ಮಜ್ಜಾರಡ್ಕ: ಶ್ರೀ ವಿಷ್ಣು ಯುವಶಕ್ತಿ ಬಳಗ, ಪುತ್ತಿಲ ಪರಿವಾರದಿಂದ ಉಚಿತ ಪುಸ್ತಕ ವಿತರಣೆ

0

ಪುತ್ತೂರು: ಜಿಲ್ಲೆ ಮತ್ತು ತಾಲೂಕು ಪ್ರಶಸ್ತಿ ಪುರಸ್ಕೃತ ಶ್ರೀ ವಿಷ್ಣು ಯುವಶಕ್ತಿ ಬಳಗ ಮಜ್ಜಾರಡ್ಕ ಹಾಗೂ ಪುತ್ತಿಲ ಪರಿವಾರ ತ್ಯಾಗರಾಜನಗರ ಇದರ ವತಿಯಿಂದ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮ ಅರಿಯಡ್ಕ ಗ್ರಾಮದ ಮಜ್ಜಾರಡ್ಕ ಶ್ರೀ ವಿಷ್ಣುಮೂರ್ತಿ ದೈವಸ್ಥಾನದ ಶ್ರೀ ವಿಷ್ಣು ಸಾಂಸ್ಕೃತಿಕ ವೇದಿಕೆಯಲ್ಲಿ ನಡೆಯಿತು. ಅಂಗನವಾಡಿಯಿಂದ ಪಿಯುಸಿ ವಿದ್ಯಾಭ್ಯಾಸ ಮಾಡುತಿರುವ ಮಕ್ಕಳಿಗೆ ಸುಮಾರು 73 ಮಕ್ಕಳಿಗೆ ಪುಸ್ತಕ ವಿತರಿಸಲಾಯಿತು. ಕಾರ್ಯಕ್ರಮವನ್ನು ಹಿಂದೂ ಸಾಮ್ರಾಟ್ ಅರುಣ್ ಕುಮಾರ್ ಪುತ್ತಿಲ ದೀಪ ಬೆಳಗಿಸುವುದರ ಮೂಲಕ ಉದ್ಘಾಟನೆ ಮಾಡಿ ಮಾತನಾಡಿ, ಯುವ ಜನರ ಒಗ್ಗೂಡುವಿಕೆ, ನಿಸ್ವಾರ್ಥ ಸೇವೆ, ಸಮಾಜಮುಖಿ ಕಾರ್ಯಗಳಿಂದ ಉತ್ತಮ ಸಮಾಜದ ನಿರ್ಮಾಣ ಸಾಧ್ಯ ಎಂದ ಅವರು, ಶ್ರಮ, ಸೇವೆ, ಸಹಾಯ ಎಂಬ ಧ್ಯೇಯದೊಂದಿಗೆ ಸೇವೆ ಮಾಡುತ್ತಿರುವ ಸಂಘಟನೆಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದರು. ಚುನಾವಣೆಯ ಸಂದರ್ಭದಲ್ಲಿ ಪುತ್ತಿಲ ಪರ ಶ್ರಮಿಸಿದ ಹಾಗೂ ಮತದಾರರಿಗೆ ಇದೇ ಸಂದರ್ಭದಲ್ಲಿ ಕೃತಜ್ಞತೆ ಸಲ್ಲಿಸಿದರು. ಸಂಘಟನೆಯ ಗೌರವ ಸಲಹೆಗಾರ ಲೋಕೇಶ್ ರೈ ಅಮೈ, ಮಾತನಾಡಿ ಮಕ್ಕಳಿಗೆ ಶುಭ ಹಾರೈಸಿ, ಈ ದಿನ ಪುಸ್ತಕ ಪಡೆದುಕೊಂಡ ಹತ್ತನೇ ತರಗತಿಯ ಮಕ್ಕಳು ಮುಂದಿನ ಪರೀಕ್ಷೆಯಲ್ಲಿ 95 ಶೇಕಡ ಮಾರ್ಕ್ ಗಳಿಸಿದರೆ ಅವರಿಗೆ ಐದು ಸಾವಿರ ರೂ.ಗಳನ್ನು ನೀಡುವುದಾಗಿ ಘೋಷಣೆ ಮಾಡಿದರು.

