ಪುತ್ತೂರಿನಲ್ಲಿ ಮೇಳೈಸಿದ ಎರಡು ದಿನಗಳ ಹಲಸು, ಹಣ್ಣುಗಳ ಮೇಳ ಯಶಸ್ವಿ-ನಿರೀಕ್ಷೆಗೂ ಮೀರಿದ ಜನರ ಸ್ಪಂದನೆ

0

ಕೇರಳ ಸರಕಾರದಂತೆ ಕರ್ನಾಟಕದಲ್ಲೂ ಹಲಸಿಗೆ ಮೌಲ್ಯವರ್ಧನೆ ಅಗತ್ಯ – ಅಶೋಕ್ ಕುಮಾರ್ ರೈ
ಮುಂದಿನ ಸಲ ಶಾಸಕರ ಜೊತೆಯಲ್ಲಿ ನಿಂತು ಮೇಳ – ಅನಂತಪ್ರಸಾದ್ ನೈತ್ತಡ್ಕ
ಪ್ರತಿ ಮನೆಯಲ್ಲೂ ಹಲಸು ಬೆಳೆಸಿದಾಗ ಕಲ್ಪವೃಕ್ಷವಾಗುತ್ತದೆ – ಎ ಪಿ ಸದಾಶಿವ ಮರಿಕೆ
ಹಳ್ಳಿಯ ಹಣ್ಣು ಹೊರ ದೇಶಕ್ಕೆ ಪ್ರಚಾರ – ಪುರುಷೋತ್ತಮ ಶೆಟ್ಟಿ

ಪುತ್ತೂರು: ನವತೇಜ ಟ್ರಸ್ಟ್ ಪುತ್ತೂರು, ಬೆಂಗಳೂರಿನ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ, (ಐ.ಐ.ಹೆಚ್.ಆರ್.) ಮತ್ತು ಜೆ.ಸಿ.ಐ. ಪುತ್ತೂರು ಇವರ ಸಂಯುಕ್ತ ಆಶ್ರಯದಲ್ಲಿ ಬಪ್ಪಳಿಗೆ ಜೈನ ಭವನದಲ್ಲಿ ನಡೆದ ಎರಡು ದಿನಗಳ ಹಲಸು ಮತ್ತು ಹಣ್ಣುಗಳ ಮೇಳ ಯಶಸ್ವಿಯಾಗಿದೆ. ಮೇಳಕ್ಕೆ ನಿರೀಕ್ಷೆಗೂ ಮೀರಿದ ಜನರು ಬಂದಿರುವುದು ಮೇಳದ ಯಶಸ್ವಿಗೆ ಕಾರಣವಾಗಿದೆ. ಎರಡು ದಿನಗಳಲ್ಲಿ ಹಲಸಿನ ಮೇಳದ ಜೊತೆಗೆ ವಿವಿಧ ಸ್ಪರ್ಧೆಗಳು ನಡೆದಿದ್ದು, ಜೂ. 18 ರಂದು ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ ನಡೆಯಿತು.


ಕೇರಳ ಸರಕಾರದಂತೆ ಕರ್ನಾಟಕದಲ್ಲೂ ಹಲಸಿಗೆ ಮೌಲ್ಯವರ್ಧನೆ ಅಗತ್ಯ :
ಶಾಸಕ ಅಶೋಕ್ ಕುಮಾರ್ ರೈ ಅವರು ಮಾತನಾಡಿ ಕೇರಳದಲ್ಲಿ ಹಲಸಿನ ಹಣ್ಣಿಗೆ ಆದ್ಯತೆ ನೀಡಿ. ಅದರ ಬೇರೆ ಬೇರೆ ತಳಿಯನ್ನು ಬೆಳೆಸುವ ಮತ್ತು ಅದರ ಉತ್ಪನ್ನಗಳನ್ನು ಎಲ್ಲಾ ದೇಶಗಳಿಗೆ ರಫ್ತು ಮಾಡುವಲ್ಲಿ ಸರಕಾರ ಪ್ರೇರಣೆ ಕೊಟ್ಟಿದೆ. ಸರಕಾರದಿಂದ ಆ ಯೋಜನೆ ಕಾರ್ಯಗತಗೊಳಿಸುವ ಎಲ್ಲಾ ವಿಚಾರ ಮಾಡಿದ್ದಾರೆ. ಬಹುಶಃ ಕರ್ನಾಟಕದಲ್ಲೂ ಹಲಸಿನ ಹಣ್ಣಿಗೆ ಹೆಚ್ಚಿನ ಮಹತ್ವ ನೀಡಿದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಹಲಸಿನ ಪ್ರಾಮುಖ್ಯತೆ ಹೆಚ್ಚುತ್ತದೆ. ಈ ನಿಟ್ಟಿನಲ್ಲಿ ಹಲಸಿಗೆ ಮೌಲ್ಯವರ್ಧನೆ ಅಗತ್ಯ ಎಂದು ಹೇಳಿದರು.


