ಕೌಕ್ರಾಡಿ ಶಾಲಾ ಮುಖ್ಯ ಶಿಕ್ಷಕಿ ಜೆಸಿಂತಾ ಡಿ’ಸೋಜ ಜೂ.30 ರಂದು ಸೇವಾ ನಿವೃತ್ತಿ

0

ನೆಲ್ಯಾಡಿ: ಕೌಕ್ರಾಡಿ ಸಂತ ಜಾನರ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ಜೆಸಿಂತಾ ಡಿ ಸೋಜ ಅವರು ಜೂ.30ರಂದು ವಯೋ ನಿವೃತ್ತಿ ಹೊಂದಲಿದ್ದಾರೆ. ಜೆಸಿಂತಾ ಡಿಸೋಜರವರು ಶಿಕ್ಷಕಿಯಾಗಿ 39 ವರ್ಷ ಸುದೀರ್ಘಕಾಲ ಸೇವೆ ಸಲ್ಲಿಸಿದ್ದಾರೆ.

ಇವರು ಬೆಳ್ತಂಗಡಿ ತಾಲೂಕಿನ ಮಡಂತ್ಯಾರು ಬಳಿಯ ಮಾಲಾಡಿ ದಿ.ಜೋನ್ ಡಿಸೋಜ ಹಾಗೂ ಪೌಲಿನ್ ಫೆರ್ನಾಂಡಿಸ್‌ರವರ ಪುತ್ರಿಯಾಗಿ 1963 ಜೂ.28ರಂದು ಜನಿಸಿದರು. ಮಡಂತ್ಯಾರು ಗಾರ್ಡಿಯನ್ ಏಂಜೆಲ್ಸ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಪುಂಜಾಲಕಟ್ಟೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹೈಸ್ಕೂಲ್ ವಿದ್ಯಾಬ್ಯಾಸ, ಮಂಗಳೂರು ಸೈಂಟ್ ಆನ್ಸ್ ಶಿಕ್ಷಕಿಯರ ತರಬೇತಿ ಸಂಸ್ಥೆಯಲ್ಲಿ ಟಿ.ಸಿ.ಹೆಚ್. ಶಿಕ್ಷಣ ಪಡೆದರು. ಬಳಿಕ ಮಡಂತ್ಯಾರು ಗಾರ್ಡಿಯನ್ ಏಂಜೆಲ್ಸ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1984ರಂದು ಸಹ ಶಿಕ್ಷಕಿಯಾಗಿ ಕೆಲಸಕ್ಕೆ ಸೇರಿ ಐದು ವರ್ಷಗಳ ಸೇವೆ ಸಲ್ಲಿಸಿದರು. ತದನಂತರ ಕೌಕ್ರಾಡಿ ಸಂತ ಜಾನರ ಹಿರಿಯ ಪ್ರಾಥಮಿಕ ಶಾಲೆಗೆ 1989ರಲ್ಲಿ ವರ್ಗಾವಣೆಗೊಂಡು ಆಗಮಿಸಿ ಶಿಕ್ಷಕಿಯಾಗಿ, ಮುಖ್ಯಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದಾರೆ.

ಸ್ಥಳೀಯ ಕೊಕ್ಕಡ ಚರ್ಚ್ ಪಾಲನಾ ಸಮಿತಿಯ ಸದಸ್ಯರಾಗಿ, ಸ್ಕೌಟ್ಸ್ ಗೈಡ್ಸ್ ಶಿಕ್ಷಕಿಯಾಗಿ, ಕೊಕ್ಕಡ ಕಪಿಲಾ ಜೇಸಿ ಸಂಸ್ಥೆಯ ಸದಸ್ಯರಾಗಿ ಉತ್ತಮ ಸಮಾಜ ಸೇವೆಯನ್ನು ಸಲ್ಲಿಸಿದ್ದಾರೆ. ಗುಣಮಟ್ಟದ ಶಿಕ್ಷಣ, ಬಡ, ದುರ್ಬಲ ವರ್ಗದ ವಿದ್ಯಾರ್ಥಿಗಳು ಹಾಗೂ ಬಡಬಗ್ಗರಿಗೆ ಕೊಡುಗೈ ದಾನಿಯಾಗಿ ಪರಿಸರದಲ್ಲಿ ಜನಪ್ರಿಯ ಶಿಕ್ಷಕಿಯಾಗಿ ಗುರುತಿಸಿಕೊಂಡಿದ್ದಾರೆ. ಜೆಸಿಂತಾ ಡಿ ಸೋಜ ಅವರ ಉತ್ತಮ ಸೇವೆಯನ್ನು ಗುರುತಿಸಿ ಹಲವಾರು ಸಂಸ್ಥೆಗಳು ಗೌರವಿಸಿವೆ. ಭಾರತೀಯ ಜೇಸಿ ಸಂಸ್ಥೆಯ ಹೆಚ್. ಜಿ. ಎಫ್. ಎಂಬ ಪುರಸ್ಕಾರ ಲಭಿಸಿದೆ.

ಜೆಸಿಂತಾ ಅವರ ಪತಿ ಜೋಸೆಫ್ ಪಿರೇರಾ ಅವರು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದಾರೆ. ಮಕ್ಕಳಾದ ಜಿತೇಶ್ ಎಲ್ ಪಿರೇರಾ ಹಾಗೂ ಜಸ್ವಂತ್ ಪಿರೇರಾ ಅವರು ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಕಿರಿಯ ಪುತ್ರ ಜೋಯಲ್ ಪಿರೇರಾ ಅವರು ಸಿವಿಲ್ ಇಂಜಿನಿಯರ್ ಆಗಿದ್ದು ಆಮ್ ಆದ್ಮಿ ಪಕ್ಷದ ಕೇಂದ್ರ ಕಚೇರಿ ಸೇವೆಯಲ್ಲಿ ಇದ್ದಾರೆ. ಜೆಸಿಂತಾ ಅವರು ಕುಟುಂಬದೊಂದಿಗೆ ಕೊಕ್ಕಡ ಗ್ರಾಮದ ಜೋಡುಮಾರ್ಗ ಎಂಬಲ್ಲಿ ವಾಸವಾಗಿದ್ದಾರೆ.

LEAVE A REPLY

Please enter your comment!
Please enter your name here