ಫಿಲೋಮಿನಾ ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘ, ರಕ್ಷಕ-ಶಿಕ್ಷಕ ಸಂಘದ ವಾರ್ಷಿಕೋತ್ಸವ

0


ಜೀವನದಲ್ಲಿ ಶಿಸ್ತು, ಸಮಯಕ್ಕೆ ಪ್ರಾಧಾನ್ಯತೆ ನೀಡಿದಾಗ ಯಶಸ್ಸು-ಮೇಜರ್ ಜನರಲ್ ಎಂ.ವಿ ಭಟ್

ಪುತ್ತೂರು:ಪ್ರತಿಯೋರ್ವ ವಿದ್ಯಾರ್ಥಿಯು ತನ್ನ ಜೀವನದಲ್ಲಿ ಸಾಧನೆ ಮಾಡಬೇಕೆಂಬ ತುಡಿತವಿರಬೇಕು. ವಿದ್ಯಾರ್ಥಿ ಜೀವನದಲ್ಲಿ ಶಿಸ್ತನ್ನು ಮೈಗೂಡಿಸಿಕೊಂಡು, ಸಮಯಕ್ಕೆ ಪ್ರಾಧಾನ್ಯತೆ ನೀಡಿದಾಗ ಆತ ಜೀವನದಲ್ಲಿ ಯಶಸ್ಸು ಗಳಿಸುತ್ತಾನೆ ಎಂದು ಫಿಲೋಮಿನಾ ಕಾಲೇಜಿನ 1967ರ ಬ್ಯಾಚಿನ ಹಿರಿಯ ವಿದ್ಯಾರ್ಥಿ, ಇಂಡಿಯನ್ ಆರ್ಮಿಯ ನಿವೃತ್ತ ಮೇಜರ್ ಜನರಲ್ ಎಂ.ವಿ ಭಟ್ ರವರು ಹೇಳಿದರು.
ಮಾಯಿದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ದರ್ಬೆ ಫಿಲೋನಗರದ ಸಂತ ಫಿಲೋಮಿನಾ ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘ ಹಾಗೂ ರಕ್ಷಕ-ಶಿಕ್ಷಕ ಸಂಘದ ವಾರ್ಷಿಕೋತ್ಸವವು ಜೂ.27 ರಂದು ಕಾಲೇಜಿನ ಬೆಳ್ಳಿಹಬ್ಬದ ಸಭಾಂಗಣದಲ್ಲಿ ಜರಗಿದ್ದು, ಈ ಸಮಾರಂಭದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಭಾರತೀಯ ಸೇನೆ ಎಂಬುದು ದೇಶದ ಉತ್ಕೃಷ್ಟ ಸೇನೆಯಾಗಿದೆ. ದೇಶದ ಸೇನೆಯನ್ನು ಬಲಪಡಿಸಲು ವಿದ್ಯಾರ್ಥಿಗಳು ಸನ್ನದ್ಧರಾಗಬೇಕು. ವಿದ್ಯಾರ್ಥಿ ಜೀವನದಲ್ಲಿ ಸಾಧನೆ ಮಾಡಬೇಕೆನ್ನುವ ತುಡಿತದೊಂದಿಗೆ ತಮ್ಮಲ್ಲಿನ ಶಕ್ತಿಯನ್ನು ತೋರ್ಪಡಿಸುವಂತಾಗಬೇಕು, ದೇಶ ಸೇವೆಗೆ ಉತ್ಸುಕರಾಗಬೇಕು ಎಂದರು.

