ಕೆಯ್ಯೂರು: ಕುರಿಯ ಮಾಡಾವು ಏಳ್ನಾಡುಗುತ್ತು ಅಮ್ಮಕ್ಕ ತ್ಯಾಂಪಣ್ಣ ರೈ ಸ್ಮರಣಾರ್ಥ 11ನೇ ವರ್ಷದ ಪುಸ್ತಕ ವಿತರಣೆ – ವಿದ್ಯಾಸಿರಿ ಪುರಸ್ಕಾರ, ಯಕ್ಷಗಾತ ತರಗತಿ ಉದ್ಘಾಟನೆ

0

ಜೀವನದಲ್ಲಿ ಸಮಾಜಕ್ಕಾಗಿ ನಾವೇನು ಮಾಡಿದ್ದೇವೆ ಎನ್ನುವುದು ಬಹಳ ಮುಖ್ಯ: ಎಸ್.ಬಿ.ಜಯರಾಮ ರೈ

ಪುತ್ತೂರು: ಭಗವಂತ ಬದುಕು ಎಲ್ಲರಿಗೂ ಕೊಟ್ಟಿದ್ದಾನೆ ಆದರೆ ಇಂತಹ ಸುಂದರ ಬದುಕಿನಲ್ಲಿ ಸಮಾಜಕ್ಕೆ ನಾವೇನು ಕೊಟ್ಟಿದ್ದೇವೆ ಎನ್ನುವುದು ಬಹಳ ಮುಖ್ಯವಾಗುತ್ತದೆ. ನಮ್ಮ ಜೀವಿತಾವಧಿಯಲ್ಲಿ ಒಳ್ಳೆಯ ಕೆಲಸಗಳನ್ನು ಮಾಡುತ್ತಾ, ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡರೆ ನಮ್ಮ ಜೀವನ ಸಾರ್ಥಕವಾಗುವ ಜೊತೆಗೆ ನಾವು ಬದುಕಿದ್ದೂ ಸಾರ್ಥಕವಾಗುತ್ತದೆ ಇಂತಹ ಒಳ್ಳೆಯ ಕೆಲಸವನ್ನು ಡಾ.ಹರ್ಷ ಕುಮಾರ್ ರೈಯವರು ಮಾಡುತ್ತಾ ಬಂದಿದ್ದಾರೆ. ಇದು ಎಲ್ಲರಿಗೂ ಒಂದು ಮಾದರಿ ಕಾರ್ಯವಾಗಿದೆ ಎಂದು ಕೆ.ಎಂ.ಎಫ್ ಉಪಾಧ್ಯಕ್ಷ ಎಸ್.ಬಿ.ಜಯರಾಮ ರೈ ಹೇಳಿದರು.

ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕ, ಕರ್ನಾಟಕ ಪಬ್ಲಿಕ್ ಸ್ಕೂಲ್ ಕೆಯ್ಯೂರು ಇದರ ಸಹಯೋಗದೊಂದಿಗೆ ಜನ್ಮ ಫೌಂಡೇಶನ್ ಟ್ರಸ್ಟ್ ಪುತ್ತೂರು ನೇತೃತ್ವದಲ್ಲಿ ಜೂ.17ರಂದು ಕೆಯ್ಯೂರು ಕೆಪಿಎಸ್ ಹಿರಿಯ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ನಡೆದ ಕುರಿಯ ಮಾಡಾವು ಏಳ್ನಾಡುಗುತ್ತು ಅಮ್ಮಕ್ಕ ತ್ಯಾಂಪಣ್ಣ ರೈ ಸ್ಮರಣಾರ್ಥ ಕೆಯ್ಯೂರು ಕೆ.ಪಿ.ಎಸ್ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ 11ನೇ ವರ್ಷದ ಪುಸ್ತಕ ವಿತರಣೆ, ವಿದ್ಯಾಸಿರಿ ಪುರಸ್ಕಾರ ಹಾಗೂ ಯಕ್ಷಗಾನ ತರಬೇತಿಯ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ತಾನು ಕಲಿತ ಶಾಲೆಗೆ ತನ್ನಿಂದ ಸಾಧ್ಯವಾಗುವ ಸೇವೆಯನ್ನು ಮಾಡುತ್ತಾ ಬಂದಿರುವ ಹರ್ಷ ಕುಮಾರ್ ರೈಯವರಿಂದ ಇನ್ನಷ್ಟು ಸಮಾಜಮುಖಿ ಕಾರ್ಯಗಳು ನಡೆದು ಬರಲಿ ಎಂದ ಎಸ್.ಬಿ.ಜಯರಾಮ ರೈಯವರು, ಸಮಾಜಕ್ಕೆ ಮಾದರಿಯಾಗಬಲ್ಲಂತಹ ಇಂತಹ ಕೆಲಸಗಳು ಪ್ರತಿ ಕಡೆಯಲ್ಲೂ ನಡೆಯಲಿ ಎಂದು ಹೇಳಿ ಶುಭ ಹಾರೈಸಿದರು.

