ಪುತ್ತೂರು: ವಿಟ್ಲದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ದಕ್ಷಿಣ ಕನ್ನಡ ಜಿಲ್ಲೆಯ ತೆಂಗು ರೈತ ಉತ್ಪಾದಕರ ಕಂಪೆನಿ ನಿಯಮಿತ ಇದರ ಕಾರ್ಪೊರೇಟ್ ಕಚೇರಿಯು ಪುತ್ತೂರು ಕಲ್ಲಾರೆ ಪವಾಜ್ ಕಾಂಪ್ಲೆಕ್ಸ್ನಲ್ಲಿ ಜು. 1ರಂದು ಉದ್ಘಾಟನೆಗೊಳ್ಳಲಿದೆ. ಜು.2ರಂದು ಸಂಸ್ಥೆಯಿಂದ ಪಂಚಕಲ್ಪ ಯೋಜನೆಗಳ ಉದ್ಘಾಟನಾ ಕಾರ್ಯಕ್ರಮ ಪುತ್ತೂರು ಪುರಭವನದಲ್ಲಿ ನಡೆಯಲಿದೆ ಎಂದು ದಕ್ಷಿಣ ಕನ್ನಡ ಜಿಲ್ಲೆ ತೆಂಗು ರೈತ ಉತ್ಪಾದಕರ ಕಂಪೆನಿ ನಿಯಮಿತ ಇದರ ಅಧ್ಯಕ್ಷ ಕುಸುಮಾಧರ್ ಎಸ್.ಕೆ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
2021ರಲ್ಲಿ ಆರಂಭಗೊಂಡಿರುವ ಈ ಸಂಸ್ಥೆ ತೆಂಗು ಬೆಳೆಗಳಿಗೆ ಹೆಚ್ಚು ಆದಾಯ ಕೊಡುವ ಉದ್ದೇಶವಿಟ್ಟುಕೊಂಡಿದೆ. ಈಗಾಗಲೇ ಸಂಸ್ಥೆಯಲ್ಲಿ 14,403 ಮಂದಿ ಸದಸ್ಯರಿದ್ದಾರೆ. ಈ ನಿಟ್ಟಿನಲ್ಲಿ ಬೆಳ್ತಂಗಡಿ, ಕಡಬ, ಪಂಜ ಸಹಿತ ಒಟ್ಟು 6 ಕಡೆ ಸಂಸ್ಥೆ ಕಾರ್ಯನಿರ್ವಹಿಸುತ್ತಿದ್ದು, ಇದೀಗ ಪುತ್ತೂರು ಕಲ್ಲಾರೆ ಪವಾಜ್ ಕಾಂಪ್ಲೆಕ್ಸ್ನಲ್ಲಿ ಕಾರ್ಪೊರೇಟ್ ಕಚೇರಿಯ ಉದ್ಘಾಟನೆಯನ್ನು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ಅವರು ಉದ್ಘಾಟಿಸಲಿದ್ದಾರೆ.ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಂಗಳೂರು ಶಾಖಾ ಮಠದ ಶ್ರೀ ಡಾ. ಧರ್ಮಪಾಲನಾಥ ಸ್ವಾಮೀಜಿಯವರು ಆಶೀರ್ವಚನ ನೀಡಲಿದ್ದಾರೆ.
ಜು.2ರಂದು ಪುತ್ತೂರು ಪುರಭವನದಲ್ಲಿ ಬೆಳಿಗ್ಗೆ ಪಂಚಕಲ್ಪ ಯೋಜನೆಗಳ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಕಾಸರಗೋಡು ಸಿಪಿಸಿಆರ್ಐಯ ನಿರ್ದೇಶಕ ಡಾ.ಕೆ.ಬಾಲಚಂದ್ರ ಹೆಬ್ಬಾರ್ ಅವರು ದೀಪ ಪ್ರಜ್ವಲಿಸಲಿದ್ದಾರೆ. ಅಬಕಾರಿ ಉಪ ಆಯುಕ್ತೆ ಬಿಂದುಶ್ರೀ, ಕೃಷಿ ಇಲಾಖೆ ಮಂಗಳೂರು ಇದರ ಜಂಟಿ ನಿರ್ದೇಶಕ ಕೆಂಪೇಗೌಡ ಹೆಚ್, ಮಂಗಳೂರು ಕೃಷಿ ವಿಚಾರಕೇಂದ್ರದ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರಾಗಿರುವ ಡಾ.ರಮೇಶ್, ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಬಿ.ಶ್ರೀಧರ ಶೆಟ್ಟಿ ಬೈಲುಗುತ್ತು, ಕೃಷಿಕರು ಮತ್ತು ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ವ್ಯವಸ್ಥಾಪಕ ನಿರ್ದೇಶಕ ಡಾ. ಯು.ಪಿ.ಶಿವಾನಂದ,ಸ್ವಯಂ ಸೇವಾ ಸಂಸ್ಥೆಯ ನಿರ್ದೇಶಕ ರಾಜೇಶ್ ಬೆಜ್ಜಂಗಳ, ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ಪ್ರಧಾನ ಕಾರ್ಯದರ್ಶಿ ಹೊನ್ನಪ್ಪ ಗೌಡ ಸವಣೂರು, ಕರ್ನಾಟಕ ರಾಜ್ಯ ರೈತಸಂಘ ಹಸಿರು ಸೇನೆ ದ.ಕ.ಜಿಲ್ಲಾ ಸಂಚಾಲಕ ಮತ್ತು ದ.ಕ.ಜಿಲ್ಲಾ ಸಂಘಟನೆಗಳ ಒಕ್ಕೂಟದ ಮುಖ್ಯಸ್ಥ ರೂಪೇಶ್ ರೈ ಅಳಿಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.