ಜಾಗ ಕೊಡುತ್ತೇನೆ, ದುಡ್ಡು ಕೊಡುತ್ತೇನೆ, ಗಿಡ ನೆಟ್ಟರಾಯಿತು:
ಮಂಗಳೂರಿನಲ್ಲಿ ನನ್ನದು ದೊಡ್ಡ ಜಾಗ ಇದೆ. 32 ಎಕ್ರೆ ಇದೆ. ಅಲ್ಲಿ ಸ್ವಲ್ಪ ಪಕ್ಷಿಗಳಿಗೆ, ಮನುಷ್ಯರಿಗೆ, ಪರಿಸರಕ್ಕಾಗಿ ಸಸಿ ನೆಡಬಹುದು. ನಾನು ಜಾಗ ಕೊಡುತ್ತೇನೆ. ದುಡ್ಡು ಕೊಡುತ್ತೇನೆ. ನೆಡುವ ಜನ ಸಿಕ್ಕಿದರೆ ಸಾಕು. ನಿಮಗೆ ತಳಿಗಳ ಬಗ್ಗೆ ಸಂಶೋಧನೆಯೂ ಆಗುತ್ತದೆ ಎಂದು ಅಶೋಕ್ ಕುಮಾರ್ ರೈ ಹೇಳಿದರು.


ಮುಂದಿನ ಸಲ ಶಾಸಕರ ಜೊತೆಯಲ್ಲಿ ನಿಂತು ಮೇಳ:
ಅಧ್ಯಕ್ಷತೆ ವಹಿಸಿದ ನವತೇಜ ಟ್ರಸ್ಟ್ ಇದರ ಅಧ್ಯಕ್ಷ ಅನಂತಪ್ರಸಾದ್ ನೈತ್ತಡ್ಕ ಅವರು ಮಾತನಾಡಿ ಹಲಸಿನ ಮೇಳವನ್ನು ಮಹಾಲಿಂಗೇಶ್ವರ ಆಶೀರ್ವಾದದಿಂದ ಆರಂಭಿಸಿ ಪ್ರತಿ ಹಂತದಲ್ಲೂ ಮೇಳಕ್ಕೆ ಜನರು ಜಾಸ್ತಿ ಆಗುತ್ತಾ ಇದ್ದಾರೆ. 6ನೇ ಮೇಳ ಬೃಹತ್ ಯಶಸ್ವಿ ಕಂಡಿದೆ. ಮುಂದಿನ ಸಲ ಶಾಸಕರು ಹೇಳಿದಂತೆ ಅವರ ಜೊತೆಯಲ್ಲಿ ನಿಂತು ಕಾರ್ಯಕ್ರಮ ಮಾಡಲಿದ್ದೇವೆ ಎಂದರು.


ಪ್ರತಿ ಮನೆಯಲ್ಲೂ ಹಲಸು ಬೆಳಸಿದಾಗ ಕಲ್ಪವೃಕ್ಷವಾಗುತ್ತದೆ:
ಸಾವಯವ ಕೃಷಿಕರಾದ ಎ.ಪಿ ಸದಾಶಿವ ಮರಿಕೆ ಅವರು ಸಮಾರೋಪ ಭಾಷಣ ಮಾಡಿದರು. ಹಿಂದೆ ಊಟಕ್ಕೆ ಗತಿ ಇಲ್ಲದಾಗ ಹಲಸು ನಮ್ಮ ದಾಹ ತೀರಿಸಿತ್ತು. ಆದರೆ ಹಲಸನ್ನು ಮರಿಯೆತ್ತಾ ಬಂದೆವು. ಉನ್ನುವ ಕಾಲದಲ್ಲಿ ಲಾಚಾರಾಗಿದ್ದ ಮನುಷ್ಯ ಹಲಸು ತಿಂದು ಗಟ್ಡಿಮುಟ್ಟಾದ ಕಾಲವೂ ಇತ್ತು. ಹಾಗಾಗಿ ಶ್ರಮ ಸಹಿತ ಕೆಲಸ ಮಾಡಿದವನಿಗೆ ಹಲಸು ಜೀರ್ಣ ಆಗುತ್ತದೆ. ಇವತ್ತು ಹಲಸು ಪೇಟೆಯಿಂದ ಖರೀದಿಗೆ ಮಾತ್ರ ಸೀಮಿತ ಆಗುತ್ತಿದೆ. ಆಹಾರ ಬಳಕೆ ಕಡೆಗೆ ಇನ್ನೂ ಹೋಗಿಲ್ಲ. ಪ್ರತಿ ಮನೆಯಲ್ಲಿ ಹಲಸು ಬೆಳೆಸಿ ಬಳಸಿಕೊಂಡು ಬಂದಾಗ ಅದು ನಿಜವಾದ ಮೌಲ್ಯ ಬರುತ್ತದೆ. ಕಲ್ಪವೃಕ್ಷವಾಗುತ್ತದೆ. ಇದರ ಜೊತೆಗೆ ಆಯಾ ಊರಿಗೆ ಯಾವುದು ಹಿತ ಅದೇ ಹಲಸಿನ ಸಸಿ ನೆಡಬೇಕು ಎಂದು ಹೇಳಿದರು.