ಬ್ಯಾಟ್ ಹಿಡಿದು ಮೈದಾನಕ್ಕೆ ಇಳಿದ ಪುತ್ತಿಲ
ಸಭಾ ಕಾರ್ಯಕ್ರಮ ಮುಗಿದ ಬಳಿಕ ಪುತ್ತಿಲ ಪರಿವಾರದಿಂದ ಸ್ಥಳೀಯರಿಗೆ ಕ್ರಿಕೆಟ್ ಪಂದ್ಯಾಟ ನಡೆಯಿತು. ಅರುಣ್ ಕುಮಾರ್ ಪುತ್ತಿಲ ಬ್ಯಾಟ್ ಹಿಡಿದು ನೆರೆದಿದ್ದ ಕ್ರೀಡಾ ಪ್ರೇಮಿಗಳನ್ನು ಮತ್ತು ಕ್ರೀಡಾ ಪಟುಗಳನ್ನು ಮನರಂಜಿಸಿದರು. ವೇದಿಕೆಯಲ್ಲಿ ಶ್ರೀ ವಿಷ್ಣು ಯುವಶಕ್ತಿ ಮಜ್ಜಾರಡ್ಕ ಸಂಘಟನೆಯ ಅಧ್ಯಕ್ಷ ಉದಯ ಸ್ವಾಮಿನಗರ, ಚಂದ್ರಶೇಖರ ರೈ ಪಯಂದೂರ್, ಅರಿಯಡ್ಕ ಗ್ರಾಮದ ಪುತ್ತಿಲ ಪರಿವಾರದ ಅಧ್ಯಕ್ಷ ಗೋವಿಂದ ಮಣಿಯಾಣಿ, ಅಯ್ಯಪ್ಪ ಭಜನಾ ಮಂದಿರ ಸ್ವಾಮಿನಗರ ಇದರ ಅಧ್ಯಕ್ಷ ಸತೀಶ್ ಹೆಚ್.ಕೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಇದರ ಕುಂಬ್ರ ವಲದ ಸೇವಾ ಪ್ರತಿನಿಧಿ ಆನಂದ್ ರೈ ಮಠ ಉಪಸ್ಥಿತರಿದ್ದರು. ಮಕ್ಕಳ ವಿದ್ಯಾಭ್ಯಾಸದ ದೃಷ್ಟಿಯಿಂದ ಕಾಣಿಯೂರು, ಮತ್ತು ಬಂಬಿಲ ಕಡೆಯ ಮತ್ತು ದೂರದ ಊರಿಂದ ಬಂದ ಮಕ್ಕಳಿಗೂ ಪುಸ್ತಕ ವಿತರಣೆ ಮಾಡಲಾಯಿತು ಎಂದು ಕಾರ್ಯಕ್ರಮದ ಆಯೋಜಕರು, ಸಂಘಟಕರಾದ ತಾಲೂಕು ಮತ್ತು ಜಿಲ್ಲಾ ಪ್ರಶಸ್ತಿ ಪುರಸ್ಕೃತ ರಾಜೇಶ್ ಕೆ, ಮಯೂರ ಗೋಲ್ತಿಳ ತಿಳಿಸಿದರು. ಸಂಘಟನೆಯ ಸದಸ್ಯ ಹರೀಶ್ ಸ್ವಾಮಿನಗರ ಮತ್ತು ದೀಪಕ್ ಕೋಡಿಯಡ್ಕ ಪ್ರಾರ್ಥಿಸಿದರು. ಸದಸ್ಯ ಭರತ್ ಒಲ್ತಾಜೆ ಸ್ವಾಗತಿಸಿದರು. ಕೀರ್ತಿ ಮಾಯಿಲಕೊಚ್ಚಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮಕ್ಕೆ ಲಘು ಉಪಹಾರವನ್ನು ಲೋಕನಾಥ್ ಪೂಜಾರಿ ಮಜ್ಜಾರ್ ನೀಡಿದ್ದರು. ಪುಸ್ತಕ ವಿತರಣೆಗೆ ಧನ ಸಹಾಯ ಮತ್ತು ಕಾರ್ಯಕ್ರಮಕ್ಕೆ ಸಂಪೂರ್ಣ ಸಹಕಾರ ನೀಡಿದ ಸಂಘಟನೆಯ ಗೌರವ ಅಧ್ಯಕ್ಷ ಓಲೆಮುಂಡೋವು ಮೋಹನ್ ರೈರವರಿಗೆ ಧನ್ಯವಾದ ಸಲ್ಲಿಸಲಾಯಿತು.

LEAVE A REPLY

Please enter your comment!
Please enter your name here