ಹಿರಿಯ ವಿದ್ಯಾರ್ಥಿಗಳು, ಸಂಸ್ಥೆಯ ಸಂಬಂಧ ಮತ್ತಷ್ಟು ಗಟ್ಟಿಗೊಳಿಸೋಣ-ವಂ. ಲಾರೆನ್ಸ್ ಮಸ್ಕರೇನ್ಹಸ್:
ಅಧ್ಯಕ್ಷತೆಯನ್ನು ವಹಿಸಿದ ಮಾಯಿದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ಲಾರೆನ್ಸ್ ಮಸ್ಕರೇನ್ಹಸ್ ರವರು ಮಾತನಾಡಿ, ಫಿಲೋಮಿನಾ ಕಾಲೇಜಿನ ವಿದ್ಯಾರ್ಥಿಗಳು ಸಂಸ್ಥೆಯ ಹೆಮ್ಮೆ. ಶಿಕ್ಷಣ ಶಿಲ್ಪಿ ಮೊ. ಪತ್ರಾವೋರವರು ಸ್ಥಾಪಿಸಿದ ಈ ವಿದ್ಯಾಸಂಸ್ಥೆಯಲ್ಲಿ ಸರಿಸುಮಾರು 16 ಸಾವಿರ ವಿದ್ಯಾರ್ಥಿಗಳು ಶಿಕ್ಷಣ ಪಡೆದು ದೇಶ-ವಿದೇಶಗಳಲ್ಲಿ ಬದುಕನ್ನು ಕಂಡುಕೊಂಡಿರುತ್ತಾರೆ. ಈಗಾಗಲೇ ಅನಿವಾಸಿ ಉದ್ಯಮಿ, ಕಾಲೇಜಿನ ಹಿರಿಯ ವಿದ್ಯಾರ್ಥಿ ಮೈಕಲ್ ಡಿ’ಸೋಜರವರು ಸಂಸ್ಥೆಯ ದುರಸ್ತಿಗಾಗಿ ಸುಮಾರು ರೂ.2 ಕೋಟಿಯಷ್ಟು ವಿನಿಯೋಗಿಸಿದ್ದು, ಹಿರಿಯ ವಿದ್ಯಾರ್ಥಿಗಳು ಸಂಸ್ಥೆಯ ಅಭಿವೃದ್ಧಿಗೆ ಶ್ರಮಿಸಬೇಕೆಂದು ನಿರೀಕ್ಷೆ ಇಟ್ಟುಕೊಂಡಿದ್ದೇವೆ. ಮುಂದಿನ ದಿನಗಳಲ್ಲಿ ಹಿರಿಯ ವಿದ್ಯಾರ್ಥಿಗಳು ಮತ್ತು ಸಂಸ್ಥೆಯ ಸಂಬಂಧ ಮತ್ತಷ್ಟು ಗಟ್ಟಿಗೊಳಿಸೋಣ ಎಂದರು.


ವಿದ್ಯಾರ್ಥಿಗಳಿಗೆ ಸರಿಯಾದ ವಿದ್ಯಾಭ್ಯಾಸವು ಸಿಕ್ಕಾಗ ಬದುಕು ಹಸನಾಗುತ್ತದೆ-ರಾಣಿ ಶೆಟ್ಟಿ:
ಕಾಲೇಜಿನ ಹಿರಿಯ ವಿದ್ಯಾರ್ಥಿನಿ ಪ್ರಸ್ತುತ ಬೆಂಗಳೂರು ಸಿಟಿ ಪೊಲೀಸ್ ‘ಪರಿಹಾರ್’ ಇದರ ಇನ್ ಚಾರ್ಜ್ ಆಗಿರುವ ರಾಣಿ ಶೆಟ್ಟಿ ಮಾತನಾಡಿ, ಫಿಲೋಮಿನಾ ವಿದ್ಯಾಸಂಸ್ಥೆಗೆ ಒಳ್ಳೆಯ ಹೆಸರಿದೆ. ಕಾಲೇಜು ವಿದ್ಯಾಭ್ಯಾಸ ಸಂದರ್ಭದಲ್ಲಿ ಸಂಸ್ಥೆಯ ಬಗ್ಗೆ ನಮಗೇನು ತಿಳಿಯದು ಆದರೆ ಯಾವಾಗ ನಾವು
ದೂರದ ಊರಿಗೆ ಹೋಗಿ ಜೀವನ ನಿರ್ವಹಣೆಯನ್ನು ಆರಂಭಿಸುತ್ತೇವೆಯೋ ಆವಾಗ ಗೊತ್ತಾಗುತ್ತದೆ ನಾವು ಕಲಿತ ಸಂಸ್ಥೆಯ ಬಗ್ಗೆ. ಹುಡುಗಿಯರು, ಮಹಿಳೆಯರು ಸಾಮಾಜಿಕ ಮಾಧ್ಯಮ, ಹೊರಾಂಗಣ ಸ್ಥಳಗಳಲ್ಲಿ, ಕರ್ತವ್ಯ ನಿರ್ವಹಿಸುವ ಜಾಗಗಳಲ್ಲಿ ಅತೀವ ಜಾಗರೂಕರಾಗಬೇಕು. ವಿದ್ಯಾರ್ಥಿಗಳಿಗೆ ಸರಿಯಾದ ವಿದ್ಯಾಭ್ಯಾಸವು ಸರಿಯಾದ ಸಮಯದಲ್ಲಿ ಸಿಕ್ಕಾಗ ಬದುಕು ಹಸನಾಗುತ್ತದೆ ಎಂದರು.

