ರೂ.50 ಕೋಟಿ ವೆಚ್ಚದ ಮಹಾಲಿಂಗೇಶ್ವರ ದೇವಸ್ಥಾನ ಅಭಿವೃದ್ಧಿಯ ಮಾಸ್ಟರ್ ಪ್ಲಾನ್ ತಯಾರಿ – ಶಾಸಕರ ನೇತೃತ್ವದಲ್ಲಿ ದೇವಸ್ಥಾನದ ಅಭಿವೃದ್ಧಿ ಸಮಿತಿ ಸಭೆ

0

ಪುತ್ತೂರು: ಇಲ್ಲಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸುಮಾರು 50 ಕೋಟಿ ರೂ. ವೆಚ್ಚದಲ್ಲಿ ನಡೆಯಲಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಮುಂದಿನ ಯೋಜನೆಗಳ ಕುರಿತು ಶಾಸಕ ಅಶೋಕ್ ಕುಮಾರ್ ರೈಯವರ ನೇತೃತ್ವದಲ್ಲಿ ಜೂ.25 ರಂದು ದೇವಸ್ಥಾನದ ಕಚೇರಿಯಲ್ಲಿ ಸಭೆ ನಡೆಯಿತು.
ಸಭೆಯಲ್ಲಿ ದೇವಸ್ಥಾನದ ಅಭಿವೃದ್ಧಿ ಯೋಜನೆಗಳಾದ ದೇವಸ್ಥಾನದ ಎದುರಿನ ರಥಬೀದಿ ಕೊನೆಯಲ್ಲಿ ಮಹಾದ್ವಾರ ಧಾರ್ಮಿಕ ಶಿಕ್ಷಣ ಕೇಂದ್ರ, ವೇದಪಾಠ ಶಾಲೆ ಕಟ್ಟಡ, ಯಾತ್ರಿ ನಿವಾಸ್, ರಥ ಮಂದಿರ ಹೀಗೆ ಸುಮಾರು 45 ಪ್ರಾಜೆಕ್ಟ್‌ನ ನೀಲ ನಕಾಶೆಯ ತ್ರೀಡಿ ವೀಡಿಯೋವನ್ನು ಪ್ರೊಜೆಕ್ಟರ್ ಮೂಲಕ ತೋರಿಸಲಾಯಿತು.

ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಮಾತನಾಡಿ, ಸರಕಾರದ ದೈವ ಸಂಕಲ್ಪಂ ಯೋಜನೆಯಡಿ ಸುಮಾರು 25 ದೇವಸ್ಥಾನಗಳು ಆಯ್ಕೆಯಾಗಿವೆ. ಅದರಲ್ಲಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಒಂದಾಗಿದೆ. ಈಗಾಗಲೇ ಖ್ಯಾತ ಸಂಸ್ಥೆಯೊಂದರ ಮೂಲಕ ಮಾಸ್ಟರ್ ಪ್ಲಾನ್ ಮಾಡಲಾಗಿದ್ದು, ಇದನ್ನು ಸರಕಾರಕ್ಕೆ ಮುಟ್ಟಿಸಲು ಶಾಸಕರ ಮೂಲಕವೇ ಆಗಬೇಕು. ಈ ನಿಟ್ಟಿನಲ್ಲಿ ಈ ಸಭೆಯನ್ನು ಕರೆಯಲಾಗಿದೆ ಎಂದು ತಿಳಿಸಿದರು.

ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ದೇವಸ್ಥಾನ ಅಭಿವೃದ್ಧಿಗೆ ಕಾಮಗಾರಿಗಳಿಗೆ ಸುಮಾರು 50 ಕೋಟಿ ರೂ. ವೆಚ್ಚದ ಮಾಸ್ಟರ್‌ಪ್ಲಾನ್ ಮಾಡಲಾಗಿದೆ. ಅದು ಇಲ್ಲಿಯೇ ಇದೆ. ಇನ್ನೂ ಸರಕಾರದ ಮಟ್ಟಕ್ಕೆ ಹೋಗಿಲ್ಲ. ದೇವಸ್ಥಾನದ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್‌ನಂತೆ ಮಾಡಿದಾಗ ಎಲ್ಲರಿಗೂ ಸಹಕಾರಿಯಾಗಲಿದೆ. ಅದಕ್ಕಾಗಿ ಮಾಸ್ಟರ್ ಪ್ಲಾನ್‌ಗೆ ಆಧ್ಯತೆ ಮೇಲೆ ಮಾಡಲಾಗುವುದು. ಮುಂದಿನ ದಿನಗಳಲ್ಲಿ ಭಕ್ತರಿಗೆ ಬೇಕಾದಂತೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಕಲ್ಪಿಸಿಲಾಗುವುದು. ಧರ್ಮಸ್ಥಳದಲ್ಲಿರುವಂತೆ ಭಕ್ತರಿಗೆ ಉಳಿದುಕೊಳ್ಳಲು ಪೂರಕವಾದ ಕಡಿಮೆ ದರದಲ್ಲಿ ರೂಂನ ಸೌಲಭ್ಯ ನಿರ್ಮಿಸಲಾಗುವುದು. ವ್ಯವಸ್ಥಾಪನಾ ಸಮಿತಿ, ಅಭಿವೃದ್ಧಿ ಸಮಿತಿಯಲ್ಲಿ ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿ ಮುಂದುವರಿಸಲಾಗುವುದು ಎಂದು ತಿಳಿಸಿದರು.

ಆರ್ಕಿಟೆಕ್ಟ್ ಸೌಮ್ಯ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಶೇಖರ್ ನಾರಾವಿ, ರಾಮದಾಸ ಗೌಡ, ರವೀಂದ್ರನಾಥ ರೈ, ರಾಮಚಂದ್ರ ಕಾಮತ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ ವಿಶ್ವನಾಥ ರೈ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಮುರಳೀಧರ ರೈ ಮಠಂತಬೆಟ್ಟು, ನಿರಂಜನ ರೈ ಮಠಂತಬೆಟ್ಟು, ಕೋಡಿಂಬಾಡಿ ಗ್ರಾ.ಪಂ ಸದಸ್ಯ ಜಯಪ್ರಕಾಶ್ ಬದಿನಾರು, ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಕೆ.ವಿ ಶ್ರೀನಿವಾಸ್, ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ, ರವೀಂದ್ರ, ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here