ಪುತ್ತೂರು: ಕುಂಬ್ರ ಪೇಟೆಯಲ್ಲಿ ಪದೇ ಪದೇ ಕೈಕೊಡುವ ವಿದ್ಯುತ್ನಿಂದಾಗಿ ವರ್ತಕರು ಗರಂ ಆಗಿದ್ದು ವರ್ತಕರ ಸಂಘದಿಂದ ಮೆಸ್ಕಾಂ ಕಛೇರಿ ಎದುರು ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ. ಕಳೆದ ಕೆಲವು ತಿಂಗಳಿನಿಂದ ಈ ಸಮಸ್ಯೆ ಕುಂಬ್ರ ಪೇಟೆಯಲ್ಲಿ ಕಾಡುತ್ತಿದ್ದು ಇದರಿಂದ ವರ್ತಕರಿಗೆ ಬಹಳಷ್ಟು ತೊಂದರೆಯಾಗುತ್ತಿದೆ. ಈ ಬಗ್ಗೆ ಮಸ್ಕಾಂ ಅಧಿಕಾರಿಗಳಿಗೆ ಮನವಿ ನೀಡಿದ್ದು ಅಲ್ಲದೆ ಹಲವು ಬಾರಿ ಮೌಖಿಕವಾಗಿಯೂ ತಿಳಿಸಿದ್ದರೂ ಯಾವುದೇ ಪ್ರಯೋಜನ ಆಗಿಲ್ಲ ಎಂದು ವರ್ತಕರ ಸಂಘದ ಅಧ್ಯಕ್ಷರು ತಿಳಿಸಿದ್ದಾರೆ. ದಿನದಲ್ಲಿ ಹಲವು ಬಾರಿ ವಿದ್ಯುತ್ ಕಣ್ಣಾಮುಚ್ಚಾಲೆ ಆಡುತ್ತಿರುವುದರಿಂದ ಹೊಟೇಲ್ ಮಾಲೀಕರಿಗೆ, ದಿನಸಿ ಅಂಗಡಿಯವರಿಗೆ ಸೇರಿದಂತೆ ವ್ಯಾಪಾರಸ್ಥರಿಗೆ ತೊಂದರೆಯಾಗುತ್ತಿದೆ. ಆಹಾರ ಪದಾರ್ಥಗಳು ಹಾಳಾಗುತ್ತಿದ್ದು ಬಹಳಷ್ಟು ನಷ್ಟ ಉಂಟಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಮಳೆಗಾಲದಲ್ಲಿ ಮತ್ತಷ್ಟು ಸಮಸ್ಯೆ ಸಾಧ್ಯತೆ
ಈಗಾಗಲೇ ಮಳೆಗಾಲ ಆರಂಭವಾಗಿದ್ದು ಗಾಳಿ,ಮಳೆಗೆ ಮರ ಬಿದ್ದು ವಿದ್ಯುತ್ ಕಂಬಗಳು ಉರುಳಿ ಬೀಳುತ್ತಿವೆ. ಇದಲ್ಲದೆ ಸಿಡಿಲಿನ ಹೊಡೆತಕ್ಕೆ ವಿದ್ಯುತ್ ಇನ್ಸುಲೇಟರ್ ಬ್ರೇಕ್ ಆಗುವ ಕಾರಣ ಮತ್ತಷ್ಟು ಸಮಸ್ಯೆ ಸಾಧ್ಯತೆ ಇದೆ. ಈ ಎಲ್ಲಾ ಸಮಸ್ಯೆಗಳನ್ನು ಎದುರಿಸಲು ಈಗಾಗಲೇ ಮೆಸ್ಕಾಂ ಎಲ್ಲಾ ರೀತಿಯ ಸಿದ್ದತೆಯನ್ನು ಮಾಡಿಕೊಂಡಿದೆ ಎಂದು ಮೇಲಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ಹೀಗಿದ್ದರೂ ಸಿಟಿ ಏರಿಯಾಗಳಲ್ಲಿ ವಿದ್ಯುತ್ ಪದೇ ಪದೇ ಕೈಕೊಡುತ್ತಿರುವುದು ವರ್ತಕರ ಆಕ್ರೋಶಕ್ಕೆ ಕಾರಣವಾಗಿದೆ.
ಕುಂಬ್ರ ಪೇಟೆಗೆ ಯಾಕೆ ಈ ಸಮಸ್ಯೆ..?