ಫಿಲೋಮಿನಾದ ಎದುರಿನಿಂದ ಹಾದು ಹೋಗುವಾಗ ‘ಕೈ’ ತಟ್ಟನೆ ಎದೆಗೆ ಹೋಗಿ ನಮಸ್ಕರಿಸಿ ಬಿಡುತ್ತದೆ-ಪುರಂದರ ರೈ:
ಮತ್ತೋರ್ವ ಹಿರಿಯ ವಿದ್ಯಾರ್ಥಿ, ಸಂತ ಫಿಲೋಮಿನಾ ಕಾಲೇಜಿನ ರಕ್ಷಕ-ಶಿಕ್ಷಕ ಸಂಘದ ಮಾಜಿ ಅಧ್ಯಕ್ಷ ಹಾಗೂ ಜೇಸಿಐ ರಾಷ್ಟ್ರೀಯ ತರಬೇತುದಾರ ಪುರಂದರ ರೈ ಮಿತ್ರಂಪಾಡಿ ಮಾತನಾಡಿ, ಜನಸಾಮಾನ್ಯರಿಗೂ ಶಿಕ್ಷಣ ಸಿಗಬೇಕು ಎನ್ನುವ ದೃಷ್ಟಿಕೋನದಿಂದ ಶಿಕ್ಷಣ ಶಿಲ್ಪಿ ಮೊ. ಪತ್ರಾವೋರವರು ಅಂದು ಒಳ್ಳೆಯ ಯೋಜನೆ, ಯೋಚನೆಗಳಿಂದ ಆರಂಭಿಸಿದ ಈ ಶಿಕ್ಷಣ ಸಂಸ್ಥೆಯು ಈಗಲೂ ಅದೇ ದೃಷ್ಟಿಕೋನವನ್ನು ಹೊಂದಿದೆ. ಫಿಲೋಮಿನಾ ವಿದ್ಯಾಸಂಸ್ಥೆಯ ಎದುರಿನಿಂದ ಹಾದು ಹೋಗುವಾಗ ‘ಕೈ’ ಎಂಬುದು ತಟ್ಟನೆ ಎದೆಗೆ ಹೋಗಿ ನಮಸ್ಕರಿಸಿ ಬಿಡುತ್ತದೆ, ಮಾತ್ರವಲ್ಲ ಸಾವಿರಾರು ಹಿರಿಯ ವಿದ್ಯಾರ್ಥಿಗಳಿಗೆ ಶಕ್ತಿಯನ್ನಾಗಿ ಮಾಡಿದ ಸಂಘಟನೆ ಈ ಫಿಲೋಮಿನಾ ವಿದ್ಯಾಸಂಸ್ಥೆಯಾಗಿದ್ದು ನಿಜಕ್ಕೂ ಇದು ಹಿರಿಯ ವಿದ್ಯಾರ್ಥಿಗಳ ಪಾಲಿಗೆ ದೇವಸ್ಥಾನವಾಗಿದೆ ಎಂದರು.
ಗೌರವ ಉಪಸ್ಥಿತಿಯಾಗಿ ಸಂತ ಫಿಲೋಮಿನಾ ಕಾಲೇಜಿನ ಪ್ರಾಂಶುಪಾಲ ಡಾ. ಆಂಟನಿ ಪ್ರಕಾಶ್ ಮೊಂತೇರೊ, ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಅಶೋಕ್ ರಾಯನ್ ಕ್ರಾಸ್ತಾ, ಸಂತ ಫಿಲೋಮಿನಾ ಕಾಲೇಜಿನ ಕ್ಯಾಂಪಸ್ ನಿರ್ದೇಶಕ ಸ್ಟ್ಯಾನಿ ಪಿಂಟೋರವರು ಸಂದರ್ಭೋಚಿತವಾಗಿ ಮಾತನಾಡಿದರು. ಸಂತ ಫಿಲೋಮಿನಾ ಕಾಲೇಜಿನ ಉಪ ಪ್ರಾಂಶುಪಾಲರಾದ ಪ್ರೊ. ಗಣೇಶ್ ಭಟ್ ಕೆ. ಹಾಗೂ ಡಾ.ಎ.ಪಿ ರಾಧಾಕೃಷ್ಣ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಬಹುಮಾನ ವಿತರಣೆ:
ಜೂ.25 ರಂದು ಕಾಲೇಜಿನ ಕ್ರೀಡಾಂಗಣದಲ್ಲಿ ಹಿರಿಯ ವಿದ್ಯಾರ್ಥಿ ಸಂಘ ಹಾಗೂ ರಕ್ಷಕ-ಶಿಕ್ಷಕ ಸಂಘದ ವಾರ್ಷಿಕೋತ್ಸವ ಪ್ರಯುಕ್ತ ನಡೆದ ಹಿರಿಯ ವಿದ್ಯಾರ್ಥಿಗಳಿಗೆ ಹಾಗೂ ರಕ್ಷಕ-ಶಿಕ್ಷಕ ಸಂಘದ ಸದಸ್ಯರುಗಳಿಗೆ ಪುರುಷರಿಗೆ ವಾಲಿಬಾಲ್, ಶಾಟ್ ಫುಟ್, ಆಫೀಸರ್ಸ್ ಕ್ಲಬ್ ನಲ್ಲಿ ಶಟಲ್ ಬ್ಯಾಡ್ಮಿಂಟನ್(ಮಹಿಳೆಯರಿಗೂ) ಮತ್ತು ಮಹಿಳೆಯರಿಗೆ ತ್ರೋಬಾಲ್, ಶಾಟ್ ಫುಟ್ ಪಂದ್ಯಾಟವನ್ನು ಆಯೋಜಿಸಲಾಗಿದ್ದು, ಇದರ ವಿಜೇತರಿಗೆ ಈ ಸಂದರ್ಭದಲ್ಲಿ ಬಹುಮಾನ ನೀಡಲಾಯಿತು.