ಇಂತಹ ಕಾರ್ಯಕ್ರಮ ವಿದ್ಯಾರ್ಥಿಗಳ ಮುಂದಿನ ಜೀವನಕ್ಕೆ ಪ್ರೇರಣೆ: ಪುತ್ತೂರು ಉಮೇಶ್ ನಾಯಕ್
ಸಭಾಧ್ಯಕ್ಷತೆ ವಹಿಸಿ, ಪ್ರತಿಭಾ ಪುರಸ್ಕಾರ ನಡೆಸಿಕೊಟ್ಟ ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕದ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್‌ರವರು ಮಾತನಾಡಿ, ಇದೊಂದು ಮಾದರಿ ಕಾರ್ಯಕ್ರಮವಾಗಿದೆ. ಇದರಿಂದ ಅದೆಷ್ಟೋ ವಿದ್ಯಾರ್ಥಿಗಳಿಗೆ ಮುಂದೊಂದು ದಿನ ನಾವು ಕಲಿತ ಶಾಲೆಗೆ ಏನಾದರೂ ಸೇವೆ ಮಾಡಬೇಕು ಎಂಬ ಪ್ರೇರಣೆ ಮೂಡುತ್ತದೆ. ಕೆಯ್ಯೂರು ಗ್ರಾಮ ಸಾಹಿತ್ಯದಿಂದ ಹಿಡಿದು ಶೈಕ್ಷಣಿಕ ಕ್ಷೇತ್ರದ ತನಕ ಎಲ್ಲಾ ಕ್ಷೇತ್ರಗಳಲ್ಲೂ ಸಾಧನೆ ಮಾಡಿದವರ ಗ್ರಾಮವಾಗಿದೆ. ಇಲ್ಲಿ ಏನೇ ಕಾರ್ಯಕ್ರಮ ಮಾಡಿದರೂ ಅದು ಯಶಸ್ವಿಯಾಗುತ್ತದೆ. ಕಳೆದ 10 ವರ್ಷಗಳಿಂದ ಡಾ.ಹರ್ಷ ಕುಮಾರ್ ರೈಯವರು ತಾನು ಕಲಿತ ಶಾಲೆಯ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆಯೊಂದಿಗೆ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಕೆಲಸ ಮಾಡುತ್ತಿರುವುದು ಒಂದು ಮಾದರಿ ಕಾರ್ಯವಾಗಿದೆ. ಹರ್ಷ ಕುಮಾರ್‌ರವರಿಂದ ಇನ್ನಷ್ಟು ಸಮಾಜಮುಖಿ ಕೆಲಸಗಳು ಮೂಡಿಬರಲಿ ಎಂದು ಹೇಳಿ ಶುಭ ಹಾರೈಸಿದರು.

ಪ್ರತಿಭೆಗೆ ಪ್ರೋತ್ಸಾಹದ ಅಗತ್ಯವಿದೆ : ನರಸಿಂಹ ಪೈ
ಯಕ್ಷಗಾನ ವೇಷದ ಪೈಂಟಿಂಗ್ ಕಲಾಕೃತಿಯನ್ನು ಅನಾವರಣ ಮಾಡುವ ಯಕ್ಷಗಾನ ತರಗತಿ ತರಬೇತಿಯನ್ನು ಉದ್ಘಾಟಿಸಿದ ರೋಟರಿ ಜಿಲ್ಲೆ 3181ರ ನಿಯೋಜಿತ ಅಸಿಸ್ಟೆಂಟ್ ಗವರ್ನರ್ ನರಸಿಂಹ ಪೈಯವರು ಮಾತನಾಡಿ, ಎಲ್ಲಾ ವಿದ್ಯಾರ್ಥಿಗಳಲ್ಲೂ ಒಂದಲ್ಲ ಒಂದು ಪ್ರತಿಭೆ ಇದ್ದೇ ಇರುತ್ತದೆ. ಆದರೆ ಆ ಪ್ರತಿಭೆಗೆ ಪ್ರೋತ್ಸಾಹ ಕೊಡುವುದು ನಮ್ಮೆಲ್ಲರ ಕರ್ತವ್ಯವಾಗಬೇಕು, ಆಗ ಮಾತ್ರ ಪ್ರತಿಭೆ ಅನಾವರಣಗೊಳ್ಳಲು ಸಾಧ್ಯವಿದೆ. ಯಕ್ಷಗಾನ ತರಗತಿ ತರಬೇತಿಯು ಆರಂಭವಾಗಿರುವುದು ಒಂದು ಒಳ್ಳೆಯ ಕೆಲಸವಾಗಿದೆ. ವಿದ್ಯಾರ್ಥಿಗಳು ಇದರ ಪ್ರಯೋಜನವನ್ನು ಪಡೆದುಕೊಳ್ಳುವಂತೆ ತಿಳಿಸಿ ಶುಭ ಹಾರೈಸಿದರು.

