ನೆಲ್ಯಾಡಿ: ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರಕ್ಕೆ ಹಿಂಭಾಗದ ಮೂಲಕ ಸಂಪರ್ಕಿಸುವ ರಸ್ತೆಗೆ ಅನ್ನಛತ್ರದ ಬಳಿ ಹಾಕಲಾಗಿದ್ದ ಗೇಟ್ ಅನ್ನು ಪೊಲೀಸ್ ಬಂದೋಬಸ್ತ್‌ನಲ್ಲಿ ಬೆಳ್ತಂಗಡಿ ತಹಶೀಲ್ದಾರ್ ನೇತೃತ್ವದಲ್ಲಿ ಜೂ.13ರಂದು ತೆರವುಗೊಳಿಸಲಾಗಿದೆ. ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಯವರ ಸೂಚನೆಯಂತೆ ಈ ತೆರವು ಕಾರ್ಯಾಚರಣೆ ನಡೆದಿದೆ ಎಂದು ವರದಿಯಾಗಿದೆ.
1 ವರ್ಷದ ಹಿಂದೆ ವ್ಯವಸ್ಥಾಪನಾ ಸಮಿತಿಯವರು ದೇವಸ್ಥಾನಕ್ಕೆ ಹಿಂಭಾಗದ ಮೂಲಕ ಪ್ರವೇಶಿಸುವ ರಸ್ತೆಗೆ ಅನ್ನಛತ್ರದ ಬಳಿಕ ಗೇಟ್ ಹಾಕಿದ್ದರು. ಇದು ವಿವಾದಕ್ಕೂ ಕಾರಣವಾಗಿತ್ತು. ಗೇಟ್ ಅಳವಡಿಸಿರುವುದರಿಂದ ಸದ್ರಿ ರಸ್ತೆ ಮೂಲಕ ವಾಹನಗಳ ಪ್ರವೇಶಕ್ಕೆ ತಡೆಯುಂಟಾಗಿತ್ತು. ಆದರೆ ಗೇಟ್‌ನ ತನಕ ವಾಹನದಲ್ಲಿ ಬಂದು ಅಲ್ಲಿಂದ ನಡೆದುಕೊಂಡು ದೇವಸ್ಥಾನಕ್ಕೆ ಬರಲು ಅವಕಾಶ ನೀಡಲಾಗಿತ್ತು. ದೇವಸ್ಥಾನ ಪ್ರವೇಶಿಸಲು ಎದುರು ಭಾಗದಲ್ಲಿ ರಸ್ತೆ ಇರುವುದರಿಂದ ಹಾಗೂ ಕ್ಷೇತ್ರವು ಬಯಲು ಆಲಯ ಆಗಿರುವುದರಿಂದ ಸೊತ್ತುಗಳ ರಕ್ಷಣೆಗೆ ಭದ್ರತೆ ಒದಗಿಸುವ ನಿಟ್ಟಿನಲ್ಲಿ ವ್ಯವಸ್ಥಾಪನಾ ಸಮಿತಿ ಈ ನಿರ್ಧಾರ ಕೈಗೊಂಡಿತ್ತು. ವ್ಯವಸ್ಥಾಪನಾ ಸಮಿತಿಯ ಈ ನಿರ್ಧಾರದ ವಿರುದ್ಧ ಕೃಷ್ಣ ಭಟ್ ಹಾಗೂ ಇತರರು ಜಿಲ್ಲಾಧಿಕಾರಿಯವರಿಗೆ ದೂರು ನೀಡಿದ್ದರು. ಈ ದೂರಿನನ್ವಯ ಜಿಲ್ಲಾಧಿಕಾರಿಯವರ ಸೂಚನೆಯಂತೆ ಗೇಟ್ ತೆರವುಗೊಳಿಸಲಾಗಿದೆ ಎಂದು ತಿಳಿದುಬಂದಿದೆ. ಬೆಳ್ತಂಗಡಿ ತಹಶೀಲ್ದಾರ್ ಸುರೇಶ್‌ಕುಮಾರ್, ಕಂದಾಯ ನಿರೀಕ್ಷಕ ಪವಾಡಪ್ಪ ದೊಡ್ಡಮನಿ, ತಾಲೂಕು ಸರ್ವೆಯರ್ ಹಾಗೂ ಕೊಕ್ಕಡ ಗ್ರಾಮಕರಣಿಕರ ಉಪಸ್ಥಿತಿಯಲ್ಲಿ ಜೆಸಿಬಿ ಮೂಲಕ ರಸ್ತೆಗೆ ಹಾಕಲಾಗಿದ್ದ ಗೇಟ್ ತೆರವುಗೊಳಿಸಿ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. ತೆರವುಗೊಳಿಸಿದ ಗೇಟ್ ಅನ್ನು ದೇವಸ್ಥಾನದ ಸಿಬ್ಬಂದಿಗಳ ಸುಪರ್ದಿಗೆ ತೆಗೆದುಕೊಳ್ಳಲು ಸೂಚಿಸಲಾಗಿದೆ.