ಪುತ್ತೂರು: ಎರಡು ವರ್ಷದ ಹಿಂದೆ ತನ್ನ ಹುಟ್ಟುಹಬ್ಬದಂದು ನೆಟ್ಟ ಗಿಡದ ಅಡಿಯಲ್ಲೇ ಈ ಬಾರಿ ಮತ್ತೆ ಹುಟ್ಟು ಹಬ್ಬ ಆಚರಿಸುವ ಮೂಲಕ ಪುತ್ತೂರು ಅಂಬಿಕಾ ವಿದ್ಯಾಲಯದ ನಾಲ್ಕನೇ ತರಗತಿ ವಿದ್ಯಾರ್ಥಿ ಪ್ರದ್ವಿನ್ ಎಲ್ಲರಿಗೂ ಮಾದರಿಯಾಗಿದ್ದಾನೆ.
ತನ್ನ ಹುಟ್ಟುಹಬ್ಬದಂದು ಪ್ರತೀ ವರ್ಷವೂ ಒಂದು ಗಿಡ ತನ್ನ ಮನೆಯ ಬಳಿ ನೆಡುವ ಮೂಲಕ ಬರ್ತ್‌ಡೇ ಆಚರಣೆ ಮಾಡುತ್ತಿದ್ದಾನೆ. ತನ್ನ ಏಳನೇ ವರ್ಷದ ಹುಟ್ಟುಹಬ್ಬದಂದು ಮನೆಯ ಅಂಗಳದಲ್ಲಿ ನೆಟ್ಟಿದ್ದ ಕದಂಬ ಗಿಡದ ಬುಡದಲ್ಲೇ ಈ ಬರಿ ತನ್ನ9ನೇ ಹುಟ್ಟುಹಬ್ಬವನ್ನು ಆಚರಣೆ ಮಾಡಿದ್ದು, ಪರಿಸರ ಪ್ರೇಮಿಗಳಿಗೆ ಈ ಮೂಲಕ ತನ್ನ ಹುಟ್ಟುಹಬ್ಬದ ಸಂಭ್ರಮವನ್ನು ಹಂಚಿಕೊಂಡಿದ್ದಾನೆ.
ತಾನು ನೆಟ್ಟ ಗಿಡವನ್ನೇ ಹಬ್ಬಕ್ಕಾಗಿ ಬಲೂನ್ ಕಟ್ಟಿ ಶೃಂಗಾರ ಮಾಡಿ ಅದರ ಅಡಿಯಲ್ಲೇ ಕೇಕ್ ಕತ್ತರಿಸುವ ಮೂಲಕ ಹುಟ್ಟು ಹಬ್ಬ ಆಚರಣೆ ಮಾಡಿ ಈ ಬಾರಿಯ ಹುಟ್ಟುಹಬ್ಬದಂದು ಇನ್ನೊಂದು ಗಿಡವನ್ನು ನೆಟ್ಟಿದ್ದಾನೆ. ಪ್ರದ್ವಿನ್ ಕೋಡಿಂಬಾಡಿ ಗ್ರಾಮದ ಬದಿನಾರು ನಿವಾಸಿ ಜಯಪ್ರಕಾಶ್ ಮತ್ತು ವಿನುತಾ ದಂಪತಿಗಳ ಪುತ್ರ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಜಯಪ್ರಕಾಶ್ ಬದಿನಾರ್ ಪರಿಸರದ ಬಗ್ಗೆ ಮಕ್ಕಳಿಗೆ ಎಳೆಯ ಪ್ರಾಯದಲ್ಲೇ ಪ್ರೀತಿ ಹುಟ್ಟುವಂತೆ ಮಾಡುವ ಏಕೈಕ ಉದ್ದೇಶದಿಂದ ತನ್ನ ಎರಡೂ ಮಕ್ಕಳ ಹುಟ್ಟು ಹಬ್ಬದಂದು ಪ್ರತೀ ವರ್ಷವೂ ಗಿಡ ನೆಡುವ ಮೂಲಕವೇ ಆಚರಣೆ ಮಾಡುತ್ತೇವೆ. ಇದು ಇನ್ನೊಬ್ಬರಿಗೆ ಪ್ರೇರಣೆಯಾಗಿ ಯಾರಾದರೂ ಒಂದು ಗಿಡ ನೆಟ್ಟರೂ ನಮಗೆ ಅದುವೇ ದೊಡ್ಡ ಸಂತೋಷ ಎಂದು ಹೇಳುತ್ತಾರೆ.