ಉಪ್ಪಿನಂಗಡಿ: ಮಗುವನ್ನು ಎತ್ತೊಯ್ದ ಮಾನಸಿಕ ಅಸ್ವಸ್ಥೆ-ಜಾಗೃತ ನಾಗರಿಕರಿಂದ ಮಗುವಿನ ರಕ್ಷಣೆ

0

ಉಪ್ಪಿನಂಗಡಿ: ಅಂಗಡಿಯೊಂದರ ಬಳಿ ನಿಂತಿದ್ದ ಮಗುವೊಂದನ್ನು ಮಾನಸಿಕ ಅಸ್ವಸ್ಥೆಯೋರ್ವಳು ಎತ್ತಿಕೊಂಡೊಯ್ಯುತ್ತಿದ್ದಾಗ ಎಚ್ಚೆತ್ತ ನಾಗರಿಕರು ಮಗುವನ್ನು ರಕ್ಷಿಸಿದ ಘಟನೆ ಜೂ.29ರಂದು ಉಪ್ಪಿನಂಗಡಿಯಲ್ಲಿ ನಡೆದಿದೆ.


ರಾಜಸ್ಥಾನ ಮೂಲದ ಕುಟುಂಬವೊಂದು ಉಪ್ಪಿನಂಗಡಿ ಹಳೇ ಬಸ್ ನಿಲ್ದಾಣದ ಬಳಿಯ ಫ್ಯಾನ್ಸಿಯೊಂದಕ್ಕೆ ಖರೀದಿಗೆಂದು ಬಂದಿತ್ತು. ಈ ವೇಳೆ ಅವರ ನಾಲ್ಕು ವರ್ಷ ಪ್ರಾಯದ ಮಗುವೊಂದು ಮೊಬೈಲ್ ಪೋನಿನಲ್ಲಿ ಮಗ್ನವಾಗಿ ಫ್ಯಾನ್ಸಿ ಅಂಗಡಿಯಿಂದ ಹೊರ ಬಂದಿತ್ತು. ಈ ಸಂದರ್ಭದಲ್ಲಿ ಉಪ್ಪಿನಂಗಡಿ ಪರಿಸರದಲ್ಲಿ ಅಲೆದಾಡುತ್ತಿರುವ ಲಲಿತಾ ಎಂಬ ಮಾನಸಿಕ ಅಸ್ವಸ್ಥೆ ಮಗುವನ್ನು ಎತ್ತಿಕೊಂಡು ಉಪ್ಪಿನಂಗಡಿಯ ಹೊಸ ಬಸ್ ನಿಲ್ದಾಣದವರೆಗೆ ಕರೆದುಕೊಂಡು ಹೋಗಿದ್ದಾಳೆ. ಇದನ್ನು ಕಂಡ ಸ್ಥಳೀಯ ನಿವಾಸಿ ಸಲೀಂ ಎಂಬವರು ಆಕೆಯ ಕೈಯಿಂದ ಮಗುವನ್ನು ಬಲವಂತವಾಗಿ ಕಿತ್ತುಕೊಂಡು ಮಗುವಿನ ಹೆತ್ತವರ ಬಗ್ಗೆ ಸ್ಥಳೀಯ ವ್ಯಾಪಾರಿಗಳಲ್ಲಿ ವಿಚಾರಿಸ ತೊಡಗಿದರು. ಈ ವೇಳೆಗಾಗಲೇ ತಮ್ಮ ಮಗು ಕಣ್ಮರೆಯಾಗಿರುವುದನ್ನು ಅರಿತ ಹೆತ್ತವರು ಮಗುವನ್ನು ಹುಡುಕಾಡಿಕೊಂಡು ಬರುತ್ತಿರುವಾಗ ಸಲೀಂ ಕೈಯಲ್ಲಿದ್ದ ಮಗುವನ್ನು ಕಂಡು ನೆಮ್ಮದಿಯ ನಿಟ್ಟುಸಿರು ಬಿಟ್ಟರು.
ಇಲ್ಲಿ ಗಮನಿಸಬೇಕಾದ ಅಂಶವೇನೆಂದರೆ ಮೊಬೈಲ್ ದೃಶ್ಯಾವಳಿಯಲ್ಲಿ ಆಳವಾಗಿ ಮಗ್ನವಾಗಿದ್ದ ಮಗುವಿಗೆ ತಾನು ಹೆತ್ತವರನ್ನು ಬಿಟ್ಟು ಅಂಗಡಿಯ ಹೊರಗೆ ಬಂದಿದ್ದಾಗಲೀ, ತನ್ನನ್ನು ಮಾನಸಿಕ ಅಸ್ವಸ್ಥೆಯೋರ್ವಳು ಕರೆದೊಯ್ದಿರುವ ಬಗ್ಗೆಯಾಗಲಿ, ವ್ಯಕ್ತಿಯೋರ್ವರಿಂದ ರಕ್ಷಣೆಗೊಳಗಾಗಿರುವ ವಿಚಾರವಾಗಲಿ ಯಾವುದೇ ಅರಿವಿಗೆ ಬಂದಿರಲಿಲ್ಲ. ಇತ್ತ ತನ್ನ ಕೈಯಿಂದ ಮಗುವನ್ನು ಕಿತ್ತುಕೊಂಡೊಯ್ದ ಬಳಿಕ ಜೋರಾಗಿ ಅಳಲು ಆರಂಭಿಸಿದ ಲಲಿತಾ ತನ್ನ ಮಗುವನ್ನು ನನ್ನಿಂದ ಕಿತ್ತೊಯ್ದರೆಂದು ರಂಪಾಟವೆಬ್ಬಿಸುತ್ತಿದ್ದಳು. ಒಟ್ಟಾರೆ ಜಾಗೃತ ನಾಗರಿಕರ ಸಮಯ ಪ್ರಜ್ಞೆಯಿಂದಾಗಿ ಮಗು ಸಂಕಷ್ಟಕ್ಕೀಡಾಗುವ ಸನ್ನಿವೇಶ ತಪ್ಪಿದಂತಾಯಿತು.

LEAVE A REPLY

Please enter your comment!
Please enter your name here