ಪಂಚಕಲ್ಪ ಯೋಜನೆಗಳು:
ದಕ್ಷಿಣ ಕನ್ನಡ ಜಿಲ್ಲೆ ತೆಂಗು ರೈತ ಉತ್ಪಾದಕರ ಕಂಪೆನಿ ನಿಯಮಿತ ಇದರ ಮುಖ್ಯಕಾರ್ಯನಿರ್ವಹಣಾಧಿಕಾರಿ ಚೇತನ್ ಎ ಅವರು ಸಂಸ್ಥೆಯಿಂದ ನೀಡುವ ಪಂಚಕಲ್ಪ ಯೋಜನೆಯ ಮಾಹಿತಿ ನೀಡಿದರು. ರೈತರಿಗೆ ವಿವಿಧ ರೀತಿಯಲ್ಲಿ ಆದಾಯ ನೀಡುವ ಯೋಜನೆಗಳನ್ನು ಪಂಚಕಲ್ಪ ಯೋಜನೆಯಡಿಯಲ್ಲಿ ನೀಡಲಾಗುತ್ತಿದೆ. ಕಲ್ಪವೃಕ್ಷ ಯೋಜನೆಯಲ್ಲಿ ತೆಂಗು ಉದ್ಯಮಕ್ಕೆ ದೃಢವಾದ ಮೌಲ್ಯ ಸರಪಳಿಯನ್ನು ರಚಿಸುವುದರ ಮೇಲೆ ಕೇಂದ್ರಿಕರಿಸುತ್ತದೆ. ಕಲ್ಪರಸ ಯೋಜನೆಯಲ್ಲಿ ಆರೋಗ್ಯಕರ ಪಾನೀಯ ಮತ್ತು ರೈತರಿಗೆ ಅಧಿಕ ಆದಾಯ ಒದಗಿಸುವ ಯೋಜನೆ. 8 ಮರಗಳಿಂದ ರೂ. 2ಲಕ್ಷಕ್ಕೂ ಹೆಚ್ಚು ಆದಾಯ ಪಡೆಯಬಹುದು. ಈಗಾಗಲೇ ಸುಳ್ಯದ ದೊಡ್ಡತೋಟದಲ್ಲಿ ಕಲ್ಪರಸದ ಘಟಕ ನಿರ್ಮಾಣ ಮಾಡಲಾಗುತ್ತಿದೆ. ಕಲ್ಪಸಮೃದ್ಧಿ ಯೋಜನೆಯಲ್ಲಿ ಠೇವಣ ಮೇಲೆ ಹೆಚ್ಚಿನ ಬಡ್ಡಿದರ ವಿಧಿಸಲಾಗುತ್ತದೆ ಮತ್ತು ರೈತರಿಗೆ ಕೃಷಿ ಆಧಾರಿತ ಸಾಲಗಳನ್ನು ನೀಡಲಾಗುತ್ತದೆ. ಕಲ್ಪಸಂಪರ್ಕ ಯೋಜನೆಯಲ್ಲಿ ಸಂಸ್ಥೆಯ ಸಂಪೂರ್ಣ ಮಾಹಿತಿಯುಳ್ಳ ವೆಬ್ಸೈಟ್, ಸದಸ್ಯರ ಸವಾಲುಗಳಿಗೆ ಮತ್ತು ನಿರಂತರ ಸಂಪರ್ಕಕ್ಕೆ ಶುಲ್ಕ ರಹಿತ ಸೇವೆ ಆರಂಭಿಸುವುದು. ಮೊಬೈಲ್ ಸಂಖ್ಯೆ 18002030129 ಶುಲ್ಕ ರಹಿತ ಕರೆ ಸೇವೆ ಪಡೆಯಬಹುದು. ಇದು ಮೊದಲ ಬಾರಿಗೆ ತುಳು ಭಾಷೆಯಲ್ಲಿ ಇರುತ್ತದೆ. ಕಲ್ಪಸೇವೆ ಯೋಜನೆಯಲ್ಲಿ ಮಾರುಕಟ್ಟೆಗಿಂತ ಉತ್ತಮ ಬೆಲೆಯಲ್ಲಿ ತೆಂಗಿನ ಕಾಯಿಗಳನ್ನು ಖರೀದಿಸುವುದಲ್ಲದೆ ತೆಂಗಿನ ಕೊಯ್ಲಿಗಾಗಿ ನಮ್ಮ ಸಂಸ್ಥೆಯಿಂದ ತರಬೇತಿ ಪಡೆದಿರುವವರನ್ನು ಒದಗಿಸಿಕೊಡಲಾಗುವುದು ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ನಿರ್ದೇಶಕರಾದ ವರ್ಧಮಾನ್ ಎನ್, ಲತಾ ಪಿ ಮತ್ತು ಡಾ. ರಾಜೇಶ್ ಬೆಜ್ಜಂಗಳ ಉಪಸ್ಥಿತರಿದ್ದರು.