ಜೂ.30: ವಿವೇಕಾನಂದ ಕಾಲೇಜು ಅಂತಿಮ ಪದವಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ, ಹಿರಿಯ ವಿದ್ಯಾರ್ಥಿ ಸಂಘದ ದಿನಾಚರಣೆ – ನಾಲ್ವರು ನಿವೃತ್ತ ಪ್ರಾಧ್ಯಾಪಕರಿಗೆ, ಇಬ್ಬರು ಹಿರಿಯ ವಿದ್ಯಾರ್ಥಿಗಳಿಗೆ, ರ್‍ಯಾಂಕ್ ವಿಜೇತರಿಗೆ ಗೌರವ

0

ಪುತ್ತೂರು: ವಿವೇಕಾನಂದ ಕಾಲೇಜಿನ ಅಂತಿಮ ಪದವಿ ಮತ್ತು ಅಂತಿಮ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಕಾರ್ಯಕ್ರಮ ಮತ್ತು ಹಿರಿಯ ವಿದ್ಯಾರ್ಥಿ ಸಂಘದ ದಿನಾಚರಣೆಯು ಜೂ.30ರಂದು ವಿವೇಕಾನಂದ ಕಾಲೇಜಿನ ಕೇಶವ ಸಂಕಲ್ಪ ಸಭಾಭವನದಲ್ಲಿ ಜರುಗಲಿದೆ.

ಕಾರ್ಯಕ್ರಮದಲ್ಲಿ ಕಾಲೇಜಿನ ನಾಲ್ವರು ಹಿರಿಯ ನಿವೃತ್ತ ಪ್ರಾಧ್ಯಾಪಕರಿಗೆ, ಇಬ್ಬರು ಹಿರಿಯ ವಿದ್ಯಾರ್ಥಿಗಳಿಗೆ, ವಿಶ್ವವಿದ್ಯಾನಿಲಯ ಮಟ್ಟದಲ್ಲಿ ರ್‍ಯಾಂಕ್ ವಿಜೇತ 8 ವಿದ್ಯಾರ್ಥಿಗಳಿಗೆ ಗೌರರ್ವಾಪಣೆ ಕಾರ್ಯಕ್ರಮ ನಡೆಯಲಿದೆ. ಪತ್ರಿಕಾಗೋಷ್ಠಿಯಲ್ಲಿ ವಿವೇಕಾನಂದ ಕಾಲೇಜು ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಕನ್ನಡ ಪ್ರಾಧ್ಯಾಪಕ ಡಾ.ಮನಮೋಹನ ಯಂ ಅವರು ಮಾತನಾಡಿ ,ಕಾಲೇಜಿನ ಹಿರಿಯ ವಿದ್ಯಾರ್ಥಿಗಳು ಕಾಲೇಜು ಕಳೆದು ಎಷ್ಟೇ ವರ್ಷಗಳಾದರೂ ಇಂದಿಗೂ ಕೂಡಾ ಅವರ ಸಂಪರ್ಕ ಕಾಲೇಜಿನೊಂದಿಗೆ ನಿರಂತರವಾದದು. ಈ ನಿಟ್ಟಿನಲ್ಲಿ ಹಿರಿಯ ವಿದ್ಯಾರ್ಥಿ ಸಂಘ ಅಸ್ತಿತ್ವಕ್ಕೆ ಬಂದು ಅನೇಕ ಕಾರ್ಯಕ್ರಮ ಹಿರಿಯ ವಿದ್ಯಾರ್ಥಿಗಳಿಂದ ನಡೆದಿದೆ. ಜೂ.30ರಂದು ನಡೆಯುವ ಪದವಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಮತ್ತು ಹಿರಿಯ ವಿದ್ಯಾರ್ಥಿ ಸಂಘದ ದಿನಾಚರಣೆಯ ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಪ್ರೊ. ಶ್ರೀಪತಿ ಕಲ್ಲೂರಾಯ ಅಧ್ಯಕ್ಷತೆ ವಹಿಸಲಿದ್ದಾರೆ. ರಾಜ್ಯ ಕಾನುನು ವಿಶ್ವವಿದ್ಯಾನಿಲಯ ಹುಬ್ಬಳ್ಳಿಯ ವಿಶ್ರಾಂತ ಕುಲಪತಿ ಕಾಲೇಜಿನ ಹಿರಿಯ ವಿದ್ಯಾರ್ಥಿ ಡಾ.ಪಿ.ಈಶ್ವರ ಭಟ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಕಾಲೇಜಿನ ಆಡಳಿತ ಮಂಡಳಿ ಸಂಚಾಲಕ ಮರಳಿಕೃಷ್ಣ ಕೆ.ಎನ್, ಕಾಲೇಜಿನ ಪ್ರಾಂಶಪಾಲ ಪ್ರೊ. ವಿಷ್ಣು ಗಣಪತಿ ಭಟ್ ಉಪಸ್ಥಿತರಿರಲಿದ್ದಾರೆ ಎಂದು ಅವರು ಹೇಳಿದರು.

