ಶಿರಾಡಿ ಗ್ರಾ.ಪಂ.ಪಿಡಿಒ ಆಗಿ ಯಶವಂತ ಬೆಳ್ಚಡಾ

0

ನೆಲ್ಯಾಡಿ: ಶಿರಾಡಿ ಗ್ರಾಮ ಪಂಚಾಯತ್‌ಗೆ ಪಿಡಿಒ ಆಗಿ ಯಶವಂತ ಬೆಳ್ಚಡಾ ಎಂಬವರು ಆಗಮಿಸಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಇವರು ಉಳ್ಳಾಲದ ಹರೇಕಳ ಗ್ರಾಮ ಪಂಚಾಯತ್‌ನಲ್ಲಿ ಪಿಡಿಒ ಆಗಿದ್ದರು.


ಮೂತಲ: ಮಂಗಳೂರು ನಿವಾಸಿ, ನಿವೃತ್ತ ಸೈನಿಕರಾಗಿರುವ ಯಶವಂತ ಬೆಳ್ಚಡಾ ಅವರು 2010ರಲ್ಲಿ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್‌ಗೆ ಪಿಡಿಒ ಆಗಿ ನೇಮಕಗೊಂಡಿದ್ದರು. ಇಲ್ಲಿ 2 ವರ್ಷ ಸೇವೆ ಸಲ್ಲಿಸಿ ಮಂಗಳೂರಿನ ಮುಚ್ಚೂರು ಗ್ರಾಮ ಪಂಚಾಯತ್‌ಗೆ ವರ್ಗಾವಣೆಗೊಂಡಿದ್ದರು. ಅಲ್ಲಿ 6 ವರ್ಷ ಸೇವೆಯ ಬಳಿಕ ಮೂಲ್ಕಿಯ ಬಳಕುಂಜೆ, ಕಂದಾವರ ಪಂಚಾಯತ್‌ನಲ್ಲಿ ತಲಾ 2 ವರ್ಷ ಸೇವೆ ಸಲ್ಲಿಸಿದ್ದರು. ಅಲ್ಲಿಂದ ಉಳ್ಳಾಲ ಹರೇಕಳ ಗ್ರಾಮ ಪಂಚಾಯತ್‌ಗೆ ವರ್ಗಾವಣೆಗೊಂಡು ಕಳೆದ 1 ವರ್ಷದಿಂದ ಸೇವೆ ಸಲ್ಲಿಸುತ್ತಿದ್ದರು. ಶಿರಾಡಿ ಗ್ರಾ.ಪಂ.ಪಿಡಿಒ ವೆಂಕಟೇಶ್‌ರವರಿಗೆ ವರ್ಗಾವಣೆಯಾದ ಹಿನ್ನೆಲೆಯಲ್ಲಿ ಕೌಕ್ರಾಡಿ ಗ್ರಾ.ಪಂ.ಪಿಡಿಒ ಮಹೇಶ್ ಜಿ.ಎನ್.ಅವರು ಪ್ರಭಾರ ನೆಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇದೀಗ ಶಿರಾಡಿ ಗ್ರಾ.ಪಂ.ಗೆ ಯಶವಂತ ಬೆಳ್ಚಡಾ ಅವರನ್ನು ಖಾಯಂ ಪಿಡಿಒ ಆಗಿ ನೇಮಕಗೊಳಿಸಲಾಗಿದ್ದು ಅವರು ಕರ್ತವ್ಯಕ್ಕೆ ಹಾಜರಾಗಿದ್ದಾರೆ.

ಕೌಕ್ರಾಡಿ ಹೆಚ್ಚುವರಿ ಪ್ರಭಾರ:
ಶಿರಾಡಿ ಗ್ರಾ.ಪಂ.ಪಿಡಿಒ ಯಶವಂತ ಬೆಳ್ಚಡಾ ಅವರನ್ನು ಕೌಕ್ರಾಡಿ ಗ್ರಾಮ ಪಂಚಾಯತ್‌ನ ಪ್ರಭಾರ ಪಿಡಿಒ ಆಗಿ ನೇಮಕಗೊಳಿಸಿ ಕಡಬ ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿಯವರು ಆದೇಶಿಸಿದ್ದಾರೆ. ಕೌಕ್ರಾಡಿ ಗ್ರಾ.ಪಂ.ಪಿಡಿಒ ಮಹೇಶ್ ಜಿ.ಎನ್.ಅವರ ವಿರುದ್ಧ ಮಂಗಳೂರು ಲೋಕಾಯುಕ್ತ ಠಾಣೆಯಲ್ಲಿ ಪ್ರಕರಣ ಸಂಖ್ಯೆ 03/2023 ಕಲಂ 7(3) ಭ್ರಷ್ಟಾಚಾರ ನಿರ್ಬಂಧಕ ಕಾಯ್ದೆ 1988ರಂತೆ ಪ್ರಕರಣ ದಾಖಲಿಸಿ ದಸ್ತಗಿರಿ ಮಾಡಿರುವುದರಿಂದ, ಸದ್ರಿಯವರು ಕರ್ತವ್ಯಕ್ಕೆ ಹಾಜರಾಗುವ ತನಕ ಕೌಕ್ರಾಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ಪ್ರಭಾರ ನೆಲೆಯಲ್ಲಿ ಕರ್ತವ್ಯ ನಿರ್ವಹಿಸುವಂತೆ ತಾ.ಪಂ.ಇಒರವರು ನೀಡಿರುವ ಆದೇಶದಲ್ಲಿ ಸೂಚಿಸಲಾಗಿದೆ.

LEAVE A REPLY

Please enter your comment!
Please enter your name here