ಕುಷ್ಠರೋಗ ನಿವಾರಣಾ ಅಭಿಯಾನ ಯೋಜನೆಯಡಿಲ್ಲಿ ಜೂ.19-ಜು.6 ಮನೆ ಭೇಟಿ-ಆರೋಗ್ಯಾಧಿಕಾರಿ ಡಾ.ದೀಪಕ್ ರೈ
ಪುತ್ತೂರು: 2021ರಲ್ಲಿ ಪುತ್ತೂರಿನಲ್ಲಿ ಕುಷ್ಟರೋಗದ 2 ಪ್ರಕರಣಗಳು ಪತ್ತೆಯಾಗಿದ್ದವು. ಈ ವರ್ಷ 6 ಪ್ರಕರಣಗಳು ಪತ್ತೆಯಾಗಿವೆ. ಈ ರೋಗ ನಿವಾರಣೆಯ ಹಿನ್ನೆಲೆಯಲ್ಲಿ ರಾಷ್ಟ್ರೀಯ ಕುಷ್ಠರೋಗ ನಿವಾರಣಾ ಅಭಿಯಾನ ಯೋಜನೆಯಡಿ ತಾಲೂಕಿನಲ್ಲಿ ಜೂ.19ರಿಂದ ಜು.6 ತನಕ ಮನೆ ಭೇಟಿ ನಡೆಯಲಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ ತಿಳಿಸಿದರು.
ತಾಲೂಕು ಆಡಳಿತ ಸೌಧದ ಸಹಾಯಕ ಕಮಿಷನರ್ ನ್ಯಾಯಾಲಯದ ಸಭಾಂಗಣದಲ್ಲಿ ಜೂ.19ರಂದು ನಡೆದ ಕುಷ್ಟರೋಗ ನಿವಾರಣಾ ಜಾಗೃತ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.
ಪುತ್ತೂರು ತಾಲೂಕಿನಲ್ಲಿ ಕಳೆದ ಎರಡು ವರ್ಷಗಳಿಂದ ಕುಷ್ಠರೋಗ ಕಾಣಿಸಿಕೊಂಡಿದ್ದು, ಪ್ರಸ್ತುತ ವರ್ಷ ಅದರ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಪುತ್ತೂರು ತಾಲೂಕಿನಲ್ಲಿ ಪತ್ತೆಯಾಗಿರುವ 6 ಕುಷ್ಠರೋಗ ಪೀಡಿತರ ಪೈಕಿ ಮೂರು ಮಂದಿ ಗುಣಮುಖರಾಗಿದ್ದಾರೆ. ಉಳಿದ 3 ಮಂದಿಗೆ ಚಿಕಿತ್ಸೆ ನಡೆಯುತ್ತಿದೆ. ಈ ಕುಷ್ಠರೋಗ ನಿವಾರಣೆಗೆ ಸಂಬಂಧಿಸಿ ಆಶಾ ಕಾರ್ಯಕರ್ತರು ಸ್ವಯಂಸೇವಕರಿಂದ ಇದೀಗ ರೋಗ ಲಕ್ಷಣಗಳನ್ನು ಪತ್ತೆ ಮಾಡಲು ಮನೆ ಮನೆ ಭೇಟಿ ಕಾರ್ಯ ನಡೆಯಲಿದೆ ಎಂದು ಅವರು ತಿಳಿಸಿದರು.
