ನೆಲ್ಯಾಡಿ: ಸಹಕಾರಿ ಕ್ಷೇತ್ರದಲ್ಲಿನ ಸಾಧನೆಗಾಗಿ ನೆಲ್ಯಾಡಿ ಕಾಮಧೇನು ಸಹಕಾರ ಸಂಘದ ಸ್ಥಾಪಕಾಧ್ಯಕ್ಷೆ ಉಷಾ ಅಂಚನ್ ಅವರನ್ನು ಪುತ್ತೂರು ಬಿಲ್ಲವ ಮಹಿಳಾ ವೇದಿಕೆ ಆಶ್ರಯದಲ್ಲಿ ಪುತ್ತೂರಿನಲ್ಲಿ ನಡೆದ ಮಹಿಳಾ ಸಂಭ್ರಮ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಉಷಾ ಅಂಚನ್‌ರವರು ರಾಜಕೀಯ, ಸಾಮಾಜಿಕ, ಶೈಕ್ಷಣಿಕ ಹಾಗೂ ಸಹಕಾರಿ ಕ್ಷೇತ್ರದಲ್ಲಿ ಮಾಡಿದ ಸಾಧನೆ ಗುರುತಿಸಿ ಮಹಿಳಾ ಸಾಧಕಿ ಎಂಬ ಬಿರುದು ನೀಡಿ ಸನ್ಮಾನಿಸಲಾಯಿತು. ಉಷಾ ಅಂಚನ್‌ರವರು ಮೂರ್ತೆದಾರರ ಮಹಾಮಂಡಲದ ನಿರ್ದೇಶಕರಾಗಿ, ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾಗಿ, ಪ್ರಿಯದರ್ಶಿನಿ ಮಹಿಳಾ ಸಹಕಾರಿ ಸಂಘದ ನಿರ್ದೇಶಕಿಯಾಗಿ, ಕೊಣಾಲು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬ್ರಹ್ಮಶ್ರೀ ವಿವಿಧೋದ್ದೇಶ ಸಹಕಾರಿ ಸಂಘದ ನಿರ್ದೇಶಕರಾಗಿ, ಉಪ್ಪಿನಂಗಡಿ ಮೂರ್ತೆದಾರರ ಸೇವಾ ಸಹಕಾರಿ ಸಂಘದ ನಿರ್ದೇಶಕಿಯಾಗಿ, ಅಧ್ಯಕ್ಷೆಯಾಗಿ ಸೇವೆ ಸಲ್ಲಿಸಿದ್ದರು. ಬಿಲ್ಲವ ಸಂಘದ ಮಹಿಳಾ ವೇದಿಕೆಯ ಅಧ್ಯಕ್ಷೆಯಾಗಿ ಆಟಿಕೂಟ ಎಂಬ ಕಾರ್ಯಕ್ರಮ ಆಯೋಜನೆ, ಬಿಲ್ಲವ ಮಹಿಳಾ ವೇದಿಕೆ ಸಂಚಾಲಕಿಯಾಗಿ, ಉಪಾಧ್ಯಕ್ಷೆಯಾಗಿ, ಗ್ರಾಮ ಸಮಿತಿ ಅಧ್ಯಕ್ಷೆಯಾಗಿಯೂ ಸೇವೆ ಸಲ್ಲಿಸಿದ್ದರು. ನೆಲ್ಯಾಡಿಯಲ್ಲಿ ಮಂಗಳೂರು ವಿವಿ ಘಟಕ ಕಾಲೇಜು ಆರಂಭಕ್ಕೆ ಕಾರಣಕರ್ತರೂ ಆಗಿದ್ದಾರೆ. ಬಡ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ, ಸಮವಸ್ತ್ರ ವಿತರಣೆ ಸೇರಿದಂತೆ ವಿವಿಧ ಸಾಮಾಜಿಕ ಸೇವೆ ಪರಿಗಣಿಸಿ ಇವರನ್ನು ಗೌರವಿಸಲಾಗಿದೆ. ಬಿಲ್ಲವ ಮಹಿಳಾ ಸಂಘದ ಅಧ್ಯಕ್ಷೆ ಚಂದ್ರಕಲಾ ಮುಕ್ವೆ ಅಧ್ಯಕ್ಷತೆ ವಹಿಸಿದ್ದರು. ಪುತ್ತೂರು ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ ಉದ್ಘಾಟಿಸಿದರು. ಮಹಿಳಾ ವೇದಿಕೆ ಸಂಚಾಲಕಿ ವಿಶಾಲಾಕ್ಷಿ ಬನ್ನೂರು, ರೇಣುಕಾ ಕಣಿಯೂರು, ಬಿಲ್ಲವ ಸಂಘದ ಮಾಜಿ ಅಧ್ಯಕ್ಷರು, ಪದಾಧಿಕಾರಿಗಳು, ಗ್ರಾಮ ಸಮಿತಿಯವರು, ಬಿಲ್ಲವ ಮುಖಂಡರು ಉಪಸ್ಥಿತರಿದ್ದರು.