ಕುಂಬ್ರ ಪೇಟೆಯಲ್ಲಿ ಮಾತ್ರವೇ ಪದೇ ಪದೇ ವಿದ್ಯುತ್ ಕೈ ಕೊಡುತ್ತಿರುವುದಕ್ಕೆ ಕಾರಣಗಳೇನು? ಹಳ್ಳಿ ಪ್ರದೇಶಗಳಲ್ಲಿ ವಿದ್ಯುತ್ ಇದ್ದರೂ ಪೇಟೆಯಲ್ಲಿ ಮಾತ್ರವೇ ಇಲ್ಲದಿರುವುದು ಯಾಕೆ? ಎಂಬ ಪ್ರಶ್ನೆ ವರ್ತಕರದ್ದಾಗಿದೆ. ಕುಂಬ್ರ ಪೇಟೆಯನ್ನು ದಾಟಿಕೊಂಡು 5 ಫೀಡರ್ ಪಾಸ್ ಆಗಿದೆ. ಇದರಲ್ಲಿ 2 ಬೆಟ್ಟಂಪಾಡಿ ಫೀಡರ್, 2 ಕಾವು, 1 ಸುಳ್ಯಪದವು ಆಗಿದೆ. ಈ ಫೀಡರ್ ಲೈನ್ನಲ್ಲಿ ಎಲ್ಲಿ ಸಮಸ್ಯೆ ಉಂಟಾದರೂ ವಿದ್ಯುತ್ ಟ್ರಿಪ್ ಆಗುತ್ತದೆ. ಉದಾಹರಣಗೆ ಬೆಟ್ಟಂಪಾಡಿ ಲೈನ್ನಲ್ಲಿ ಸಮಸ್ಯೆ ಉಂಟಾದರೆ ಅದನ್ನು ಸರಿಪಡಿಸಲು ಲೈನ್ ಆಫ್ ಮಾಡಬೇಕಾಗುತ್ತದೆ ಆಗ ಕುಂಬ್ರ ಪೇಟೆಗೆ ವಿದ್ಯುತ್ ನಿಲುಗಡೆಯಾಗುತ್ತದೆ. ಇದೇ ರೀತಿ ಇನ್ನೊಂದು ಫೀಡರ್ನಲ್ಲಿ ಸಮಸ್ಯೆ ಬಂದು ಅದನ್ನು ಸರಿ ಮಾಡಬೇಕಾದರೆ ಆ ಲೈನ್ ಆಫ್ ಮಾಡಬೇಕು ಆಗಲೂ ಕುಂಬ್ರ ಪೇಟೆಗೆ ವಿದ್ಯುತ್ ಇರಲ್ಲ. ಇದೇ ಕಾರಣಕ್ಕೆ ಸಮಸ್ಯೆಯಾಗುತ್ತಿದೆ ಎನ್ನುತ್ತಾರೆ ಜೆ.ಇ.ಯವರು.
ಪ್ರತ್ಯೇಕ ಫೀಡರ್ ಒಂದೇ ಪರಿಹಾರ
ಕುಂಬ್ರ ಪೇಟೆಯ ವಿದ್ಯುತ್ ಸಮಸ್ಯೆ ಬಗೆ ಹರಿಯಬೇಕಾದರೆ ಸಿಟಿ ಫೀಡರ್ನಿಂದ ಮಾತ್ರ ಸಾಧ್ಯ. ಕುಂಬ್ರ ಪೇಟೆಗೆ ಪ್ರತ್ಯೇಕ ಫೀಡರ್ ಆದರೆ ಈ ಎಲ್ಲಾ ಸಮಸ್ಯೆಗಳು ಪರಿಹಾರವಾಗುತ್ತದೆ. ಇದಕ್ಕಾಗಿ ಈಗಾಗಲೇ ಮೆಸ್ಕಾಂ ವತಿಯಿಂದ ಪ್ರತ್ಯೇಕ ಫೀಡರ್ಗೆ ಎಸ್ಟೀಮೇಟ್ ಆಗುತ್ತಿದೆ. ಸದ್ಯದಲ್ಲೇ ಕುಂಬ್ರಕ್ಕೆ ಪ್ರತ್ಯೇಕ ಫೀಡರ್ ಆಗುವ ಛಾನ್ಸ್ ಇದೆ. ಕುಂಬ್ರಕ್ಕೆ ಸಿಟಿ ಫೀಡರ್ ಬೇಕು ಎಂದು ವರ್ತಕರ ಸಂಘದಿಂದ ಹಲವು ಬಾರಿ ಮನವಿಯನ್ನು ಕೂಡ ನೀಡಲಾಗಿದೆ.
ಪ್ರತಿಭಟನೆಗೆ ನಿರ್ಧಾರ
ಕುಂಬ್ರ ವರ್ತಕರ ಸಂಘಕ್ಕೆ ತನ್ನದೇ ಆದ ಇತಿಹಾಸವಿದೆ. ತನ್ನ ಆರಂಭದ ದಿನದಿಂದಲೇ ವಿದ್ಯುತ್, ರಸ್ತೆ ಸಮಸ್ಯೆಗಳಿಗಾಗಿ ಹೋರಾಟ ಮಾಡಿಕೊಂಡೇ ಬಂದ ಸಂಘವಾಗಿದೆ. ವರ್ತಕರಿಗೆ ತೊಂದರೆಯಾದರೆ ಯಾವುದೇ ಕ್ಷಣದಲ್ಲೂ ಹೋರಾಟಕ್ಕೆ ಸಿದ್ಧವಾದ ಸಂಘವಾಗಿದ್ದು ಇದೀಗ ವಿದ್ಯುತ್ ಸಮಸ್ಯೆಯ ಬಗ್ಗೆ ಪ್ರತಿಭಟನೆಗೆ ನಿರ್ಧರಿಸಿದೆ. ಮೆಸ್ಕಾಂ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಸಮಸ್ಯೆಯನ್ನು ನಿವಾರಿಸುತ್ತಾರೋ ಕಾದು ನೋಡಬೇಕಾಗಿದೆ.
