ಗ್ರಾಮಾಭಿವೃದ್ಧಿ ಯೋಜನೆಯಿಂದ ಕ್ರಾಂತಿಕಾರಿ ಬದಲಾವಣೆ: ಭಾಗೀರಥಿ ಮುರುಳ್ಯ
ಕಡಬ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದಾಗಿ ಸಮಾಜದಲ್ಲಿ ಕ್ರಾಂತಿಕಾರಿ ಬದಲಾವಣೆಗಳಾಗಿವೆ. ಗ್ರಾಮೀಣ ಜನರ ಸರ್ವತೋಮುಖ ಅಭಿವೃದ್ಧಿಗಾಗಿ ಧರ್ಮಾಧಿಕಾರಿ ಡಾ|ಡಿ.ವೀರೆಂದ್ರ ಹೆಗ್ಗಡೆಯವರು ನಡೆಸುತ್ತಿರುವ ಅಭಿಯಾನದಲ್ಲಿ ನಾವೆಲ್ಲರೂ ಕೈಜೋಡಿಸೋಣ ಎಂದು ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಅವರು ಅಭಿಪ್ರಾಯಪಟ್ಟರು.
ಕಡಬದ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ಸಭಾಂಗಣದಲ್ಲಿ, ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನೇತೃತ್ವದಲ್ಲಿ ಜರಗಿದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯ ಬಳಿಕ ಕಡಬ ತಾಲೂಕು ಜನಜಾಗೃತಿ ವೇದಿಕೆಯ ಪದಗ್ರಹಣ ಸಮಾರಂಭ ಹಾಗೂ ಮದ್ಯಮುಕ್ತರ ನವ ಜೀವನೋತ್ಸವ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು. ವಿಪತ್ತು ನಿರ್ವಹಣೆಗಾಗಿ ರಚನೆಯಾಗಿರುವ ಧರ್ಮಸ್ಥಳದ ಶೌರ್ಯ ತಂಡದ ಕಾರ್ಯಕರ್ತರು ಮಾಡುತ್ತಿರುವ ಸೇವಾ ಚಟುವಟಿಕೆಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ಶಾಸಕಿ ಪ್ರಾಕೃತಿಕ ವಿಕೋಪ ಸೇರಿದಂತೆ ತುರ್ತು ಸಂದರ್ಭಗಳಲ್ಲಿ ಶೌರ್ಯ ತಂಡದ ನೆರವನ್ನು ಪಡೆದುಕೊಳ್ಳುವಂತೆ ಸರಕಾರಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು. ನಾನು ಕೂಡ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದಲ್ಲಿ ವಿವಿಧ ಜವಾಬ್ದಾರಿಯನ್ನು ನಿರ್ವಹಿಸಿದ್ದೇನೆ. ಗ್ರಾಮಾಭಿವೃದ್ದಿ ಸಂಘದ ಮೂಲಕ ಕೃಷಿಕರ ಬದುಕು ಕೂಡ ಉತ್ತಮವಾಗಿದೆ ಎಂದು ಅವರು ಹೇಳಿದರು.
ಆಶಯ ಭಾಷಣ ಮಾಡಿದ ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯಸ್ ಅವರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜನಪರ ಕಾರ್ಯಕ್ರಮಗಳು ಸುಮಾರು 65 ಸಾವಿರ ಕಾರ್ಯಕರ್ತರ ಮೂಲಕ ರಾಜ್ಯದ ಜನಸಂಖ್ಯೆಯ ಅರ್ಧದಷ್ಟು ಜನರನ್ನು ತಲುಪಿದ್ದು, ವಿಶ್ವದ ಅತೀ ದೊಡ್ಡ ಸರಕಾರೇತರ ಸೇವಾ ಸಂಸ್ಥೆ ಎನ್ನುವ ಹೆಗ್ಗಳಿಕೆಯನ್ನು ಹೊಂದಿದೆ, ಕ್ಷೇತ್ರದ ಮದ್ಯವರ್ಜನ ಶಿಬಿರದ ಮೂಲಕ ಹಲವರ ಬದುಕು ಬದಲಾಗಿದೆ ಎಂದರು. ಕಡಬ ತಾಲೂಕು ಜನ ಜಾಗೃತಿ ವೇದಿಕೆಯ ಅಧ್ಯಕ್ಷ ಮಹೇಶ್ ಕೆ. ಸವಣೂರು ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಹಿರಿಯರ ಆಶೀರ್ವಾದದಿಂದ ನಾನು ಧರ್ಮಸ್ಥಳ ಕ್ಷೇತ್ರದ ಜನಜಾಗೃತಿ ವೇದಿಕೆಯ ಅಧ್ಯಕ್ಷನಾಗುವ ಭಾಗ್ಯ ಒದಗಿ ಬಂದಿದೆ. ಮುಂದಿನ ದಿನಗಳಲ್ಲಿ ಗ್ರಾಮೀಣ ಜನರ ಅಭಿವೃದ್ದಿಗೆ ಶ್ರಮಿಸಲಾಗುವುದು ಎಂದು ಅವರು ಹೇಳಿದರು. ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆಯ ದ.ಕ. ಜಿಲ್ಲಾಧ್ಯಕ್ಷ ಪದ್ಮನಾಭ ಶೆಟ್ಟಿ, ಗ್ರಾಮಾಭಿವೃದ್ಧಿ ಯೋಜನೆಯ ಪುತ್ತೂರು ಬಿ.ಸಿ. ಟ್ರಸ್ಟ್‌ನ ಜಿಲ್ಲಾ ನಿರ್ದೇಶಕ ಪ್ರವೀಣ್ ಕುಮಾರ್, ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಸೀತಾರಾಮ ಗೌಡ ಪೊಸವಳಿಕೆ, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಕಡಬ ತಾಲೂಕು ಒಕ್ಕೂಟದ ಅಧ್ಯಕ್ಷ ಸಂತೋಷ್ ಅತಿಥಿಗಳಾಗಿ ಆಗಮಿಸಿದ್ದರು. ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಸದಸ್ಯ ಎ.ಬಿ.ಮನೋಹರ ರೈ, ಜನಜಾಗೃತಿ ವೇದಿಕೆಯ ವಿವಿಧ ವಲಯಗಳ ಅಧ್ಯಕ್ಷರಾದ ಕರುಣಾಕರ ಗೋಗಟೆ, ತಮ್ಮಯ್ಯ ಗೌಡ ಸುಳ್ಯ, ಜಯಾನಂದ ಬಂಟ್ರಿಯಾಲ್, ನೋಣಯ್ಯ ಪೂಜಾರಿ, ಇಂದುಶೇಖರ ಶೆಟ್ಟಿ, ಪುತ್ತೂರು ವಲಯದ ಮಾಜಿ ಅಧ್ಯಕ್ಷರಾದ ದಂಬೆಕ್ಕಾನ ಸದಾಶಿವ ರೈ, ಮಹಾಬಲ ರೈ ವಳತ್ತಡ್ಕ ಉಪಸ್ಥಿತರಿದ್ದರು.
ಗಿಡ ನೆಡುವ ಯೋಜನೆಗೆ ಚಾಲನೆ: ಯೋಜನೆಯ ಸಾಮಾಜಿಕ ಅರಣ್ಯ ರಚನೆ ಕಾರ್ಯಕ್ರಮದ ಮೂಲಕ ಕಡಬ ತಾಲೂಕಿನಲ್ಲಿ 5 ಸಾವಿರ ಗಿಡಗಳನ್ನು ನೆಡುವ ಅಭಿಯಾನಕ್ಕೆ ಶಾಸಕಿ ಭಾಗೀರಥಿ ಮುರುಳ್ಯ ಚಾಲನೆ ನೀಡಿದರು. ಸಮಾರಂಭದಲ್ಲಿ ಶಾಸಕಿಯವರನ್ನು ಸಮ್ಮಾನಿಸಿ ಗೌರವಿಸಲಾಯಿತು.
ಶೌರ್ಯ ತಂಡಗಳಿಗೆ ಬಹುಮಾನ:
ಕಡಬ ತಾಲೂಕು ಮಟ್ಟದಲ್ಲಿ ಬಹುಮಾನ ಗಳಿಸಿದ ಕಡಬ (ಪ್ರಥಮ), ಕಾಣಿಯೂರು (ದ್ವಿತೀಯ) ಹಾಗೂ ಮರ್ದಾಳ (ತೃತೀಯ) ಶೌರ್ಯ ತಂಡಗಳಿಗೆ ಪ್ರಮಾಣಪತ್ರ ನೀಡಲಾಯಿತು. ನವಜೀವನ ಸಮಿತಿಯ ಸದಸ್ಯರನ್ನು ಗೌರವಿಸಲಾಯಿತು. ಯೋಜನೆಯ ಅನಾರೋಗ್ಯ ಪೀಡಿತ ಸದಸ್ಯರ ಚಿಕಿತ್ಸೆಗೆ ನೆರವು ನೀಡಲಾಯಿತು. ನವಜೀವನ ಸಮಿತಿಯ ಸದಸ್ಯರು ಅನಿಸಿಕೆ ವ್ಯಕ್ತಪಡಿಸಿದರು.ಗ್ರಾಮಾಭಿವೃದ್ಧಿ ಯೋಜನೆಯ ಕಡಬ ತಾಲೂಕು ಯೋಜನಾಧಿಕಾರಿ ಮೇದಪ್ಪ ಗೌಡ ನಾವೂರು ಸ್ವಾಗತಿಸಿ, ವರದಿ ಮಂಡಿಸಿದರು. ಜನಜಾಗೃತಿ ವೇದಿಕೆಯ ಉಡುಪಿ ಪ್ರಾದೇಶಿಕ ಯೋಜನಾಧಿಕಾರಿ ಗಣೇಶ್ ಆಚಾರ್ಯ ಹಾಗೂ ಕಡಬ ವಲಯ ಮೇಲ್ವಿಚಾರಕ ರವಿಪ್ರಸಾದ್ ಆಲಾಜೆ ನಿರೂಪಿಸಿದರು. ಶಿವಪ್ರಸಾದ್ ರೈ ಮೈಲೇರಿ ವಂದಿಸಿದರು. ಸಭಾ ಕಾರ್ಯಕ್ರಮದ ಮೊದಲು ದುರ್ಗಾಂಬಿಕಾ ಅಮ್ಮನವರ ಸನ್ನಿಧಿಯಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ನಡೆಯಿತು.