ಪುತ್ತೂರು: ಪಂಜಳ ಶಾಂತಿಗಿರಿ ವಿದ್ಯಾ ನಿಕೇತನ್ ಸ್ಕೂಲ್ ನಲ್ಲಿ ಜೂ.21 ರಂದು ಅಂತರ್ರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಯಿತು.
ಕಾರ್ಯಕ್ರಮವನ್ನು ಆಯುಷ್ ಇಲಾಖೆಯ ಯೋಗ ದಿನದ ಅಭ್ಯಾಸ ಕ್ರಮದ ಪಟ್ಟಿಯಂತೆ ನಡೆಸಲಾಯಿತು. ಯೋಗ ದಿನದ ಮಹತ್ವದ ಕುರಿತು ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಅಶ್ವತಿ ಅರವಿಂದ್ ರವರು ಪ್ರಾಸ್ತಾವಿಕವಾಗಿ ಮಾತನಾಡಿ, ಯೋಗ ಅಭ್ಯಾಸವು ದೈನಂದಿನ ಜೀವನದ ಅತೀ ಅಗತ್ಯ ವಾಗಿದ್ದು ಮನಶುದ್ಧಿ, ದೇಹದ ಸದೃಢತೆ, ರೋಗ ತಡೆಯುವಿಕೆಗೆ ಉತ್ತಮ ಪರಿಹಾರ ಅಲ್ಲದೆ ವಿದ್ಯಾರ್ಥಿಗಳಲ್ಲಿ ಏಕಾಗ್ರತೆಯನ್ನು ಹೆಚ್ಚಿಸಿಕೊಳ್ಳಲು ಯೋಗದ ಅಭ್ಯಾಸ ಅತ್ಯುತ್ತಮ ಎಂದು ನುಡಿದರು.
ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ರಾಜೀವಿ ಶೆಟ್ಟಿಯವರು ವಿಶ್ವ ಯೋಗ ದಿನದ ಸಾಮೂಹಿಕ ಪ್ರತಿಜ್ಞೆಯನ್ನು ನೆರವೇರಿಸಿ ದೇಹ ಸಡಿಲಗೊಳಿಸುವ ವ್ಯಾಯಾಮ, ವಿವಿಧ ಭಂಗಿಯ ಆಸನಗಳನ್ನು ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಂದ ಮಾಡಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.