ಪುತ್ತೂರು: ವಿಟ್ಲದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ದಕ್ಷಿಣ ಕನ್ನಡ ಜಿಲ್ಲೆಯ ತೆಂಗು ರೈತ ಉತ್ಪಾದಕರ ಕಂಪೆನಿ ನಿಯಮಿತ ಇದರ ಕಾರ್ಪೊರೇಟ್ ಕಚೇರಿಯು ಪುತ್ತೂರು ಕಲ್ಲಾರೆ ಪವಾಜ್ ಕಾಂಪ್ಲೆಕ್ಸ್ನಲ್ಲಿ ಜು.1ರಂದು ಉದ್ಘಾಟನೆಗೊಂಡ ಹಿನ್ನೆಲೆಯಲ್ಲಿ ಜು.2ರಂದು ಸಂಸ್ಥೆಯಿಂದ ಪಂಚಕಲ್ಪ ಯೋಜನೆಗಳ ಉದ್ಘಾಟನಾ ಕಾರ್ಯಕ್ರಮ ಪುತ್ತೂರು ಪುರಭವನದಲ್ಲಿ ನಡೆಯಿತು.
ಕಾಸರಗೋಡು ಸಿಪಿಸಿಆರ್ಐಯ ನಿರ್ದೇಶಕ ಡಾ.ಕೆ.ಬಾಲಚಂದ್ರ ಹೆಬ್ಬಾರ್ ದೀಪ ಪ್ರಜ್ವಲಿಸಿ, ತೆಂಗಿನ ಸಸಿಗೆ ನೀರುಹಾಕಿ,ಕಲ್ಪರಸ ಶುದ್ದ ಪಾನಿಯ ಯೋಜನೆಯನ್ನು ಬಿಡುಗಡೆಗೊಳಿಸಿದರು.
ಕೃಷಿ ಇಲಾಖೆ ಮಂಗಳೂರು ಇದರ ಜಂಟಿ ನಿರ್ದೇಶಕ ಕೆಂಪೇಗೌಡ ಹೆಚ್ ಕಲ್ಪವೃಕ್ಷ ಯೋಜನೆಯನ್ನು ಬಿಡುಗಡೆಗೊಳಿಸಿದರು. ಮಂಗಳೂರು ಕೃಷಿ ವಿಚಾರಕೇಂದ್ರದ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥ ಡಾ.ರಮೇಶ್ ಕಲ್ಪಸೇವಾ ಯೋಜನೆಯನ್ನು ಬಿಡುಗಡೆಗೊಳಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಬಿ.ಶ್ರೀಧರ ಶೆಟ್ಟಿ ಬೈಲುಗುತ್ತು ಅವರು ಕಲ್ಪಸಮೃದ್ಧಿ ಯೋಜನೆಯನ್ನು ಬಿಡುಗಡೆಗೊಳಿಸಿದರು. ಗಿರಿಧರ್ ಅಂಬೆಕಲ್ಲು ಅವರು ಪ್ರಥಮ ಠೇವಣಿದಾರರಾದರು. ಕೃಷಿಕರು ಮತ್ತು ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ವ್ಯವಸ್ಥಾಪಕ ನಿರ್ದೇಶಕ ಡಾ. ಯು.ಪಿ.ಶಿವಾನಂದ ಅವರು ಕಲ್ಪ ಸಂಪರ್ಕ ವೆಬ್ ಸೈಟ್ ಗೆ ಚಾಲನೆ ನೀಡಿದರು.
ಕರ್ನಾಟಕ ರಾಜ್ಯ ರೈತಸಂಘ ಹಸಿರು ಸೇನೆ ದ.ಕ.ಜಿಲ್ಲಾ ಸಂಚಾಲಕ ಮತ್ತು ದ.ಕ.ಜಿಲ್ಲಾ ಸಂಘಟನೆಗಳ ಒಕ್ಕೂಟದ ಮುಖ್ಯಸ್ಥ ರೂಪೇಶ್ ರೈ ಅಳಿಮಾರ್ ಅವರು ಪಂಚಕಲ್ಪ ಸಂಪರ್ಕ ಟೊಲ್ ಫ್ರೀ ಮಾಹಿತಿ ಕೇಂದ್ರವನ್ನು ಉದ್ಘಾಟಿಸಿದರು. ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ಪ್ರಧಾನ ಕಾರ್ಯದರ್ಶಿ ಹೊನ್ನಪ್ಪ ಗೌಡ ಸವಣೂರು ಅವರು ತೆಂಗಿನ ಕಾಯಿ ಖರೀದಿ ಯೋಜನೆಯನ್ನು ಉದ್ಘಾಟಿಸಿದರು.
ಕಡಮಜಲು ಸುಭಾಶ್ ರೈ ಅವರು ಪ್ರಥಮ ಗ್ರಾಹಕರಾಗಿ ತೆಂಗಿನ ಕಾಯಿ ನೀಡಿ ಚೆಕ್ ಪಡೆದರು. ದಕ್ಷಿಣ ಕನ್ನಡ ಜಿಲ್ಲೆ ತೆಂಗು ರೈತ ಉತ್ಪಾದಕರ ಕಂಪೆನಿ ನಿಯಮಿತ ಇದರ ಅಧ್ಯಕ್ಷ ಕುಸುಮಾಧರ್ ಎಸ್.ಕೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ಸಂಸ್ಥೆಯ ಮುಖ್ಯಕಾರ್ಯನಿರ್ವಹಣಾಧಿಕಾರಿ ಚೇತನ್ ಎ ಪ್ರಾಸ್ತಾವಿಕವಾಗಿ ಮಾತನಾಡಿದರು. ಪದ್ಮರಾಜ್ ಡಿ.ಸಿ ಚಾರ್ವಾಕ ಪ್ರಾರ್ಥಿಸಿ, ಡಾ| ರಾಜೇಶ್ ಬೆಜ್ಜಂಗಳ ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕ ತಿಮ್ಮಪ್ಪ ವಂದಿಸಿದರು. ಸಂಸ್ಥೆಯ ನಿರ್ದೇಶಕರಾದ ವರ್ಧಮಾನ್ ಜೈನ್, ಹರಿಪ್ರಸಾದ್, ಗಿರಿಧರ್, ಎನ್, ಲತಾ ಪಿ, ತಿಮ್ಮಪ್ಪ, ಲಕ್ಷ್ಮಣ ನಾಯ್ಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.