ಉಪ್ಪಿನಂಗಡಿ; ಧಾರ್ಮಿಕ ಶಿಕ್ಷಣ ಕ್ಷೇತ್ರದಲ್ಲಿ ಜಾಗತಿಕ ಮನ್ನಣೆ ಪಡೆದ ಸಮಸ್ತ ಇಸ್ಲಾಮಿಕ್ ಮತ ವಿಧ್ಯಾಬ್ಯಾಸ ಬೋರ್ಡ್ ಅಧೀನದ ಜಂಹಿಯ್ಯತ್ತುಲ್ ಮುಹಲ್ಲಿಮೀನ್ ದ.ಕ ಜಿಲ್ಲಾ ಸಮಿತಿಯ ಆಶ್ರಯಲ್ಲಿ ಮದ್ರಸ ಕ್ಷೇತ್ರಕ್ಕೆ ಶಕ್ತಿ ತುಂಬುವ ಸಲುವಾಗಿ ಸದರ್ ಮುಹಲ್ಲಿಂ ಸಂಗಮ ಜೂ.12ರಂದು ಉಪ್ಪಿನಂಗಡಿಯ ಎಚ್‌ಎಂ ಹಾಲ್‌ನಲ್ಲಿ ನಡೆಯಿತು.
ದುಹಾಶಿರ್ವಚನದ ಮೂಲಕ ಬೆಳ್ತಂಗಡಿ ಜಿಪ್ರಿ ತಂಙಲ್ ಉದ್ಘಾಟಿಸಿ ಮಾತನಾಡಿ ಮುಹಲ್ಲಿಮರು ಮಾದರಿ ಯೋಗ್ಯರಾಗಿ ಕೆಲಸ ಮಾಡಬೇಕೆಂದು ಸಲಹೆ ನೀಡಿದರು. ಕೇಂದ್ರೀಯ ಸಂಪನ್ನೂಲ ವ್ಯಕ್ತಿಗಳಾಗಿ ಕೊಡಗು ಅಬ್ದುರ್ಹ್ಮಾನ್ ಮುಸ್ಲಿಯಾರ್ ಮಾತನಾಡಿ ಮುಹಲ್ಲಿಮರ ಜವಾಬ್ದಾರಿಯನ್ನು ನೆನಪಿಸಿದರು. ಅಸ್ಲಮ್ ಅಝ್ಹರಿ ಮಾತನಾಡಿ ತಮ್ಮ ಸ್ವಂತ ಜೀವನ ಬದಲಾದರೆ ಸಮಾಜವನ್ನು ಬದಲಾಯಿಸಲು ಸಾಧ್ಯ ಎಂದರು. ಸಮಸ್ತ ಮುಶಾವರ ಸದಸ್ಯ ಉಸ್ಮಾನುಲ್ ಪೈಝಿ ಮಾತನಾಡಿ ಉಲಮಾಗಳು ವಸ್ತ್ರ ಸಂಹಿತೆಯಲ್ಲಿ ಕೂಡಾ ಇತರರಿಗೆ ಮಾದರಿಯಾಗಬೇಕು ಎಂದರು.
ರಾಜ್ಯ ದಾರಿಮಿ ಒಕ್ಕೂಟದ ಎಸ್‌ಬಿ ದಾರಿಮಿ ಮಾತನಾಡಿ ಮುಹಲ್ಲಿಮರ ಭವಣೆ ನೀಗಿಸಲು ಸಮಾಜ ಮತ್ತು ಸರಕಾರ ಮುಂದೆ ಬರಬೇಕು. ಲಕ್ಷಾಂತರ ಮಹಿಳೆಯರಿಗೆ ಎರಡು ಸಾವಿರ ರೂಪಾಯಿ ಕೊಡುವಾಗ ಕೆಲವೊಂದಿಷ್ಟು ಮದ್ರಸ ಅಧ್ಯಾಪಕರಿಗೆ ವಕ್ಫ್ ಬೊರ್ಡ್ ಮೂಲಕ ಅನುದಾನ ಬಿಡುಗಡೆಗೊಳಿಸಿದರೆ ಅದು ದೊಡ್ಡ ಹೊರೆಯಾಗದು ಎಂದರು.