ಎನ್.ಸಿ.ಸಿ/ಕ್ರೀಡಾ ಪ್ರತಿಭೆಗಳಿಗೆ ಗೌರವ:
ಎನ್.ಸಿ.ಸಿಯಲ್ಲಿ ನವದೆಹಲಿಯ ತಲ್ ಸೈನಿಕ್ ಕ್ಯಾಂಪ್ ನಲ್ಲಿ ಭಾಗವಹಿಸಿದ ಕೃತಿ ಕೆ.ಎನ್, ಹಾಗೂ ಕ್ರೀಡೆಯಲ್ಲಿ ಸಾಧನೆ ಮಾಡಿದ ಅಂತಿಮ ಬಿಎಯ ಅಬ್ದುಲ್ ನಾಸಿರ್(ಕಬಡ್ಡಿ), ದ್ವಿತೀಯ ಬಿಎಯ ತ್ರಿಶೂಲ್(ರೆಸ್ಕ್ಯೂ ಸ್ವಿಮ್ಮಿಂಗ್/ಈಜು), ಅಂತಿಮ ಬಿಕಾಂನ ಬ್ಯೂಲ ಪಿ.ಟಿ(ವೈಟ್ ಲಿಪ್ಟಿಂಗ್), ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ವರ್ಷಾ(ಹ್ಯಾಮರ್ ತ್ರೋ), ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಸ್ಪಂದನಾ(ವೈಟ್ ಲಿಪ್ಟಿಂಗ್) ರವರನ್ನು ಗೌರವಿಸಲಾಯಿತು.

