ಉಪ್ಪಿನಂಗಡಿ: ಮನೆ ಬದಿ ತಡೆಗೋಡೆ ಕಟ್ಟಿ ಅದರ ಬದಿಯಲ್ಲೇ ಚರಂಡಿಯನ್ನು ನಿರ್ಮಿಸಿ ಅದರ ಮಣ್ಣನ್ನು ರಸ್ತೆ ಬದಿ ಹಾಕಿದ ಪ್ರಕರಣವೊಂದಕ್ಕೆ ಸಂಬಂಧಿಸಿ ಉಪ್ಪಿನಂಗಡಿ ಗ್ರಾ.ಪಂ.ನ ಪಿಡಿಒ ಅವರು ಕ್ರಮ ಕೈಗೊಂಡಿದ್ದು, ರಸ್ತೆ ಬದಿಯಲ್ಲಿದ್ದ ಮಣ್ಣನ್ನು ವಾಪಸ್ ಚರಂಡಿಗೆ ಹಾಕಿದ್ದರು. ಇದರಿಂದಾಗಿ ಶನಿವಾರದ ಮಳೆಗೆ ಆ ಮನೆಯ ಅಂಗಳವಿಡೀ ನೀರು ತುಂಬಿಕೊಂಡು ಮತ್ತೊಂದು ಸಮಸ್ಯೆಗೆ ಕಾರಣವಾಗಿದೆ ಎಂಬ ವೀಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲಾಗುತ್ತಿದ್ದು, ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗುತ್ತಿದೆ.
ಉಪ್ಪಿನಂಗಡಿಯ ಕುಕ್ಕುಜೆಯ ಎಚ್.ಕೆ. ಹಕೀಂ ಅವರ ಮನೆ ಹಳೆಗೇಟು- ಮರ್ದಾಳದ ರಾಜ್ಯ ಹೆದ್ದಾರಿ ಬದಿಯಲ್ಲಿದ್ದು, ಅಲ್ಲಿಯೇ ಚರಂಡಿಯೊಂದು ಇದ್ದಿದ್ದರಿಂದ ಮನೆ ಕುಸಿತದ ಭೀತಿಗೊಳಗಾಗಿದ್ದ ಅವರು ಮನೆ ಹಿಂಬದಿ ತಡೆಗೋಡೆಯನ್ನು ಕಟ್ಟಿದ್ದರು. ತಡೆಗೋಡೆಯ ಬದಿಯಲ್ಲೇ ಚರಂಡಿಯನ್ನೂ ನಿರ್ಮಿಸಿದ್ದರು. ಆದರೆ ಚರಂಡಿಯ ಮಣ್ಣನ್ನು ಮಾತ್ರ ಹೆದ್ದಾರಿಯ ಬದಿಗೆ ಹಾಕಿದ್ದರು. ಇದರ ತೆರವಿಗೆ ಉಪ್ಪಿನಂಗಡಿ ಗ್ರಾ.ಪಂ. ಪಿಡಿಒ ಹಾಗೂ ಸಿಬ್ಬಂದಿ ತೆರಳಿದ್ದು, ರಸ್ತೆಯ ಮೇಲಿದ್ದ ಮಣ್ಣನ್ನು ಜೆಸಿಬಿ ಮೂಲಕ ವಾಪಸ್ ಚರಂಡಿಗೆ ಹಾಕಿ ಬಂದಿದ್ದರು. ಶನಿವಾರ ಸಂಜೆ ಈ ಭಾಗದಲ್ಲಿ ಭಾರೀ ಮಳೆ ಸುರಿದಿದ್ದು, ಇಲ್ಲಿದ್ದ ಚರಂಡಿಯನ್ನು ಗ್ರಾ.ಪಂ.ನವರು ಮುಚ್ಚಿದ್ದರಿಂದ ಮಳೆ ನೀರು ಹೋಗಲು ಜಾಗವಿಲ್ಲದೆ ಹಕೀಂ ಅವರ ಮನೆಯ ಅಂಗಳವಿಡೀ ಕೆಸರು ನೀರು ನುಗ್ಗುವಂತಾಗಿದೆ ಎನ್ನುವ ವೀಡಿಯೋ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲಾಗುತ್ತಿದ್ದು, ಗ್ರಾ.ಪಂ. ಪಂಚಾಯತ್ ಪಿಡಿಒ ಅವರ ನಡೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.