ನೆಲ್ಯಾಡಿ: ಶತಮಾನೋತ್ಸವದ ಹೊಸ್ತಿಲಲ್ಲಿರುವ ಕಡಬ ತಾಲೂಕಿನ ಆಲಂತಾಯ ಗ್ರಾಮದ ಆಲಂತಾಯ ಸರಕಾರಿ ಹಿ.ಪ್ರಾ.ಶಾಲೆಗೆ ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್. ಹಾಗೂ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ನವೀನ್‌ಕುಮಾರ್ ಭಂಡಾರಿಯವರು ಜೂ.26ರಂದು ಭೇಟಿ ನೀಡಿ ಶಾಲೆಯ ಅಭಿವೃದ್ಧಿ ಕುರಿತಂತೆ ಎಸ್‌ಡಿಎಂಸಿ ಹಾಗೂ ಹಳೆ ವಿದ್ಯಾರ್ಥಿಗಳ ಜೊತೆ ಚರ್ಚೆ ನಡೆಸಿದರು.
ಆಲಂತಾಯ ಸರಕಾರಿ ಹಿ.ಪ್ರಾ.ಶಾಲೆಯು ಆರಂಭಗೊಂಡು 2024ಕ್ಕೆ 100 ವರ್ಷ ಆಗಲಿದೆ. ಈ ಹಿನ್ನೆಲೆಯಲ್ಲಿ ಶಾಲೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಅವಲೋಕನ ನಡೆಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್.ಅವರು ಶಾಲೆಗೆ ಹೊಸ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಬಜತ್ತೂರು ಕ್ಲಸ್ಟರ್‌ನ ಸಮೂಹ ಸಂಪನ್ಮೂಲ ವ್ಯಕ್ತಿ ಮಂಜುನಾಥ್, ಶಾಲಾ ಹಳೆ ವಿದ್ಯಾರ್ಥಿಗಳಾದ ಪ್ರಶಾಂತ್ ರೈ ಆರಂತಬೈಲು, ನೀಲಪ್ಪ ನಾಯ್ಕ ಅಲಂಗಪ್ಪೆ, ಗೋಳಿತ್ತೊಟ್ಟು ಗ್ರಾ.ಪಂ.ಸದಸ್ಯರಾದ ಶಿವಪ್ರಸಾದ್, ಪದ್ಮನಾಭ ಪೂಜಾರಿ, ಎಸ್‌ಡಿಎಂಸಿ ಅಧ್ಯಕ್ಷ ಅಶೋಕ್ ಸಿ.ಬಿ., ಸದಸ್ಯ ಈಶ್ವರ ಭಟ್ ಉಪಸ್ಥಿತರಿದ್ದು ಸಲಹೆ ಸೂಚನೆ ನೀಡಿದರು. ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಸಹ ಶಿಕ್ಷಕಿಯರು ಸಹಕರಿಸಿದರು.