಶಾಸಕರಿಗೆ ಅಭಿನಂದನೆ – ನಾನು ಒಬ್ಬ ಸಂಗೀತ ಪ್ರಿಯ ಅಶೋಕ್ ಕುಮಾರ್ ರೈ

0

ಪುತ್ತೂರು: ನನಗೆ ಸಂಗೀತ ಎಂದರೆ ಬಹಳ ಇಷ್ಟ. ಚಿಕ್ಕಂದಿನಲ್ಲಿಯೇ ಸಂಗೀತವನ್ನು ಆಲಿಸುತ್ತಿದ್ದೆ, ಸಂಗೀತ ಕಲಿಯಬೇಕೆಂದು ನನಗೆ ಬಹಳ ಆಸೆ ಇತ್ತು. ಆದರೆ ಕಲಿಯಲು ಸಾಧ್ಯವಾಗಿಲ್ಲ. ಈಗಲೂ ಸಂಗೀತ ಕಲಿಯಬೇಕೆಂಬ ಆಸೆ ಇದೆ. ಇಂದಿಗೂ ನಾನೊಬ್ಬ ಸಂಗೀತ ಪ್ರಿಯನಾಗಿದ್ದೇನೆ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.

ಅವರು ಸ್ವರ ಮಾಧುರ್ಯ ಸಂಗೀತ ಬಳಗ ಪುತ್ತೂರು ಇದರ ವತಿಯಿಂದ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಜೂ.10ರಂದು ಪುತ್ತೂರು ಸುಧಾನ ವಿದ್ಯಾಸಂಸ್ಥೆಯ ಸಭಾ ಭವನದಲ್ಲಿ ನಡೆದ ಶಾಸಕರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಸ್ವರ ಮಾಧುರ್ಯ ಸಂಗೀತ ಬಳಗದ ವತಿಯಿಂದ ನನಗೆ ಅಭಿನಂದನೆ ಮಾಡಿರುವುದು ಬಹಳಷ್ಟು ಖುಷಿ ಕೊಟ್ಟಿದೆ ಎಂದ ಶಾಸಕರು, ನಾವು ಚಿಕ್ಕಂದಿನಲ್ಲಿ ಮನೆಯಲ್ಲಿ ಭಜನೆ ಹಾಡುತ್ತಿದ್ದೇವೆ. ನನ್ನ ತಂದೆಯವರು ಒಬ್ಬ ಉತ್ತಮ ಭಜನಾ ಹಾಡುಗಾರರು. ನಾವೆಲ್ಲರೂ ಒಟ್ಟಿಗೆ ಕುಳಿತುಕೊಂಡು ಭಜನೆ ಮಾಡುತ್ತಿದ್ದೇವೆ. ಭಜನೆ ಹೇಳಿದರೆ ಮಾತ್ರ ನಮಗೆ ಊಟ ಸಿಗುತ್ತಿತ್ತು. ಇಂದಿಗೂ ನನಗೆ ಭಜನೆ, ಸಂಗೀತ ಎಂದರೆ ಬಹಳ ಇಷ್ಟ ಎಂದರು. ಸ್ವರ ಮಾಧುರ್ಯ ಸಂಗೀತ ಬಳಗದ ಮುಂದಿನ ಕಾರ್ಯಕ್ರಮದಲ್ಲಿ ನಾನೂ ಒಂದು ಹಾಡನ್ನು ಕಲಿತು ಹಾಡುತ್ತೇನೆ ಎಂದು ಹೇಳಿ ಶುಭ ಹಾರೈಸಿದರು. ಶಾಸಕರಿಗೆ ಶಾಲು ಹಾಕಿ, ಪೇಟಾ ತೊಡಿಸಿ, ಹೂ ಹಾರ ಹಾಕಿ, ಪುಸ್ತಕ, ಸ್ಮರಣಿಕೆ ನೀಡುವ ಮೂಲಕ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಶಾಸಕರ ಬಗ್ಗೆ ಬರೆದ ಹಾಡೊಂದನ್ನು ಗಾಯಕ ಕೃಷ್ಣರಾಜ್‌ರವರು ಹಾಡುವ ಮೂಲಕ ಗೌರವ ವಂದನೆ ಸಲ್ಲಿಸಲಾಯಿತು.
ಕಾರ್ಯಕ್ರಮವನ್ನು ದೀಪ ಬೆಳಗಿಸಿದ ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ ಮಾತನಾಡಿ, ಕೇವಲ ಬೇಡಿಕೆಗಳನ್ನು ವಿಧಾನಸಭೆಯಲ್ಲಿ ಪ್ರಸ್ತಾಪಿಸಿದರೆ ಕೆಲಸ ಆಗುವುದಿಲ್ಲ. ಪುತ್ತೂರು ಕ್ಷೇತ್ರವನ್ನು ರಾಜ್ಯದಲ್ಲಿ ಗುರುತಿಸುವಂತಾಗಬೇಕು ಮಾದರಿ ಕ್ಷೇತ್ರ ಆಗಬೇಕು ಎಂಬ ನಿಟ್ಟಿನಲ್ಲಿ ಶಾಸಕರು ಬೇಕಾದ ಮಂತ್ರಿ ಅಧಿಕಾರಿಗಳನ್ನು ಭೇಟಿ ಮಾಡಿ ಮೆಡಿಕಲ್ ಕಾಲೇಜು ಪುತ್ತೂರಿಗೆ ತರಬೇಕೆನ್ನುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು. ನ್ಯಾಯವಾದಿ ಕುಂಬ್ರ ದುರ್ಗಾಪ್ರಸಾದ್ ರೈಯವರು ಅಭಿನಂದನಾ ಮಾತುಗಳನ್ನಾಡಿ, ಶಾಸಕರು ತಾಯಿ ಮನಸ್ಸಿನವರು, ಅವರ ಮಾತೃ ಹೃದಯ ಎಲ್ಲರಿಗೂ ಗೊತ್ತಾಗುತ್ತಿದೆ ಮುಂದಿನ ದಿನಗಳಲ್ಲಿ ಪುತ್ತೂರಿನ ಸರ್ವಾಂಗೀಣ ಅಭಿವೃದ್ಧಿ ಶಾಸಕರಿಂದ ಸಾಧ್ಯವಾಗಲಿದೆ ಈ ನಿಟ್ಟಿನಲ್ಲಿ ನಾವೆಲ್ಲರೂ ಅವರಿಗೆ ಸಹಕಾರ ನೀಡಬೇಕಾಗಿದೆ ಎಂದು ಹೇಳಿ ಅಭಿನಂದನಾ ಮಾತುಗಳನ್ನಾಡಿದರು. ಸುದಾನ ವಿದ್ಯಾಸಂಸ್ಥೆಯ ಸಂಚಾಲಕ ರೆ.ವಿಜಯ ಹಾರ್ವಿನ್ ಸಭಾಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಕ್ಯಾನ್ಸರ್ ತಜ್ಞ ಡಾ.ರಘು ಬೆಳ್ಳಿಪ್ಪಾಡಿ, ತಾಪಂ ಮಾಜಿ ಅಧ್ಯಕ್ಷ ಮಹಮ್ಮದ್ ಬಡಗನ್ನೂರು, ವಕೀಲ ವೆಂಕಪ್ಪ ಗೌಡ ಸುಳ್ಯ, ನಗರಸಭಾ ಮಾಜಿ ಅಧ್ಯಕ್ಷ ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ, ದಲಿತ ಸೇವಾ ಸಮಿತಿಯ ಸ್ಥಾಪಕ ಅಧ್ಯಕ್ಷ ಶೇಷಪ್ಪ ಬೆದ್ರಕಾಡು, ದಲಿತ ಮುಖಂಡ ಕೇಶವ್ ಪಡೀಲ್, ವಕೀಲ ಜಗನ್ನಾಥ್ ರೈ ಜಿ, ಸ್ವರ ಮಾಧುರ್ಯ ಸಂಗೀತ ಬಳಗದ ಸದಸ್ಯ ಶೀನ ಮೂಲೆತ್ತಮಜಲು, ಪತ್ರಕರ್ತ ಸಿಶೇ ಕಜೆಮಾರ್ ಮತ್ತಿತರರು ಉಪಸ್ಥಿತರಿದ್ದರು. ಸ್ವರ ಮಾಧುರ್ಯದ ಸ್ಥಾಪಕ ನಿರ್ದೇಶಕರಾದ ಜನಾರ್ದನ್ ಬಿ. ಸ್ವಾಗತಿಸಿದರು. ನಿದೇಶಕಿ ಪ್ರಮೀಳಾ ಜನಾರ್ದನ್ ಹೂ ನೀಡಿ ಸ್ವಾಗತಿಸಿದರು. ಕಾರ್ಯಕ್ರಮ ಸಂಘಟಕರಾದ ದಾಮೋದರ ಮುರ, ರಾಮಣ್ಣ ಪಿಲಿಂಜ ಸಹಕರಿಸಿದ್ದರು. ವಕೀಲೆ ಹರಿಣಾಕ್ಷಿ ಜೆ.ಶೆಟ್ಟಿ ವಂದಿಸಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮ ಮೊದಲು ವಿ.ಕೆ ಜೋಡಿತಾರೆ ಪೂರ್ಣಿಮಾ ಕೃಷ್ಣರಾಜ್‌ರವರಿಂದ ಸಂಗೀತ ರಸಸಂಜೆ ನಡೆಯಿತು.
ಶಾಸಕರಿಂದ ಮನವಿ ಸ್ವೀಕಾರ
ಈ ಸಂದರ್ಭದಲ್ಲಿ ಶಾಸಕ ಅಶೋಕ್ ಕುಮಾರ್ ರೈಯವರಿಗೆ ಹಲವು ಮಂದಿ ಮನವಿ ನೀಡಿದರು. ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ, ಅರ್ಜಿಗಳನ್ನು ನೀಡಿದರು. ಎಲ್ಲರ ಅರ್ಜಿಗಳನ್ನು ಸ್ವೀಕರಿಸಿದ ಶಾಸಕರು ಸ್ಥಳದಲ್ಲೇ ಅರ್ಜಿಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ವಿಶೇಷ ಚೇತನರಾಗಿರುವ ಅಜ್ಜಿನಡ್ಕದ ಕೃಷ್ಣಪ್ಪರವರು ತನಗೆ ದ್ವಿಚಕ್ರ ನೀಡುವಂತೆ ಮನವಿ ಮಾಡಿಕೊಂಡರು. ಈ ಹಿಂದೆ ಹಲವು ಬಾರಿ ದ್ವಿಚಕ್ರ ಬೇಡಿಕೆಯ ಬಗ್ಗೆ ಶಾಸಕರಿಗೆ ಮನವಿ ಸಲ್ಲಿಸಿದ್ದೇ ಆದರೆ ಯಾವುದೇ ಪ್ರಯೋಜನ ಆಗಿಲ್ಲ ಎಂದು ಹೇಳಿಕೊಂಡರು.