ಗ್ರಾಮೀಣ ಶಾಲೆಯಲ್ಲೂ ಯಕ್ಷಗಾನ ತರಬೇತಿ ಆರಂಭಗೊಳ್ಳುತ್ತಿರುವುದು ಹೆಮ್ಮೆಯ ಸಂಗತಿ: ಎ.ಕೆ ಜಯರಾಮ ರೈ
ವಿದ್ಯಾಸಿರಿ ಪುರಸ್ಕಾರ ನಡೆಸಿಕೊಟ್ಟ ಕೆಯ್ಯೂರು ಗ್ರಾಪಂ ಮಾಜಿ ಅಧ್ಯಕ್ಷ ಎ.ಕೆ ಜಯರಾಮ ರೈ ಮಾತನಾಡಿ, ಡಾ.ಹರ್ಷ ಕುಮಾರ್ ರೈಯವರು ತನ್ನ ಕುಟುಂಬದವರ ಹೆಸರಿನಲ್ಲಿ ಕಳೆದ 11 ವರ್ಷಗಳಿಂದ ಶಾಲಾ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ, ಪ್ರತಿಭಾ ಪುರಸ್ಕಾರ ಮಾಡುತ್ತಾ ಬಂದಿರುವುದು ಅತ್ಯಂತ ಒಳ್ಳೆಯ ಕೆಲಸವಾಗಿದೆ. ಬಲ ಕೈಯಲ್ಲಿ ಕೊಟ್ಟದ್ದು ಎಡ ಕೈಗೆ ಗೊತ್ತಾಗಬಾರದು ಎಂಬ ಮನಸ್ಸಿನವರು ಹರ್ಷ ಕುಮಾರ್ ರೈಯವರು, ಈ ವರ್ಷ ಹೊಸತಾಗಿ ತುಳುನಾಡಿನ ಗಂಡುಕಲೆ ಯಕ್ಷಗಾನ ತರಬೇತಿಯನ್ನು ಕೂಡ ಆರಂಭಿಸುವ ಮೂಲಕ ವಿದ್ಯಾರ್ಥಿಗಳಿಗೆ ಯಕ್ಷಗಾನ ಕಲಿಯಲು ಅವಕಾಶ ಮಾಡಿಕೊಟ್ಟಿದ್ದಾರೆ. ಹರ್ಷ ಕುಮಾರ್‌ರವರಿಂದ ಇನ್ನಷ್ಟು ಒಳ್ಳೆಯ ಕೆಲಸಗಳು ಮೂಡಿಬರಲಿ ಎಂದು ಹೇಳಿ ಶುಭ ಹಾರೈಸಿದರು.