ವಿದ್ಯಾರ್ಥಿವೇತನ ವಿತರಣೆ:
ಕಾಲೇಜಿನ ನಿವೃತ್ತ ಪ್ರಾಂಶುಪಾಲ ಹೆನ್ರಿ ಕ್ಯಾಸ್ಟಲಿನೋ ಧತ್ತಿನಿಧಿ ಸಹಾಯಾರ್ಥ ಫಲಾನುಭವಿ ವಿದ್ಯಾರ್ಥಿಗಳಾದ ವಿನ್ಯ ರೈ(ಅಂತಿಮ ಬಿಎ), ನಿರೀಕ್ಷಾ(ಅಂತಿಮ ಬಿಎಸ್ಸಿ), ನಿಶಿತಾ ಆಚಾರ್ಯ(ಅಂತಿಮ ಬಿಕಾಂ), ಹರ್ಷಿತಾ ಕೆ.ಎಸ್(ಅಂತಿಮ ಬಿಬಿಎ), ಅನೀಶ್(ಅಂತಿಮ ಬಿ.ಎಸ್.ಡಬ್ಲ್ಯೂ), ಅರ್ಪಿತಾ(ಅಂತಿಮ ಬಿಸಿಎ)ರವರುಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಕಾಲೇಜಿನ ಹಿರಿಯ ವಿದ್ಯಾರ್ಥಿಗಳು, ರಕ್ಷಕ-ಶಿಕ್ಷಕ ಸಂಘದ ಸದಸ್ಯರುಗಳು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಸಂತ ಫಿಲೋಮಿನಾ ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎ.ಜೆ ರೈ ಸ್ವಾಗತಿಸಿ, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ ವಂದಿಸಿದರು. ಉಪನ್ಯಾಸಕಿ ವಾರಿಜ ಮತ್ತು ಬಳಗ ಪ್ರಾರ್ಥಿಸಿದರು. ಕಾರ್ಯದರ್ಶಿ ತೇಜಸ್ವಿ ಭಟ್ ಸಾಧಕರ ಪಟ್ಟಿ ವಾಚಿಸಿದರು. ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯಕಾರಿ ಸಮಿತಿ ಸದಸ್ಯೆ ಪ್ರತಿಮಾ ಹೆಗ್ಡೆ ಅತಿಥಿಗಳ ಪರಿಚಯ ಮಾಡಿದರು. ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಉಪನ್ಯಾಸಕ ಪ್ರಶಾಂತ್ ರೈ, ಕೋಶಾಧಿಕಾರಿ ಉಪನ್ಯಾಸಕ ಅಭಿಷೇಕ್ ಸುವರ್ಣ, ಉಪನ್ಯಾಸಕ ಧನ್ಯ ಪಿ.ಟಿ, ಉಪನ್ಯಾಸಕ ಲೆಪ್ಟಿನೆಂಟ್ ಜೋನ್ಸನ್ ಡೇವಿಡ್ ಸಿಕ್ವೇರಾ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಚಂದ್ರಾಕ್ಷ ಪೇರಡ್ಕ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು.

ಸಾಧಕರಿಗೆ ಸನ್ಮಾನ…
ಇತ್ತೀಚೆಗೆ ನಿವೃತ್ತಿಗೊಂಡ ಫಿಲೋಮಿನಾ ಕಾಲೇಜಿನ ವಿಜ್ಞಾನ ವಿಭಾಗದ ಡೀನ್ ಹಾಗೂ ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಉದಯ ಕೆ, ಸಹಕಾರಿ ರತ್ನ ಪುರಸ್ಕೃತ ಹಿರಿಯ ವಿದ್ಯಾರ್ಥಿ ದಂಬೆಕಾನ ಸದಾಶಿವ ರೈ, ಪಿ.ಎಚ್.ಡಿ ಪದವಿ ಪಡೆದ ಕಾಲೇಜಿನ ರಸಾಯನಶಾಸ್ತ್ರ ವಿಭಾಗದ ಡಾ.ಎಡ್ವಿನ್ ಎಸ್. ಡಿ’ಸೋಜ, 2022ನೇ ಸಾಲಿನ ಮಂಗಳೂರು ವಿಶ್ವವಿದ್ಯಾನಿಲಯದಿಂದ ಹಿಂದಿ ಎಂ.ಎ ಇದರಲ್ಲಿ ಪ್ರಥಮ ರ್ಯಾಂಕ್ ಪಡೆದ ಕಾಲೇಜಿನ ಹಿಂದಿ ಭಾಷಾ ವಿಭಾಗದ ಉಪನ್ಯಾಸಕಿ ಹಾಗೂ ಹಿರಿಯ ವಿದ್ಯಾರ್ಥಿನಿ ಡಿಂಪಲ್ ಮಿಶಲ್ ತಾವ್ರೋ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಮೈಸೂರು ಇವರು ನಡೆಸಿದ ಎಂ.ಎ ಎಜ್ಯುಕೇಶನ್ ನಲ್ಲಿ ಆರನೇ ರ್ಯಾಂಕ್ ಗಳಿಸಿದ ಕಾಲೇಜಿನ ಕ್ಯಾಂಪಸ್ ನಿರ್ದೇಶಕ ಸ್ಟ್ಯಾನಿ ಪಿಂಟೋ, ಎಂ.ಎ ಎಕನಾಮಿಕ್ಸ್ ನಲ್ಲಿ ಪ್ರಥಮ ರ್ಯಾಂಕ್ ಗಳಿಸಿದ ಕಾಲೇಜಿನ ಎಂಕಾಂ ಸಂಯೋಜಕರಾದ ಯಶವಂತ ಜೆ. ನಾಯಕ್ ರವರುಗಳನ್ನು ಗುರುತಿಸಿ ಸನ್ಮಾನಿಸಲಾಯಿತು.