ಸನ್ಮಾನ ಸಮಾರಂಭ:
ತನ್ನ ಸ್ವಂತಕ್ಕೆ ಹೆಚ್ಚು ಇಟ್ಟುಕೊಳ್ಳದೆ ಸಮಾಜಕ್ಕೆ ಸಮರ್ಪಣೆ ಮಾಡುವಂತವರನ್ನು ಗುರುತಿಸುವ ಮತ್ತು ಅವರಿಂದ ಕಾಲೇಜಿನ ವಿದ್ಯಾರ್ಥಿಗಳಿಗೆ ಪ್ರೇರಣೆ ಸಿಗುವಂತಾಗಬೇಕೆಂಬ ಉದ್ದೇಶದಿಂದ ಗೌರವ ಕಾರ್ಯಕ್ರಮ ಮಾಡುತ್ತಿದ್ದೇವೆ. ಕಾಲೇಜಿನ ಹಿರಿಯರು ಮತ್ತು ನಿವೃತ್ತ ಪ್ರಾಧ್ಯಾಪಕ ಇತಿಹಾಸ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಪ್ರೊ. ವಿ.ಬಿ.ಅರ್ತಿಕಜೆ, ಸಂಸ್ಕೃತ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಅಚ್ಚುತ್ತ ಭಟ್, ರಸಾಯನ ಶಾಸ್ತ್ರ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಜೆ. ಸುಂದರ ಭಟ್, ವಾಣಿಜ್ಯ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಪ್ರೊ ವಾಸುದೇವ ರಾವ್ ರವರಿಗೆ, ಕಾಲೇಜಿನ ಹಿರಿಯ ವಿದ್ಯಾರ್ಥಿಗಳಾಗಿದ್ದ,5 ರೂಪಾಯಿ ಡಾಕ್ಟರ್ ಎಂದೇ ಖ್ಯಾತರಾಗಿರುವ ಡಾ. ವೇಣುಗೋಪಾಲ ಶರ್ಮ ಮತ್ತು ಎಸ್.ಎಲ್.ವಿ ಬುಕ್ಸ್ ಕಂಪೆನಿಯ ನಿರ್ದೇಶಕ ದಿವಾಕರ ದಾಸ್ ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.

ಇದೇ ಸಂದರ್ಭದಲ್ಲಿ ವಿಶ್ವವಿದ್ಯಾನಿಲಯ ಮಟ್ಟದಲ್ಲಿ ರ್‍ಯಾಂಕ್, ಚಿನ್ನದ ಪದಕ ಹಾಗು ನಗದು ಪುರಸ್ಕಾರಕ್ಕೆ ಭಾಜನ ಕಾಲೇಜಿನ 8 ಮಂದಿ ಹಿರಿಯ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು ಎಂದು ಡಾ. ಮನಮೋಹನ ಎಂ ಅವರು ತಿಳಿಸಿದರು.

ಹಿರಿಯ ವಿದ್ಯಾರ್ಥಿಗಳ ಸಂಪರ್ಕಕ್ಕೆ ಡಾಡಾ ತಯಾರಿ:
ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಸಂಘದ ಕೋಶಾಧಿಕಾರಿ ವಾಮನ್ ಪೈ ಅವರು ಮಾತನಾಡಿ ವಿವೇಕಾನಂದ ಕಾಲೇಜು ಸಂಸ್ತೆ ಮೌಲ್ಯಾಧಾರಿತ ಶಿಕ್ಷಣ ಕೊಡುವ ಸಂಸ್ಥೆ. ಹಿರಿಯ ವಿದ್ಯಾರ್ಥಿಗಳೇ ನಮ್ಮ ಸಂಸ್ಥೆಗೆ ಗೈಡ್. ಈ ನಿಟ್ಟಿನಲ್ಲಿ ಸುಮಾರು 50 ಸಾವಿರ ಮಂದಿ ವಿದ್ಯಾರ್ಥಿಗಳು ಇಲ್ಲಿ ವಿದ್ಯಾರ್ಜನೆಗೈದು ಬೇರೆ ಬೇರೆ ಕಡೆಯಲ್ಲಿ ಇದ್ದಾರೆ. ಆದರೆ ಪ್ರಸ್ತುತ ಹಿರಿಯ ವಿದ್ಯಾರ್ಥಿ ಸಂಘದಲ್ಲಿ 8ಸಾವಿರ ಮಂದಿ ಸದಸ್ಯರಿದ್ದಾರೆ. ಉಳಿದವರ ಸಂಪರ್ಕ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಸಂಸ್ಥೆಯ ಮೂಲಕ ಹಿರಿಯ ವಿದ್ಯಾರ್ಥಿಗಳ ಡಾಟಾ ಸಂಗ್ರಹಮಾಡಲಾಗುತ್ತಿದೆ. ಅವರನ್ನು ಸಂಪರ್ಕಿಸುವ ಕೆಲಸವೂ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರೊ. ವಿ.ಜಿ ಭಟ್, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಭವ್ಯ ಉಪಸ್ಥಿತರಿದ್ದರು.

ಬೀಳ್ಕೊಂಡ ವಿದ್ಯಾರ್ಥಿಗಳಿಗೆ ದೀಪ, ಕಿರಿಯರಿಗೆ ಭಗವದ್ಗೀತೆ ಪುಸ್ತಕ ಪ್ರದಾನ ಅಂತಿಮ ಪದವಿ ಮತ್ತು ಅಂತಿಮ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳನ್ನು ಬೀಳ್ಕೊಡುಗೆಯ ಸಂದರ್ಭದಲ್ಲಿ ಅವರಿಗೆ ದೀಪಗಳನ್ನು ಪ್ರದಾನ ಮಾಡಿ ಗೌರವಿಸಲಾಗುವುದು. ಇದೇ ಸಂದರ್ಭದಲ್ಲಿ ಕಿರಿಯ ವಿದ್ಯಾರ್ಥಿಗಳಿಗೆ ಭಗವದ್ಗೀತೆ ಪುಸ್ತಕ ಪ್ರದಾನ ಮಾಡಿ ಸ್ವಾಗತಿಸುವ ಕಾರ್ಯಕ್ರಮ ನಡೆಯಲಿದೆ.
ಸತೀಶ್ ರಾವ್, ಅಧ್ಯಕ್ಷರು, ಕಾಲೇಜು ಹಿರಿಯ ವಿದ್ಯಾರ್ಥಿ ಸಂಘ

LEAVE A REPLY

Please enter your comment!
Please enter your name here