ನನಗೆ ದುಬಾರಿ ಬೆಲೆಯ ಸನ್ಮಾನ ಬೇಡ
ಸದಾ ಒಂದಲ್ಲ ಒಂದು ವಿಷಯದ ಮೂಲಕ ಸುದ್ದಿಯಾಗುತ್ತಿರುವ ಕಾಮನ್ ಮ್ಯಾನ್ ಶಾಸಕ ಎಂದೇ ಕರೆಸಿಕೊಂಡಿರುವ ಅಶೋಕ್ ಕುಮಾರ್ ರೈ ನನಗೆ ದುಬಾರಿ ಬೆಲೆಯ ಸನ್ಮಾನ ಮಾಡುವುದು ಬೇಡ, ಸಾವಿರಾರು ರೂಪಾಯಿ ಖರ್ಚು ಮಾಡಿ ಸನ್ಮಾನ ಮಾಡುವ ಬದಲು ಆ ಹಣವನ್ನು ಬಡವರಿಗೆ ಕೊಡಿ, ನೂರಾರು ರೂಪಾಯಿಯ ಪೇಟಾ, ಶಾಲು, ಹೂವಿನ ಹಾರ ಇವುಗಳನ್ನು ದಯವಿಟ್ಟು ಕೊಡಬೇಡಿ, ನಿಮ್ಮ ಅಭಿಮಾನ, ಪ್ರೀತಿಗೆ ಒಂದು ಮಾಮೂಲಿ ಶಾಲು, ಒಂದು ಗುಲಾಬಿ ಹೂ ಅಥವಾ ಒಂದು ಪುಸ್ತಕ ಕೊಡಿ ಅಷ್ಟು ಸಾಕು ನನಗೆ, ನೀವು ಕೊಡುವ ಪ್ರೀತಿಯ ನನಗೆ ದೊಡ್ಡ ಸನ್ಮಾನ ಆಗಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಅಭಿಮಾನಿಗಳ ಬಳಿ ಕೇಳಿಕೊಂಡರು.

LEAVE A REPLY

Please enter your comment!
Please enter your name here