ಗೌರವಾರ್ಪಣೆ..
2022ನೇ ಸಾಲಿನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ನಡೆಸಿದ ಬಿಎಸ್ಸಿ ಪರೀಕ್ಷೆಯಲ್ಲಿ ಸಸ್ಯಶಾಸ್ತ್ರ ವಿಭಾಗದಲ್ಲಿ ಗರಿಷ್ಟ ಅಂಕಗಳೊಂದಿಗೆ ಟಿ.ಎಂ.ಎ ಪೈ ಗೋಲ್ಡ್ ಮೆಡಲ್ ಪುರಸ್ಕೃತರಾದ ಕಾಲೇಜಿನ ಅಂತಿಮ ಬಿಎಸ್ಸಿ ವಿದ್ಯಾರ್ಥಿನಿ ಕೃಪಾಲಿ, ಸ್ನಾತಕೋತ್ತರ ವಿಭಾಗದಲ್ಲಿ ಎಂಎಸ್ಸಿ ಕಂಪ್ಯೂಟರ್ ಸೈನ್ಸ್ ನಲ್ಲಿ ದೀಪ್ತಿ ವಿ (1ನೇ ರ್ಯಾಂಕ್), ಎಂ.ಎಸ್.ಡ.ಬ್ಲ್ಯೂವಿನಲ್ಲಿ ಅನುಷಾ(2ನೇ ರ್ಯಾಂಕ್), ಎಂಕಾಂನಲ್ಲಿ ಅಪೂರ್ವ ಪಿ.ವಿ ಹಾಗೂ ವಿನೋಲಿಯಾ ಜಾಸ್ಲಿನ್ ಮಿನೇಜಸ್(3ನೇ ರ್ಯಾಂಕ್), ಶ್ಲಾಘ್ಯ ಆಳ್ವ ಕೆ, ಶ್ರಾವ್ಯ ಎನ್.ಕೆ ಹಾಗೂ ಶ್ರೀಲಕ್ಷ್ಮೀ ಭಟ್(4ನೇ ರ್ಯಾಂಕ್), ಬಾಸಿಲ, ಚೈತ್ರಾ ಹಾಗೂ ಸಿ.ಎಸ್ ಜಯಶ್ರೀ(5ನೇ ರ್ಯಾಂಕ್), ಹರಿಣಿ ಎಸ್.ಪೈ(7ನೇ ರ್ಯಾಂಕ್), ಹರ್ಷಿತಾ ಎಸ್ ಹಾಗೂ ಜೋಸ್ನಾ ಸಿ.ಜೆ(10ನೇ ರ್ಯಾಂಕ್), ಪದವಿ ವಿಭಾಗದಲ್ಲಿ ಬಿಸಿಎಯ ಫಾತಿಮತ್ ಸಾನಿದಾ(1ನೇ ರ್ಯಾಂಕ್), ಬಿಎಸ್ಸಿಯ ಧೀರಜ್ ಎಂ(3ನೇ ರ್ಯಾಂಕ್), ಶ್ರೀಶ ಎಂ.ಎಸ್ ಹಾಗೂ ಬಿಬಿಎಯ ಹರ್ಷಿತಾ ಕೆ(5ನೇ ರ್ಯಾಂಕ್), ಬಿಕಾಂನ ಶ್ರೀದೇವಿ ಕೆ(6ನೇ ರ್ಯಾಂಕ್), ಪ್ರತಿಮಾ ಎ(7ನೇ ರ್ಯಾಂಕ್), ನಿಶಾಪ್ರಭ ಎನ್(10ನೇ ರ್ಯಾಂಕ್) ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಗರಿಷ್ಟ ಅಂಕಗಳನ್ನು ಗಳಿಸಿದ ಕಲಾ ವಿಭಾಗದಲ್ಲಿ ಸಂಜನಾ ಜೆ.ರಾವ್, ವಾಣಿಜ್ಯ ವಿಭಾಗದಲ್ಲಿ ಸಮೃದ್ಧಿ ಆರ್.ರೈ, ವಿಜ್ಞಾನ ವಿಭಾಗದಲ್ಲಿ ಸಂಜನಾ ಕೆ.ರವರುಗಳಿಗೆ ಹೂಗುಚ್ಛ ನೀಡಿ ಗೌರವಿಸಲಾಯಿತು.

LEAVE A REPLY

Please enter your comment!
Please enter your name here