ಹಳ್ಳಿಯ ಹಣ್ಣು ಹೊರ ದೇಶಕ್ಕೆ ಪ್ರಚಾರ:
ಜೇಸಿಐ ವಲಯಾಧ್ಯಕ್ಷ ಪುರುಷೋತ್ತಮ ಶೆಟ್ಟಿಯವರು ಮಾತನಾಡಿ ಜೇಸಿಯು ಸಮಾಜಮುಖಿ ಕಾರ್ಯಕ್ರಮ ಹಾಕುವ ಮೂಲಕ ಹಲಸಿಗೆ ಉತ್ತಮ ಮೌಲ್ಯ ಸಿಕ್ಕಿದೆ. ಇವತ್ತು ಕೇವಲ ದಕ್ಷಿಣ ಕನ್ನಡ ಜಿಲ್ಲೆ ಮಾತ್ರವಲ್ಲ ಉತ್ತರ ಕನ್ನಡ ಜಿಲ್ಲೆಯ ತನಕ ಇದರ ಪ್ರಚಾರ ಹೆಚ್ಚಾಗಿದೆ. ಹಳ್ಳಿಯ ಹಣ್ಣನ್ನು ಹೊರ ದೇಶಕ್ಕೆ ಪ್ರಚಾರ ಮಾಡುವ ಮೂಲಕ ಭವಿಷ್ಯದ ಬೆಳೆಗೆ ಪ್ರಾಮುಖ್ಯತೆ ಲಭಿಸಿದೆ ಎಂದರು. ವೇದಿಕೆಯಲ್ಲಿ ಬೆಂಗಳೂರು ಐಐಹೆಚ್‌ಆರ್ ಸಂಸ್ಥೆಯ ವಿಜ್ಞಾನಿ ಡಾ.ಕರುಣಾಕರ್ ಉಪಸ್ಥಿತರಿದ್ದರು.


ವಿವಿಧ ಸ್ಪರ್ದೆಗಳಿಗೆ ಬಹುಮಾನ:
ಹಲಸಿನ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ನಡೆಯಿತು. ಶಾಸಕ ಅಶೋಕ್ ಕುಮಾರ್ ರೈ ಬಹುಮಾನ ವಿತರಿಸಿದರು. ಚಿತ್ರಕಲೆ, ಪ್ರಬಂಧ, ಹಲಸು ಎತ್ತುವ, ಹಲಸು ತಿನ್ನುವ, ಹಲಸು ಸೊಳೆ ಬಿಡಿಸುವ ಸ್ಪರ್ಧೆಗಳು ನಡೆದಿತ್ತು. ರೋಟರಿ ಯುವ ನಿಯೋಜಿತ ಅಧ್ಯಕ್ಷ ಪಶುಪತಿ ಶರ್ಮ ಅವರು ಬಹುಮಾನ ವಿತರಣೆ ಕಾರ್ಯಕ್ರಮ ನಿರ್ವಹಿಸಿದರು. ನವನೀತ ನರ್ಸರಿಯ ಮಾಲಕ ವೇಣುಗೋಪಾಲ ಎಸ್.ಜೆ ಅವರು ಸ್ವಾಗತಿಸಿ, ಜೇಸಿಐ ಅಧ್ಯಕ್ಷ ಸುಹಾಸ್ ಮರಿಕೆ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.

ಕಸಿಯ ಮೋಹದಿಂದ ಮೂಲದ ಆತಂಕ
ಕಸಿಯ ಗೀಡದ ಮೋಹಕ್ಕೆ ಬಳಿಯಾಗಿ ಮೂಲವನ್ನು ಕಳೆದು ಕೊಳ್ಳುವ ಆತಂಕವಿದೆ. ಕಸಿ ಗಿಡ ಬೃಹತ್ ಮರವಾಗುವುದಿಲ್ಲ. ಆದರೆ ನಮಗೆ ಮರದ ಕೊರತೆ ಬೀಳುವ ಸಾಧ್ಯತೆ ಇದೆ. ಬೀಜದಿಂದಲೇ ಸೃಷ್ಟಿಯಾದ ಗಿಡ ಹೆಮ್ಮರವಾಗುತ್ತದೆ. ಇದು ಮರವಾಗಿಯೂ ಪ್ರಯೋಜನವಿದೆ. ಜಾಗ ಇದ್ದವರು ಬೀಜದ ಮರಗಳನ್ನು ಬೆಳೆಸಿದಾಗ ಅದಕ್ಕೆ ಸಾರ್ಥಕತೆ ಬರುತ್ತದೆ.
ಎ.ಪಿ ಸದಾಶಿವ ಮರಿಕೆ

