ಪುತ್ತೂರು: ಕ್ರೀಡಾ ಕ್ಷೇತ್ರದಲ್ಲಿ ರಾಜ್ಯ, ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ದರ್ಬೆ ಪಾಂಗಳಾಯಿ ಬೆಥನಿ ಆಂಗ್ಲ ಮಾಧ್ಯಮ ಶಾಲೆಯ ಕ್ರೀಡಾಪಟುಗಳಿಗೆ ಸ್ವಾಗತ, ಕ್ರೀಡಾ ವಿಜಯದ ಮೆರವಣಿಗೆ ಹಾಗೂ ಗೌರವಾರ್ಪಣೆಯು ನ.18ರಂದು ನೆರವೇರಿತು.

ಬೆಳಿಗ್ಗೆ ಮಾಯಿ ದೇ ದೇವುಸ್ ಚರ್ಚ್ನ ಪ್ರಾಂಗಣದಿಂದ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು. ಬನ್ನೂರು ಚರ್ಚಿನ ಧರ್ಮಗುರು ಫಾ. ಬಾಲ್ತಜರ್ ಪಿಂಟೊರವರು ಆಶೀರ್ವಚನ ನೀಡಿ ಶುಭ ಹಾರೈಸಿದರು. ಮಂಗಳೂರು ಪ್ರಾಂತ್ಯದ ಕಾರ್ಪೊರೇಟ್ ಮ್ಯಾನೇಜರ್ ಭಗಿನಿ ಡಾ. ಲಿಲ್ಲಿ ಪಿರೇರಾ ಬಿ ಎಸ್. ಸಾಧಕ ಆಟಗಾರರನ್ನು ಶಾಲು ಹೊದಿಸಿ, ಪೇಟ ತೊಡಿಸಿ, ಹಾರ ಹಾಕಿ ಅಭಿನಂದಿಸಿದರು. ಮಾಯಿದೇ ದೇವುಸ್ ಚರ್ಚ್ನ ಪ್ರಧಾನ ಧರ್ಮಗುರು ಫಾ. ಲಾರೆನ್ಸ್ ಮಸ್ಕರೇನಸ್, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಚಕ್ರಪಾಣಿ, ನಗರ ಠಾಣಾ ಎಸ್.ಐ ಆಂಜನೇಯ ರೆಡ್ಡಿ ಇವರುಗಳು ಕ್ರೀಡಾ ಜ್ಯೋತಿಯನ್ನು ಬೆಳಗಿಸುವ ಮೂಲಕ ವಿಜಯೋತ್ಸವದ ಮೆರವಣಿಗೆಗೆ ಚಾಲನೆ ನೀಡಿದರು.
ಮಾಯ್ ದೇ ದೇವುಸ್ ಚರ್ಚ್ನ ಧರ್ಮಗುರುಗಳು ಹಾಗೂ ಮಾಯಿದೇ ದೇವುಸ್ ಪ್ರಾಥಮಿಕ ಶಾಲೆ, ಸೈಂಟ್ ವಿಕ್ಟರ್ಸ್ ಆಂಗ್ಲ ಮಾಧ್ಯಮ ಶಾಲೆ, ಸೈಂಟ್ ವಿಕ್ಟರ್ಸ್ ಪ್ರೌಢಶಾಲೆಯ ಮುಖ್ಯ ಶಿಕ್ಷಕರು ಕ್ರೀಡಾ ಸಾಧಕರನ್ನು ಅಭಿನಂದಿಸಿದರು.
ಚರ್ಚ್ ಬಳಿಯಿಂದ ಹೊರಟ ಮೆರವಣಿಗೆಯು ಮುಖ್ಯ ರಸ್ತೆಯ ಮೂಲಕ ದರ್ಬೆ ತನಕ ಸಾಗಿ ಅಲ್ಲಿಂದ ಶಾಲಾ ಕ್ರೀಡಾಂಗಣದಲ್ಲಿ ಸಮಾರೋಪಗೊಂಡಿತು. ಬಳಿಕ ಶಾಲಾ ಕ್ರೀಡಾಂಗಣದಲ್ಲಿ ಧ್ವಜಾರೋಹಣದ ಮೂಲಕ ವಾರ್ಷಿಕ ಕ್ರೀಡಾಕೂಟವನ್ನು ಪ್ರಾರಂಭಿಸಲಾಯಿತು. ವಿದ್ಯಾರ್ಥಿಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು.
