ಯೋಗ ಒಂದೇ ದಿನಕ್ಕೆ ಸೀಮಿತವಾಗದಿರಲಿ: ಕರುಣಾಕರ ಉಪಾಧ್ಯಾಯ
ಪುತ್ತೂರು : ವರ್ಷದ ಅತ್ಯಂತ ದೀರ್ಘವಾದ ದಿನ ಜೂನ್ 21. ಹಾಗಾಗಿ ಈ ವಿಶಿಷ್ಟ ದಿನವನ್ನು ಅಂತಾರಾಷ್ಟ್ರೀಯ ಯೋಗ ದಿನ ಎಂದು ಘೋಷಿಸಲಾಗಿದೆ. ಅದರಂತೆಯೇ ಪ್ರತೀ ವರ್ಷವೂ ಯೋಗ ದಿನವನ್ನು ಭಾರತದಲ್ಲಿ ಆಚರಿಸುಲಾಗುತ್ತಿದೆ. ಉಸಿರಾಟಕ್ಕೆ ಹೆಚ್ಚಿನ ಗಮನ ಹರಿಸುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಯೋಗದ ಮೂಲ ಉದ್ದೇಶ. ಯೋಗದ ವಾರೀಸುದಾರರೇ ನಾವಾಗಿರುವುದರಿಂದ ಅದನ್ನು ಎಷ್ಟರ ಮಟ್ಟಿಗೆ ನಿಭಾಯಿಸುತ್ತಿದ್ದೇವೆ ಎಂಬುದನ್ನು ಮನನ ಮಾಡಿಕೊಳ್ಳಬೇಕು. ದಿನಾಲೂ ಯೋಗ ಅಭ್ಯಾಸ ಮಾಡುವ ಮನೋಭಾವನೆ ನಮ್ಮಲ್ಲಿ ಬೆಳೆಯಬೇಕು. ಅಂತಯೇ ಯೋಗ ನಮ್ಮ ಜೀವನಕ್ಕೆ ದಾರಿ ದೀಪವಾಗಬೇಕು. ಇದನ್ನು ಕಣ್ಮರೆಯಾಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಪುತ್ತೂರಿನ ಓಂಕಾರ ಯೋಗ ಕೇಂದ್ರದ ಶಿಕ್ಷಕ ಕರುಣಾಕರ ಉಪಾಧ್ಯಾಯ ಹೇಳಿದರು.
ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ ), ಸ್ನಾತಕೋತ್ತರ ಅಧ್ಯಯನ ಕೇಂದ್ರ ಹಾಗೂ ಐಕ್ಯೂಎಸಿ ಘಟಕದ ಜಂಟಿ ಆಶ್ರಯದಲ್ಲಿ ನಡೆದ ವಿಶ್ವ ಯೋಗ ದಿನಾಚರಣೆಯ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಯೋಗ ಒಂದು ಜೀವನ ವಿಧಾನ. ಚಿಕಿತ್ಸೆಯಿಂದ ಗುಣಪಡಿಸಲಾಗದ್ದನ್ನು ಯೋಗ ಗುಣಪಡಿಸುತ್ತದೆ ಹಾಗೂ ಮಾನಸಿಕ ಒತ್ತಡವನ್ನು ಕಡಿಮೆ ಮಾಡಿ ಮನಸ್ಸಿಗೆ ಶಾಂತಿಯನ್ನು ನೀಡುತ್ತದೆ. ಯೋಗವನ್ನು ಶ್ರಮ ಆಗದಿರುವ ರೀತಿಯಲ್ಲಿ ಅಭ್ಯಾಸ ಮಾಡಬೇಕು. ನಮ್ಮ ದಿನನಿತ್ಯದ ಚಟುವಟಿಕೆಗಳನ್ನು ಸರಿಯಾಗಿ ಮಾಡಿದರೆ ಅದೇ ಒಂದು ರೀತಿಯ ಯೋಗವಾಗುತ್ತದೆ ಎಂದು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ.ವಿಷ್ಣು ಗಣಪತಿ ಭಟ್ ಮಾತನಾಡಿ, ನಿರಂತರವಾಗಿ ಯೋಗ ಮಾಡುವ ಪರಿಕಲ್ಪನೆ ಎಲ್ಲರಿಗೂ ಬರಬೇಕು. ಪಾಶ್ಚಾತ್ಯ ಸಂಸ್ಕೃತಿಗೆ ಮೋರೆ ಹೋಗದೆ ಯೋಗವನ್ನು ದಿನನಿತ್ಯ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇದರ ಬಗೆಗಿನ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಪಸರಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಇತಿಹಾಸ ವಿಭಾದ ಮುಖ್ಯಸ್ಥ ಹಾಗೂ ವಿಶೇಷ ಅಧಿಕಾರಿ ಡಾ. ಶ್ರೀಧರ್ ನಾಯ್ಕ್, ಪರೀಕ್ಷಾಂಗ ಕುಲಸಚಿವ ಡಾ. ಎಚ್. ಜಿ. ಶ್ರೀಧರ್ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಐಕ್ಯೂಎಸಿ ಘಟಕದ ಸಂಯೋಜಕ ಶಿವಪ್ರಸಾದ್ ಕೆ. ಎಸ್ ಸ್ವಾಗತಿಸಿ, ಸ್ನಾತಕೋತ್ತರ ವಿಭಾಗದ ಸಂಯೋಜಕಿ ಡಾ. ವಿಜಯಸರಸ್ವತಿ ಬಿ ವಂದಿಸಿದರು. ದ್ವಿತೀಯ ಎಂಕಾಂ ವಿದ್ಯಾರ್ಥಿನಿ ರಮ್ಯ ಹಾಗೂ ಸ್ವಾತಿ ಕಾರ್ಯಕ್ರಮವನ್ನು ನಿರೂಪಿಸಿದರು.
ಕಾಲೇಜಿನ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಯೋಗಾಭ್ಯಾಸ ಮಾಡುವ ಮೂಲಕ ಯೋಗ ದಿನವನ್ನು ವಿಶೇಷವಾಗಿ ಆಚರಿಸಿದರು.