ಶುಗರ್ ಫ್ರೀ ಹಣ್ಣು ಬಂದರೆ ಒಂದು ಪೀಸ್ ಉಳಿಕ್ಕಿಲ್ಲ:
ಹಿಂದೊಮ್ಮೆ ಸುದ್ದಿಯವರೊಂದು ಮೇಳ ಮಾಡಿದ್ದರು. ವಿವಿಧ ಜಾತಿಯ ಹಣ್ಣಿನ ಗಿಡಗಳ ತಳಿಗಳನ್ನು ನೀಡುವ ಪರಿಚಯಿಸುವ ಮೇಳ. ಅದನ್ನು ನಾನು ನೋಡಿದ್ದೇನೆ. ಅದು ಒಳ್ಳೆಯ ರೀತಿಯ ಪರಿಸರವನ್ನು ಉಳಿಸಿದಂತೆ ಆಗುತ್ತದೆ. ಶುಗರ್ ಫ್ರೀ ಹಲಸಿನ ಹಣ್ಣುಮಾವಿನ ಹಣ್ಣು ಬಂದರೆ ಹಲಸಿನ ಹಣ್ಣು ಒಂದು ಪೀಸ್ ಉಳಿಸಲಿಕ್ಕಿಲ್ಲ ಎಂದು ಅಶೋಕ್ ಕುಮಾರ್ ರೈ ಅವರು ಹೇಳಿದರು.

ಬರುವ ವರ್ಷದಿಂದ ನಿಮ್ಮೊಂದಿಗೆ ಸ್ವೀಟ್ ಮೇಳ
ಹಿಂದೆ ಊಟಕ್ಕೆ ತುಂಬಾ ಅನ್ನ ಸಿಗದಾಗ ಸಂಜೆ ಹಲಸಿನ ಹಣ್ಣು ನೀಡುತ್ತಿದ್ದರು. ಯಾಕೆಂದರೆ ಹಲಸಿನ ಹಣ್ಣು ತಿಂದ ಬಳಿಕ ಹೊಟ್ಟೆ ತುಂಬಿದಾಗ ಊಟ ಮಾಡುವುದು ಕಡಿಮೆ ಆಗುತ್ತದೆ ಎಂಬ ಭಾವನೆ ಇತ್ತು. ಹಲಸಿನ ಹಣ್ಣು ಮಾವಿನ ಹಣ್ಣು ಎರಡು ಮುಂದಿಟ್ಟರೆ ಮುಗಿಯುವುದೇ ಗೊತ್ತಾಗುವುದಿಲ್ಲ. ಇವತ್ತು ಜೇಸಿಐ, ನವತೇಜ ಮತ್ತು ಐಐಹೆಚ್‌ಆರ್ ಬೆಂಗಳೂರು ಇವರು ಆಯೋಜನೆ ಮಾಡಿದ ಮೇಳ ನಿಜವಾಗಿಯೂ ಒಂದು ಒಳ್ಳೆಯ ಮೇಳವಾಗಿದೆ ಎಂದ ಅಶೋಕ್ ಕುಮಾರ್ ರೈ ಅವರು ಬರುವ ವರ್ಷದಿಂದ ನಾವೆಲ್ಲ ಸೇರಿ ದೊಡ್ಡ ಮಟ್ಟದಲ್ಲಿ ಮೇಳ ಮಾಡೋಣ. ಸ್ವೀಟ್ ಮೇಳ ಮಾಡೋಣ. ಇಲ್ಲಿ ಸಸಿಗಳ ವಿತರಣೆಯ ಕಾರ್ಯವು ನಡೆಯಬೇಕೆಂದ ಅವರು ಸಮಾಜ ಕೂಡಾ ಪ್ರೇರಣೆ ಕೊಡುವ ಕೆಲಸ ಆಗಿದೆ. ಭಾಷಣ ಕೇಳುವುದು, ಕಾರ್ಯಕ್ರಮಕ್ಕೆ ಹೋಗುವುದು ಮಾಡಿದರೆ ಸಾಲದು ಇಂತಹ ಮೇಳ ಮಾಡಿದರೆ ಸಮಾಜಕ್ಕೆ ಊರಿಗೆ, ಪರಿಸರ ಬೆಳೆಸುವ ಕೆಲಸ ಆಗಲಿದ ಎಂದರು.

LEAVE A REPLY

Please enter your comment!
Please enter your name here