ಜಿಲ್ಲೆಯ ಬಹುತೇಕ ಮದ್ರಸಗಳು ಸಮಸ್ತದ ಆದರ್ಶದಂತೆ ನಡೆಯುತ್ತಿದೆ. ಆದರೆ ವಕ್ಫ್ ಹಜ್ ಮೊದಲಾದ ಧಾರ್ಮಿಕ ಮಂಡಳಿಗೆ ಆಯ್ಕೆ ಮಾಡುವಾಗ ಸಮಸ್ತದ ಪ್ರತಿನಿಧಿಗಳನ್ನು ಕಡೆಗಣಿಸುವುದು ಇನ್ನು ಮುಂದೆ ಸಹಿಸಲಾಗದು ಎಂದರಲ್ಲದೆ ಸಾಮಾಜಿಕ ನ್ಯಾಯದಲ್ಲಿ ನಂಬಿಕೆ ಇಟ್ಟ ಪಕ್ಷದ ಬೆನ್ನೆಲುಬಾಗಿ ನಿಲ್ಲಲು ಸಮಸ್ತದ ಅಭಿಮಾನಿಗಳು ಸದಾ ಮುಂಚೂಣಿಯಲ್ಲಿದ್ದರು ಎಂದರು.
ಕೇಂದ್ರಿಯ ಘಟಕದ ವತಿಯಿಂದ ಪ್ರತೀ ಜಿಲ್ಲೆಗೆ ಒಂದರಂತೆ ನೀಡಲಾಗುವ ರೂ.ಎಂಟು ಲಕ್ಷ ವೆಚ್ಚದ ಮುಹಲ್ಲಿಂ ಮಂಝಿಲ್‌ಗೆ ಸಯ್ಯಿದ್ ಅನಸ್ ತಂಙಳ್ ಶಿಲಾನ್ಯಾಸ ನೆರವೇರಿಸಿದರು.
ನೂತನ ಸ್ಪೀಕರ್ ಯುಟಿ ಖಾದರ್‌ರವರನ್ನು ಸನ್ಮಾನಿಸಲಾಯಿತು. ನಂತರ ಮಾತನಾಡಿದ ಯುಟಿ ಖಾದರ್ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ನಾನು ಸದಾ ಬದ್ದನಾಗಿದ್ದೇನೆ. ಸಮುದಾಯದ ರಾಯಭಾರಿಗಳೆಂದರೆ ಅದು ಉಲಮಾಗಳು ಮಾತ್ರ. ಅವರ ಮಾರ್ಗದರ್ಶನ ಪಡೆದು ಮುಂದೆ ಸಾಗಿದರೆ ಇಲ್ಲಿ ಅಶಾಂತಿ ಅವ್ಯವಸ್ಥೆ ಉಂಟಾಗುವುದಿಲ್ಲ. ನನ್ನ ಇತಿಮಿತಿಯಲ್ಲಿ ಸಮಸ್ತದ ಕಾರ್ಯಕರ್ತರಿಗೆ ನ್ಯಾಯ ಒದಗಿಸುವ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಸಮಾರೋಪ:
ಸಮಾರೋಪ ಭಾಷಣ ಮಾಡಿದ ಅಬ್ದುಲ್ ಖಾದಿರ್ ಅಲ್ ಖಾಸಿಮಿ ಮಾತನಾಡಿ ಕುರ್‌ಅನ್ ಕಲಿಕೆಯಲ್ಲಿ ಉಂಟಾಗುವ ಲೋಪದೋಷಗಳನ್ನು ಸರಿಪಡಿಸಲು ಅಧ್ಯಾಪಕರು ಶ್ರದ್ದೆ ವಹಿಸಬೇಕೆಂದು ಕರೆ ನೀಡಿದರು. ಹಾಜಿ ಕೆಂಪಿ ಮುಸ್ತಪ ಶುಭ ಹಾರೈಸಿದರು.
ಜಿಲ್ಲಾ ಜಂಯಿತ್ತುಲ್ ಮುಹಲ್ಲಿಮೀನ್ ಅಧ್ಯಕ್ಷ ಹಾಜಿ ಶಂಸುದ್ದಿನ್ ದಾರಿಮಿ ಅಧ್ಯಕ್ಷತೆ ವಹಿಸಿದ್ದರು. ಕಡಬ ಇಬ್ರಾಹಿಂ ದಾರಿಮಿ ಕಿರಾಅತ್ ಪಠಿಸಿದರು. ಸಿದ್ದೀಖ್ ಪೈಝಿ ಕರಾಯ ಸ್ವಾಗತಿಸಿ ರೆಂಜಾಡಿ ದಾರಿಮಿ ವಂದಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಮುಸ್ಲಿಯಾರ್ ಮುಂಡೋಳೆ ಮನವಿ ವಾಚಿಸಿದರು.