ಪುತ್ತೂರು: ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿಯಲ್ಲಿ ಜೂ.22 ಮತ್ತು 23 ರಂದು 2022-23 ನೇ ಸಾಲಿನ ಕಾಲೇಜು ವಾರ್ಷಿಕೋತ್ಸವ ಆಚರಿಸಲಾಯಿತು. ಶೈಕ್ಷಣಿಕ ವರ್ಷದಲ್ಲಿ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ, ಕ್ರೀಡೆ, ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಉತ್ತಮ ಸಾಧನೆ ತೋರಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಕಾರ್ಯಕ್ರಮವನ್ನು ಜೂ.22 ರಂದು ಆಯೋಜಿಸಲಾಗಿತ್ತು.
ಸರಕಾರಿ ಪದವಿ ಪೂರ್ವಕಾಲೇಜು ಬೆಟ್ಟಂಪಾಡಿ ಇದರ ಪ್ರಾಂಶುಪಾಲ ಗೋಪಾಲಗೌಡ ಮತ್ತು ರಕ್ಷಕ ಶಿಕ್ಷಕ ಸಂಘ ಅಧ್ಯಕ್ಷ ಸತ್ಯನಾರಾಯಣ ಅಡಿಗ ಮುಖ್ಯಅಥಿತಿಗಳಾಗಿ ಭಾಗವಹಿಸಿದ್ದರು. ವಾರ್ಷಿಕೋತ್ಸವದ ಅಂಗವಾಗಿ ಕಾಲೇಜಿನ ವಿದ್ಯಾರ್ಥಿಗಳಿಂದ ಶಶಿಪ್ರಭಾ ಪರಿಣಯ ಮತ್ತು ಸುದರ್ಶನ ವಿಜಯ ಯಕ್ಷಗಾನ ಕಾರ್ಯಕ್ರಮ ನಡೆಯಿತು.
ಮುಖ್ಯ ಅಥಿತಿಗಳಾಗಿ ಪುತ್ತೂರು ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ.ನರೇಂದ್ರ ರೈ ದೇರ್ಲ, ಭಾಗವಹಿಸಿ ಕರೋನೋತ್ತರ ಶೈಕ್ಷಣಿಕ ಬೆಳವಣಿಗೆಗಳು ಮತ್ತು ವಿದ್ಯಾರ್ಥಿಗಳ ಕಲಿಕೆಯ ಸವಾಲುಗಳು ಹಾಗು ಸ್ಪರ್ಧಾ ಜಗತ್ತಿನಲ್ಲಿ ವಿದ್ಯಾರ್ಥಿಗಳ ತೊಡಗಿಸಿಕೊಳ್ಳುವಿಕೆ ಕುರಿತು ತಮ್ಮ ಭಾಷಣದಲ್ಲಿಅಭಿಪ್ರಾಯ ಹಂಚಿಕೊಂಡರು. ಕಾಲೇಜಿನ ಪ್ರಾಂಶುಪಾಲ ಡಾ.ವರದರಾಜ ಚಂದ್ರಗಿರಿ 2022-23 ನೇ ಸಾಲಿನ ವಾರ್ಷಿಕ ವರದಿಯನ್ನು ವಾಚಿಸಿದರು. ಕಾಲೇಜಿನ ದತ್ತಿ ನಿಧಿಯಿಂದ 2022-23ನೇ ಸಾಲಿನಲ್ಲಿಅತೀ ಹೆಚ್ಚು ಅಂಕಗಳಿಸಿದ 15 ವಿದ್ಯಾರ್ಥಿಗಳಿಗೆ ನಗದು ಬಹುಮಾನ ವಿತರಿಸಲಾಯಿತು. ಸಮನ್ವಿ ಪ್ರಾರ್ಥನೆ ಹಾಡಿದರು, ವಿದ್ಯಾರ್ಥಿಕ್ಷೇಮ ಪಾಲನಾಧಿಕಾರಿ ಮಾರಣ್ಣ, ಕಾರ್ಯಕ್ರಮಕ್ಕೆ ಎಲ್ಲರನ್ನು ಹೃದಯ ಪೂರ್ವಕವಾಗಿ ಸ್ವಾಗತಿಸಿದರು. ಕಾಲೇಜು ವಿದ್ಯಾರ್ಥಿ ಪರಿಷತ್ತಿನ ಅಧ್ಯಕ್ಷ ರಕ್ಷಿತ್ ರೈ ವಂದನಾರ್ಪಣೆ ಸಲ್ಲಿಸಿದರು. ಡಾ.ಕೆ.ವಿ.ಮುರಳಿ ಕಾರ್ಯಕ್ರಮ ನಿರೂಪಿಸಿದರು. ಕಾಲೇಜು ವಿದ್ಯಾರ್ಥಿ ಪರಿಷತ್ತಿನ ಕಾರ್ಯದರ್ಶಿ ಮತ್ತು ಜೊತೆ ಕಾರ್ಯದರ್ಶಿಗಳಾದ ಹರೀಶ್ಚಂದ್ರ.ಎಸ್. ಮತ್ತು ಸಿಂಚನ.ಬಿ. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಾಲೇಜಿನ ಎಲ್ಲ ಬೋಧಕರು ಮತ್ತು ಬೋಧಕೇತರ ಸಿಬ್ಬಂದಿ ವರ್ಗ ಪೋಷಕರು ಹಾಗು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಕಾಲೇಜು ವಾರ್ಷಿಕೋತ್ಸವ ಸಂಪನ್ನಗೊಳಿಸಲಾಯಿತು.