ವಿಭಿನ್ನ ರೀತಿಯಲ್ಲಿ ಯಕ್ಷಗಾನ ತರಗತಿ ಉದ್ಘಾಟನೆ
ಯಕ್ಷಗಾನ ಹಾಗೂ ನಾಟಕ ರಂಗಭೂಮಿ ಕಲಾವಿದ ಸುಬ್ಬು ಸಂಟ್ಯಾರ್‌ರವರಿಂದ ಯಕ್ಷಗಾನ ತರಬೇತಿ ತರಗತಿ ನಡೆಯಲಿದ್ದು, ಇದರ ಉದ್ಘಾಟನೆ ವಿಭಿನ್ನ ರೀತಿಯಲ್ಲಿ ನಡೆಯಿತು. ಮೊದಲಿಗೆ ಯಕ್ಷಗಾನ ವೇಷದ ಪೈಂಟಿಂಗ್ ಕಲಾಕೃತಿಯ ಅನಾವರಣದ ಬಳಿಕ ವೇದಿಕೆಯಲ್ಲೇ ಸುಬ್ಬು ಸಂಟ್ಯಾರ್ ಮತ್ತು ಬಳಗದವರಿಂದ ಗಣಪತಿ ಸ್ತುತಿಯನ್ನು ಚೆಂಡೆ, ತಬಲದೊಂದಿಗೆ ಮಾಡಲಾಯಿತು. ಗ್ರಾಮೀಣ ಭಾಗದ ಶಾಲೆಯಲ್ಲಿ ಇದೇ ಮೊದಲ ಬಾರಿಗೆ ಯಕ್ಷಗಾನ ತರಬೇತಿ ನಡೆಯುತ್ತಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಸುಬ್ಬು ಸಂಟ್ಯಾರ್‌ರವರು ಯಕ್ಷಗಾನ ಹಾಗೂ ತರಬೇತಿಯ ಬಗ್ಗೆ ಮಾಹಿತಿ ನೀಡಿದರು.
ವೇದಿಕೆಯಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಪ್ರಾಂಶುಪಾಲ ಇಸ್ಮಾಯಿಲ್ ಪಿ, ಎಸ್.ಡಿ.ಎಂ.ಸಿ ಉಪಾಧ್ಯಕ್ಷ ಚರಣ್ ಕುಮಾರ್ ಸಣಂಗಳ ಉಪಸ್ಥಿತರಿದ್ದರು. ಶಾಲಾ ಮುಖ್ಯಗುರು ಬಾಬು ಎಂ. ಸ್ವಾಗತಿಸಿದರು. ಜಯಂತ ಪೂಜಾರಿ ಕೆಂಗುಡೇಲು, ಧರಣಿ ಸಿ.ಬಿ, ಯಶಸ್ವಿನಿ, ಸುಶೀಲಾ, ಬಾಲಕೃಷ್ಣ ಗೌಡ, ಶಾಲಿನಿ ಬಿ.ಟಿ ಅತಿಥಿಗಳಿಗೆ ಹೂ ನೀಡಿ ಸ್ವಾಗತಿಸಿದರು. ಸಹ ಶಿಕ್ಷಕ ಗಂಗಾಧರ ರೈ ವಂದಿಸಿದರು. ಸಹ ಶಿಕ್ಷಕಿ ಸುಪ್ರಭಾ ಪಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ಪ್ರಕಾಶ್ ಹುಲಿಕಟ್ಟಿ, ಶಿಕ್ಷಕಿಯರಾದ ಶಾಲಿನಿ ಬಿ.ಟಿ, ಶೈಲಜಾ ಸಿ.ಎನ್, ಆಗ್ನೇಸ್ ಪ್ರೆಸಿಲ್ಲಾ ಪಾಯಸ್, ಸೌಮ್ಯ ಕುಮಾರಿ ಪಿ, ಗೀತಾ ಬಿ, ಕಮಲ ಪಿ, ದಿವ್ಯ, ಅಶ್ವಿನಿ, ಸೌಮ್ಯ ಡಿ, ಸೌಮ್ಯ ಎಂ, ಜ್ಯೋತಿ, ರಾಜೇಶ್ವರಿ ಸಹಕರಿಸಿದ್ದರು.

ದೇವಿಪ್ರಸಾದ್‌ಗೆ ಅತ್ಯುತ್ತಮ ವಿದ್ಯಾರ್ಥಿ ಪ್ರತಿಭಾ ಪುರಸ್ಕಾರ
ಕಲಿಕೆ, ಕ್ರೀಡೆ, ಸಾಂಸ್ಕೃತಿಕ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಸಾಧನೆ ಮಾಡಿದ ಶಾಲೆಯ ಓರ್ವ ವಿದ್ಯಾರ್ಥಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು. ಕಳೆದ ಸಾಲಿನ 8ನೇ ತರಗತಿಯ ದೇವಿಪ್ರಸಾದ್‌ರವರನ್ನು ಅತ್ಯುತ್ತಮ ವಿದ್ಯಾರ್ಥಿ ಎಂದು ಬಿರುದು ನೀಡಿ ಫಲ, ಪುಷ್ಪ,ಶಾಲು, ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಿ ಅಭಿನಂದಿಸಲಾಯಿತು.