ತರಬೇತಿದಾರರಿಗೆ ಸನ್ಮಾನ:
ಶಾಲಾ ಸಂಚಾಲಕಿ ಭಗಿನಿ ಪ್ರಶಾಂತಿಯವರ ನೇತೃತ್ವದಲ್ಲಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ಕಬಡ್ಡಿ ತಂಡದ ತರಬೇತಿದಾರ ಬಾಲಕೃಷ್ಣ ರೈ ಪೊರ್ದಾಲ್ರವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಮಂಗಳೂರು ಪ್ರಾಂತ್ಯದ ಕಾರ್ಪೊರೇಟ್ ಮ್ಯಾನೇಜರ್ ಭಗಿನಿ ಡಾ. ಲಿಲ್ಲಿ ಪಿರೇರಾ ಬಿ ಎಸ್. ಅಧ್ಯಕ್ಷತೆ ವಹಿಸಿದ್ದರು. ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಚಕ್ರಪಾಣಿ, ಪುತ್ತೂರು ಕ್ಲಸ್ಟರ್ ಸಿಆರ್ಪಿ ಶಶಿಕಲಾ, ಮತ್ತು ಹಿರಿಯ ವಿದ್ಯಾರ್ಥಿನಿ, ರಾಷ್ಟ್ರಮಟ್ಟದ ತ್ರೋಬಾಲ್ ಆಟಗಾರ್ತಿ ತನಿಶಾ ಪಿ. ರೈ., ಶಾಲಾ ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷ ರಘುನಾಥ್ ರೈ, ಮಕ್ಕಳ ಸುರಕ್ಷಾ ಸಮಿತಿಯ ಅಧ್ಯಕ್ಷ ಇಸ್ಮಾಯಿಲ್ ಶಾಫಿ ಮತ್ತು ಉಪಾಧ್ಯಕ್ಷೆ ತೆರೆಸಾ ಸಿಕ್ವೇರಾ ಸಹಿತ ಹಲವು ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಶಾಲಾ ಪ್ರಾಂಶುಪಾಲೆ ಭಗಿನಿ ಅನಿತಾ ಟ್ರೆಸ್ಸಿ ಸ್ವಾಗತಿಸಿ, ನಿರಂಜನ್ ವಂದಿಸಿದರು. ಭಗಿನಿ ರೀನಾ ಹೆಲ್ವಿಟ ಹಾಗೂ ಪವಿತ್ರ ಕಾರ್ಯಕ್ರಮ ನಿರೂಪಿಸಿದರು.
ರಾಷ್ಟ್ರಮಟ್ಟದ ಸಾಧನೆ:
ಶೈಕ್ಷಣಿಕ ಸಾಲಿನಲಿ ಬೆಥನಿ ಶಾಲೆಯ ವಾಲಿಬಾಲ್ ಹಾಗೂ ಕಬಡ್ಡಿ ತಂಡಗಳು ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ ಮತ್ತು ತ್ರೋಬಾಲ್ ತಂಡ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುವುದು ಶಾಲೆಯ ಕ್ರೀಡಾ ಇತಿಹಾಸದಲ್ಲಿ ಅಪರೂಪದ ಸಾಧನೆಯಾಗಿದೆ. ಇದರ ಜೊತೆಗೆ ಈಜು ಮತ್ತು ಕರಾಟೆ ಸ್ಪರ್ಧೆಯಲ್ಲಿ ರಾಜ್ಯಮಟ್ಟದಲ್ಲಿ ಬಹುಮಾನ ಪಡೆದ ಆಟಗಾರರನ್ನು ಮೆರವಣಿಗೆಯಲ್ಲಿ ಗೌರವಿಸಲಾಯಿತು.