ಪುತ್ತೂರು: ಸಾರ್ವಜನಿಕ ಸರಕಾರಿ ಆಸ್ಪತ್ರೆ ಪುತ್ತೂರು ಇಲ್ಲಿ ಆಕಸ್ಮಿಕ ಮರಣಗಳಿಗೆ ನಡೆಸಲಾಗುತ್ತಿರುವ ಮರಣೋತ್ತರ ಶವ ಪರೀಕ್ಷೆ ಸಂದರ್ಭ ಇಲ್ಲಿನ ಸಿಬ್ಬಂದಿಗಳು ಅನಧಿಕೃತ ಹಣ ವಸೂಲಿ ಮಾಡುತ್ತಿರುವುದರಿಂದ ಜನಸಾಮಾನ್ಯರಿಗೆ ತೊಂದರೆಯಾಗುತ್ತಿದೆ ಎಂದು ಆರೋಪಿಸಿ ಚಿಕ್ಕಮುಡ್ನೂರು ಕಲಿಯುಗ ಸೇವಾ ಸಮಿತಿ ವತಿಯಿಂದ ಜಿಲ್ಲಾ ಆರೋಗ್ಯ ಅಧಿಕಾರಿಗಳು ಮತ್ತು ಪುತ್ತೂರು ಶಾಸಕರಿಗೆ ದೂರು ನೀಡಲಾಗಿದೆ.
ಆಕಸ್ಮಿಕ ಮರಣಗಳು ಸಂಭವಿಸಿದಾಗ ಶವ ಪರೀಕ್ಷೆ ಅನಿವಾರ್ಯವಾಗಿರುತ್ತದೆ. ಈ ಸಂದರ್ಭ 2ರಿಂದ 3 ಸಾವಿರ ರೂ.ಗಳನ್ನು ಶವ ಪರೀಕ್ಷೆ ಸಿಬ್ಬಂದಿಗಳು ಶವದ ವಾರೀಸುದಾರರನ್ನು ಕೇಳುತ್ತಾರೆ. ಬೆಳಗ್ಗಿನಿಂದ ಸಂಜೆವರೆಗೆ ಶವವನ್ನು ಆಸ್ಪತ್ರೆಯಲ್ಲಿ ಇಟ್ಟು ಕಾಯುತ್ತಿರುವ ವಾರಿಸುದಾರರು ಹಣ ನೀಡದೇ ಇದ್ದಲ್ಲಿ ಇನ್ನಷ್ಟು ತೊಂದರೆ ನೀಡಬಹುದು ಎಂದು ಹೆದರಿ ಹಣ ನೀಡಬೇಕಾದ ಸನ್ನಿವೇಶಗಳಿವೆ ಎಂದು ದೂರಿನಲ್ಲಿ ತಿಳಿಸಲಾಗಿದ್ದು, ಈ ಕುರಿತು ಪರಿಶೀಲಿಸಿ ಸೂಕ್ತ ಕ್ರಮಕ್ಕಾಗಿ ವಿನಂತಿಸಲಾಗಿದೆ.