ವಿದ್ಯಾಸಿರಿ ಪುರಸ್ಕಾರ
2022-23ನೇ ಶೈಕ್ಷಣಿಕ ವರ್ಷದಲ್ಲಿ ಶಾಲೆಯ 1ರಿಂದ 8ನೇ ತರಗತಿ ತನಕ ತರಗತಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ವಿದ್ಯಾಸಿರಿ ಪುರಸ್ಕಾರ ನೀಡಲಾಯಿತು. 8ನೇ ತರಗತಿಯ ತೇಜಸ್, 7ನೇ ತರಗತಿಯ ತನುಶ್, 6ನೇ ತರಗತಿಯ ಮೊಹಮ್ಮದ್ ಆಬಿದ್ ಬಿ.ಕೆ.ಎಚ್, 5ನೇ ತರಗತಿಯ ಯಸ್ಮಿ ಕೆ, 4ನೇಯ ಮಹಮ್ಮದ್ ಮುಸ್ತಾಕ್, 3ನೇಯ ಫಾತಿಮ ಮಿನ್ ಹಾ, 2ನೇಯ ಪ್ರಾವೀಣ್ಯ, 1ನೇ ಯ ಮೋಕ್ಷ ಪಿ, ಆಂಗ್ಲ ಮಾಧ್ಯಮದ 4ನೇಯ ಸಾನ್ವಿ ಕೆ.ಪಿ, 3ನೇಯ ತೀಕ್ಷಾ ಪಿ, 2ನೇಯ ವಿಜೇಶ್,1ನೇಯ ವಾಗ್ವಿ ಜೆ.ರವರುಗಳನ್ನು ವಿದ್ಯಾಸಿರಿ ಪುರಸ್ಕಾರ ನೀಡಿ ಗೌರವಿಸಲಾಯಿತು.

500 ಮಕ್ಕಳಿಗೆ 2ಸಾವಿರಕ್ಕೂ ಅಧಿಕ ಪುಸ್ತಕ ವಿತರಣೆ
ಪ್ರತಿ ವರ್ಷದಂತೆ ಈ ವರ್ಷವೂ ಶಾಲೆಯ 1ರಿಂದ 8ನೇ ತರಗತಿ ವರೇಗಿನ ಸುಮಾರು 500ವಿದ್ಯಾರ್ಥಿಗಳಿಗೆ ತಲಾ ಒಬ್ಬ ವಿದ್ಯಾರ್ಥಿಗೆ 4 ಪುಸ್ತಕದಂತೆ ಸುಮಾರು 2 ಸಾವಿರಕ್ಕೂ ಅಧಿಕ ಬರೆಯುವ ನೋಟ್ ಪುಸ್ತಕಗಳನ್ನು ವಿತರಣೆ ಮಾಡಲಾಯಿತು.

“ ಕುರಿಯ ಮಾಡಾವು ಏಳ್ನಾಡುಗುತ್ತು ಅಮ್ಮಕ್ಕ ತ್ಯಾಂಪಣ್ಣ ರೈ ಸ್ಮರಣಾರ್ಥ ಕಳೆದ 11 ವರ್ಷಗಳಿಂದ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ, ವಿದ್ಯಾಸಿರಿ ಪುರಸ್ಕಾರ ಮಾಡುತ್ತಾ ಬಂದಿದ್ದೇವೆ. ಶಾಲಾ ಶಿಕ್ಷಕ ವೃಂದದವರ ಹಾಗೂ ಸರ್ವರ ಸಹಕಾರದೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಾ ಬರುತ್ತಿದೆ. ನನಗೆ ಆಯುಷ್ಯ ಮತ್ತು ಆರ್ಥಿಕ ಬಲ ಇರುವ ತನಕ ಈ ಕಾರ್ಯಕ್ರಮವನ್ನು ಮುಂದುವರಿಸಿಕೊಂಡು ಬರುತ್ತೇನೆ. ಎಲ್ಲರ ಸಹಕಾರ, ಆಶೀರ್ವಾದ ಇರಲಿ.”

ಡಾ.ಹರ್ಷ ಕುಮಾರ್ ರೈ, ಅಧ್ಯಕ್ಷರು ಜನ್ಮ ಫೌಂಡೇಶನ್ ಟ್ರಸ್ಟ್ ಪುತ್ತೂರು

LEAVE A REPLY

Please enter your comment!
Please enter your name here