ಕಡಬ: ಝೀ ಕನ್ನಡ ವಾಹಿನಿಯಲ್ಲಿ ಹತ್ತು ವರ್ಷಗಳ ಬಳಿಕ ಪ್ರಾರಂಭಗೊ0ಡ ಮಕ್ಕಳ ನಂ.1 ಗೇಮ್ ಶೋ ಛೋಟಾ ಚಾಂಪಿಯನ್‌ನಲ್ಲಿ ರಾಮಕುಂಜ ಗ್ರಾಮದ ಸುಜಿತ್ ಎಸ್.ರವರ ಪುತ್ರಿ ಆತ್ಮಿ ಗೌಡ ಎಸ್.(3.11ವ.)ರವರು ಪ್ರಥಮ ಸ್ಥಾನ ಪಡೆದು ರೂ.50,000 ನಗದು ಬಹುಮಾನ ವಿಜೇತರಾಗಿದ್ದಾರೆ. ಗೇಮ್ ಶೋ.ನಲ್ಲಿ ಒಟ್ಟು 5 ಜನ ಸ್ಪರ್ಧಿಗಳು ಭಾಗವಹಿಸಿದ್ದರು.
ಹತ್ತು ವರ್ಷಗಳ ಹಿಂದೆ ಸೃಜನ್ ಲೋಕೇಶ್ ನಿರ್ವಹಿಸುತ್ತಿದ್ದ ಮಕ್ಕಳ ಗೇಮ್ ಶೋ ಕಾರ್ಯಕ್ರಮದ ನಿರೂಪಣೆಯನ್ನು ಪ್ರಸ್ತುತ ಕುರಿ ಪ್ರತಾಪ್ ಮತ್ತು ಶ್ವೇತಾ ಚಂಗಪ್ಪ ನಡೆಸಿಕೊಡುತ್ತಿದ್ದು 2ರಿಂದ 6 ವರ್ಷದ ಮಕ್ಕಳು ಈ ಶೋದಲ್ಲಿ ಭಾಗವಹಿಸಿದ್ದರು. ಬೆಂಗಳೂರಿನಲ್ಲಿ ನಡೆದ ಆಡಿಷನ್‌ನಲ್ಲಿ ಆಯ್ಕೆಯಾಗಿದ್ದ ಆತ್ಮಿ ಗೌಡ ಬಳಿಕ 3 ಸುತ್ತಿನ ಆಡಿಷನ್ ನಡೆದು ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದರು. ಜೂ.24 ಹಾಗೂ 25ರಂದು ಶೋ ಪ್ರಸಾರಗೊಂಡಿದ್ದು ಆತ್ಮಿ ಗೌಡ ಪ್ರಥಮ ಸ್ಥಾನ ಪಡೆದಿದ್ದಾರೆ. ಕಡಬ ತಾಲೂಕಿನ ರಾಮಕುಂಜ ಗ್ರಾಮದ ಸಂಪ್ಯಾಡಿ ನಿವಾಸಿ ಸುಜಿತ್ ಎಸ್. ಮತ್ತು ಉಮಾಶ್ರೀ ಪಿ.ಬಿ. ದಂಪತಿ ಪುತ್ರಿಯಾಗಿರುವ ಆತ್ಮಿ ಗೌಡ ಎಸ್.ರವರು ಸಂಪ್ಯಾಡಿಯ ಜೋಗಪ್ಪ ಗೌಡ ಮತ್ತು ಚಂದ್ರಾವತಿ ದಂಪತಿಯ ಮೊಮ್ಮಗಳು.