ಪುತ್ತೂರು ತಾಲೂಕಿನ ತಿಂಗಳಾಡಿ ಪ್ರಾಥಮಿಕ ಆರೋಗ್ಯ ವ್ಯಾಪ್ತಿಯಲ್ಲಿ ಎರಡು ಕುಷ್ಠರೋಗ ಪೀಡಿತರು ಹಾಗೂ ಕೊಯಿಲ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಓರ್ವ ಕುಷ್ಠರೋಗ ಲಕ್ಷಣ ಹೊಂದಿರುವ ವ್ಯಕ್ತಿ ಪತ್ತೆಯಾಗಿದ್ದಾರೆ. ಈ ಮೂವರಿಗೂ ಚಿಕಿತ್ಸೆ ನೀಡಲಾಗುತ್ತಿದೆ. ಕುಷ್ಠರೋಗ ನಿವಾರಣೆ ಹಿನ್ನಲೆಯಲ್ಲಿ ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಇಲಾಖಾ ಸಿಬ್ಬಂದಿಗಳು ಮನೆ ಮನೆ ಭೇಟಿ ನಡೆಸಿ ರೋಗ ಲಕ್ಷಣಗಳನ್ನು ಹೊಂದಿರುವ ವ್ಯಕ್ತಿಗಳ ಬಗ್ಗೆ ಮಾಹಿತಿ ಪಡೆಯಲಿದ್ದಾರೆ. ಇದೀಗ ಆಶಾ ಕಾರ್ಯಕರ್ತೆಯರು ಹಾಗೂ ಸ್ವಯಂಸೇವಕರು ಮನೆ ಭೇಟಿಗೆ ಬಂದಾಗ ಜನತೆಯ ಈ ನಿಟ್ಟಿನಲ್ಲಿ ಜನತೆಯ ಪೂರ್ಣ ಸಹಕಾರ ಬೇಕಾಗಿದೆ ಎಂದು ತಿಳಿಸಿದ ಅವರು ರಾಷ್ಟ್ರೀಯ ಕುಷ್ಠರೋಗ ನಿವಾರಣಾ ಅಭಿಯಾನದಡಿಯಲ್ಲಿ ಈ ಶಾಲಾ ಕಾಲೇಜುಗಳಲ್ಲಿ ಮಾಹಿತಿ ಅರಿವು ಕಾರ್ಯಕ್ರಮ ನಡೆಸಲಾಗುವುದು ಡಾ.ದೀಪಕ್ ರೈ ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಪುತ್ತೂರು ಉಪವಿಭಾಗಾಧಿಕಾರಿ ಗಿರೀಶ್ ನಂದನ್ ಅವರು ಮಾತನಾಡಿ, ತಾಲೂಕಿನಾದ್ಯಂತ ನಡೆಯಲಿರುವ ಅಭಿಯಾನದಲ್ಲಿ ಖಾಸಗಿ ಆಸ್ಪತ್ರೆಯ ವೈದ್ಯರನ್ನು ಸೇರಿಸಿಕೊಳ್ಳಬೇಕು. ಮನೆ ಭೇಟಿ ಸಂದರ್ಭದಲ್ಲಿ ಮನೆಗಳಿಗೆ ಮೊದಲೇ ಮಾಹಿತಿ ನೀಡಬೇಕು. ಮಾಹಿತಿ ಶಿಬಿರಗಳನ್ನು ನಡೆಸಬೇಕು. ಜನರನ್ನು ಮನವೊಳಿಸಿ ರೋಗಲಕ್ಷಣ ಪತ್ತೆ ಮಾಡಬೇಕು ಎಂದು ತಿಳಿಸಿದರು.
ತಾ.ಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಭಾರತಿ ಕೆ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ, ಶಿಕ್ಷಣ ಇಲಾಖೆಯ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸುಂದರ ಗೌಡ, ಡಾ. ಭವ್ಯಾ, ಡಾ.ಶಿಶಿರ, ಡಾ,ಕೃಷ್ಣಾನಂದ, ಚರ್ಮ ವೈದ್ಯರಾದ ಡಾ.ನರಸಿಂಹ ಕಾನಾವು, ಡಾ.ಬದರೀನಾಥ್, ಡಾ.ಸಚಿನ್ ಶೆಟ್ಟಿ ಮೊದಲಾದವರು ಸಭೆಯಲ್ಲಿ ಉಪಸ್ಥಿತರಿದ್ದರು. ಹಿರಿಯ ಆರೋಗ್ಯ ನಿರೀಕ್ಷಕಿ ಪದ್ಮಾವತಿ ಸ್ವಾಗತಿಸಿ, ವಂದಿಸಿದರು.