ಸಾಲೆತ್ತೂರು: ಆಟೋ ರಿಕ್ಷಾ ತಡೆದು ದಂಪತಿಗೆ ಹಲ್ಲೆ ನಡೆಸಿದ ಪ್ರಕರಣ – ಇಬ್ಬರ ಬಂಧನ

0

ವಿಟ್ಲ:ಬಂಟ್ವಾಳ ತಾಲೂಕು ಕೊಳ್ನಾಡು ಗ್ರಾಮದ ಸದಾಶಿವ ದೇವಸ್ಥಾನಕ್ಕೆ ಹೋಗುವ ದಾರಿಯಲ್ಲಿ ಆಟೋದಲ್ಲಿ ಸಂಚರಿಸುತ್ತಿದ್ದ ದಂಪತಿಗೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳ ಪೈಕಿ ಇಬ್ಬರನ್ನು ವಿಟ್ಲ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಪಾತೂರು ಗ್ರಾಮದ ತಲೆಕ್ಕಿ ಒಳಕ್ಕುಡ್ಡೆ ನಿವಾಸಿ ವಿಶ್ವನಾಥ ಶೆಟ್ಟಿಯವರ ಪುತ್ರ ಸುದರ್ಶನ್ ಯಾನೇ ಮುನ್ನ ಹಾಗೂ ಬಂಟ್ವಾಳ ತಾಲೂಕು ಸಾಲೆತ್ತೂರು ಗ್ರಾಮದ ಮೆದು ಕಟ್ಟತ್ತಿಲ ಅಂಗನವಾಡಿ ಬಳಿಯ ಪೂವಣಿರವರ ಪುತ್ರ ಧನ್ ರಾಜ್ ಬಂಧಿತ ಆರೋಪಿಗಳಾಗಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಬಂಟ್ವಾಳ ತಾಲೂಕು ಸಾಲೆತ್ತೂರು ಗ್ರಾಮದ ಪಾಲ್ತಾಜೆ ನಿವಾಸಿ ಸೀತಾರಾಮ ಪೂಜಾರಿರವರ ಪುತ್ರ ಜಯಂತರವರು ನೀಡಿದ ದೂರಿನಂತೆ ಮುನ್ನ ಅಲಿಯಾಸ್ ಸುದರ್ಶನ, ಶರತ್, ಧನು, ಉದಯರವರ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ಜಯಂತರವರು ನೀಡಿದ ದೂರಿನಲ್ಲೇನಿದೆ: ಜೂ.25ರಂದು ರಾತ್ರಿ ನಾನು ಹಾಗೂ ಪತ್ನಿ ನಮ್ಮ ಮಗುವನ್ನು ಚಿಕಿತ್ಸೆಗಾಗಿ ಸ್ನೇಹಿತನ ಜೊತೆಗೆ ಆಟೋ ರಿಕ್ಷಾದಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದ ವೇಳೆ ಬಂಟ್ವಾಳ ತಾಲೂಕು ಕೊಳ್ನಾಡು ಗ್ರಾಮದ ಸದಾಶಿವ ದೇವಸ್ಥಾನಕ್ಕೆ ಹೋಗುವ ದಾರಿ ತಲುಪುತ್ತಿದ್ದಂತೆ ಸಾಲೆತ್ತೂರಿನ ವೈನ್ ಶಾಪ್ ಕಡೆಯಿಂದ ಎರಡು ಮೋಟಾರ್ ಸೈಕಲ್‌ಗಳಲ್ಲಿ ಬಂದ ಮುನ್ನ ಯಾನೆ ಸುದರ್ಶನ್, ಶರತ್, ಧನು ಮತ್ತು ಉದಯರವರು ನಮ್ಮ ಆಟೋ ರಿಕ್ಷಾವನ್ಮು ತಡೆದು ನಿಲ್ಲಿಸಿ ನನ್ನ ಪತ್ನಿಯ ಮೈ ಮೇಲೆ ಕೈ ಹಾಕಿ ದೂಡಿದಾಗ ನಾನು ಅದನ್ನು ತಡೆಯಲು ಹೋದಾಗ ನನ್ನ ಮೇಲೆ ತಂಡ ಹಲ್ಲೆ ನಡೆಸಿದೆ. ನನ್ನ ಪತ್ನಿ ಹಾಗೂ ಸ್ನೇಹಿತ ಹಲ್ಲೆ ನಡೆಸುವುದನ್ನು ತಡೆದಾಗ ತಂಡ ನನಗೆ ಜೀವ ಬೆದರಿಕೆ ಒಡ್ಡಿ ತೆರಳಿದೆ ಎಂದು ಜಯಂತರವರು ವಿಟ್ಲ ಠಾಣಾ ಪೊಲೀಸರಿಗೆ ದೂರು ನೀಡಿದ್ದರು. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿರುವ ವಿಟ್ಲ ಠಾಣಾ ಪೊಲೀಸರು ಆರೋಪಿಗಳ ಪೈಕಿ ಇಬ್ಬರನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.

LEAVE A REPLY

Please enter your comment!
Please enter your name here