ಸಿಡಿಲಿನ ಹೊಡೆತಕ್ಕೆ ವಿದ್ಯುತ್ ಕಂಬದಲ್ಲಿನ ಇನ್ಸುಲೇಟರ್ ಬ್ರೇಕ್ ಆಗುತ್ತದೆ. ಈ ಸಮಸ್ಯೆ ಬಂದಾಗ ಲೈನ್ನಲ್ಲಿ ಸಮಸ್ಯೆ ಹುಡುಕುವುದು ತುಂಬಾ ಲೇಟ್ ಆಗುತ್ತದೆ. ಮಳೆಗಾಲದ ಆರಂಭದಲ್ಲಿ ಇಂತಹ ತೊಂದರೆಗಳು ಜಾಸ್ತಿ. ಪವರ್ಮ್ಯಾನ್ಗಳ ಸುರಕ್ಷತೆ ದೃಷ್ಟಿಯಿಂದ ಒಂದು ಲೈನ್ನಲ್ಲಿ ಕೆಲಸ ಮಾಡಲು 3 ಫೀಡರ್ಗಳನ್ನು ಆಫ್ ಮಾಡಬೇಕಾಗುತ್ತದೆ. ಕುಂಬ್ರ ಪೇಟೆಯ ಸಮಸ್ಯೆಯನ್ನು ಬಗೆಹರಿಸಲು ಕುಂಬ್ರಕ್ಕೆ ಪ್ರತ್ಯೇಕ ಫೀಡರ್ ಅವಶ್ಯ.ಈಗಾಗಲೇ ಪ್ರತ್ಯೇಕ ಫೀಡರ್ಗೆ ಎಸ್ಟಿಮೇಟ್ ಆಗುತ್ತಿದೆ. ವರ್ತಕರು ನಮ್ಮೊಂದಿಗೆ ಸಹಕರಿಸಬೇಕು. ಅಧಿಕಾರಿಗಳು ದೂರವಾಣಿ ಕರೆ ಸ್ವೀಕರಿಸದೇ ಇದ್ದರೆ 1912 ಹೆಲ್ಪ್ ಲೈನ್ಗೆ ಕರೆ ಮಾಡಿ ಸಮಸ್ಯೆ ಹೇಳಿಕೊಳ್ಳಬಹುದು.
ರವೀಂದ್ರ, ಜೆ.ಇ ಮೆಸ್ಕಾಂ ಕುಂಬ್ರ
ಕಳೆದ ಕೆಲವು ತಿಂಗಳಿನಿಂದ ಕುಂಬ್ರ ಪೇಟೆಗೆ ವಿದ್ಯುತ್ ಸಮಸ್ಯೆ ತುಂಬಾ ಇದೆ. ಮಳೆ, ಗಾಳಿ, ಸಿಡಿಲು ಇಲ್ಲದಿದ್ದರೂ ಪದೇ ಪದೇ ವಿದ್ಯುತ್ ಕೈ ಕೊಡುತ್ತಿದೆ. ಇದರಿಂದ ಫ್ರಿಡ್ಜ್ನಲ್ಲಿಟ್ಟ ತರಕಾರಿ, ಮಾಂಸ, ಐಸ್ಕ್ರೀಮ್ ಎಲ್ಲವೂ ಹಾಳಾಗುತ್ತದೆ. ವರ್ತಕರಿಗೆ ಇದರಿಂದ ತುಂಬಾ ನಷ್ಟವಾಗುತ್ತಿದೆ. ವಿದ್ಯುತ್ ಸಮಸ್ಯೆಯ ಬಗ್ಗೆ ಹಲವು ಬಾರಿ ಅಧಿಕಾರಿಗಳಿಗೆ ಮನವಿ, ಮೌಖಿಕವಾಗಿ ಹೇಳಿದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗೆ ಮುಂದುವರಿದರೆ ಮುಂದೆ ಪ್ರತಿಭಟನೆ ಮಾಡುವುದೊಂದೇ ದಾರಿಯಾಗಿದೆ.
—-ರಫೀಕ್ ಅಲ್ರಾಯ, ಅಧ್ಯಕ್ಷರು ವರ್ತಕರ ಸಂಘ ಕುಂಬ್ರ