ಎಲ್ಲಿ ಹೋದರೂ ಕನ್ನಡಾಭಿಮಾನ ಮರೆಯದಿರಿ: ಟಿ.ನಾರಾಯಣ ಭಟ್
ರಾಮಕುಂಜ: 2022-23ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯ ಪ್ರಥಮ ಮತ್ತು ದ್ವಿತೀಯ ಭಾಷೆ ಕನ್ನಡದಲ್ಲಿ ಪೂರ್ಣ ಅಂಕಗಳಿಸಿದ ಹಾಗೂ ಅತ್ಯುತ್ತಮ ಸಾಧನೆಗೈದ ಕಡಬ ತಾಲೂಕಿನ ವಿದ್ಯಾರ್ಥಿಗಳಿಗೆ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಡಬ ತಾಲೂಕು ಘಟಕದ ವತಿಯಿಂದ ಅಭಿನಂದನಾ ಕಾರ್ಯಕ್ರಮ ಜು.1ರಂದು ರಾಮಕುಂಜ ಶ್ರೀ ರಾಮಕುಂಜೇಶ್ವರ ವಸತಿ ಶಾಲಾ ಸಭಾಂಗಣದಲ್ಲಿ ನಡೆಯಿತು.
ಸಾಹಿತಿಗಳು, ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯಶಿಕ್ಷಕರೂ ಆದ ಟಿ.ನಾರಾಯಣ ಭಟ್‌ರವರು ಸನ್ಮಾನಿಸಿ ಮಾತನಾಡಿ, ಇದೊಂದು ವಿದ್ಯಾರ್ಥಿಗಳಲ್ಲಿನ ಶ್ರೇಷ್ಠ ಸಾಧನೆ ಗುರುತಿಸಿ ಅವರಲ್ಲಿ ಆತ್ಮವಿಶ್ವಾಸ ತುಂಬಿಸುವಂತಹ ಕಾರ್ಯಕ್ರಮವಾಗಿದೆ. ವಾರ್ಷಿಕ ಪರೀಕ್ಷೆಯಲ್ಲಿ ಪೂರ್ಣಾಂಕ ಪಡೆದುಕೊಂಡಿರುವುದು ವಿದ್ಯಾರ್ಥಿಗಳು ಮಾಡಿರುವ ದೊಡ್ಡ ಸಾಧನೆಯಾಗಿದೆ. ಇದು ಅವರಿಗೆ ಮುಂದಿನ ವಿದ್ಯಾಭ್ಯಾಸಕ್ಕೊಂದು ಮೆಟ್ಟಿಲು ಸಹ ಆಗಲಿದೆ. ವಿದ್ಯಾರ್ಥಿಗಳು ಮುಂದೆ ರಾಜ್ಯದ ಯಾವುದೇ ಮೂಲೆಯಲ್ಲಿ ಇಂಜಿನಿಯರ್, ಡಾಕ್ಟರ್, ಉದ್ಯಮಿ, ಕೃಷಿಕನೇ ಆದರೂ ಸಾಹಿತ್ಯದ ಮೇಲಿನ ಆಸಕ್ತಿ ಬೆಳೆಸಿಕೊಂಡಲ್ಲಿ ಜನರ ಪ್ರೀತಿ, ವಿಶ್ವಾಸಗಳಿಸಲು ಸಾಧ್ಯವಿದೆ. ಆದ್ದರಿಂದ ಎಲ್ಲಿಯೇ ಹೋದರೂ ಕನ್ನಡದ ಮೇಲಿನ ಅಭಿಮಾನ ಮರೆಯದಿರಿ ಎಂದರು. ಪುಸ್ತಕ ಓದುವ ಮನೆಯಲ್ಲಿ ಜಗಳವಿಲ್ಲ. ಪುಸ್ತಕ ಓದುವುದರಿಂದ ಮಾನಸಿಕ ಒತ್ತಡವೂ ಕಡಿಮೆಯಾಗಲಿದೆ. ಆದ್ದರಿಂದ ಪ್ರತಿಯೊಬ್ಬರ ಮನೆಯಲ್ಲೂ ಪುಸ್ತಕ ಭಂಡಾರವಿರಬೇಕು. ದಿನವೂ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕೆಂದು ಟಿ.ನಾರಾಯಣ ಭಟ್ ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತು ಕಡಬ ತಾಲೂಕು ಘಟಕದ ಅಧ್ಯಕ್ಷ ಕೆ.ಸೇಸಪ್ಪ ರೈಯವರು ಮಾತನಾಡಿ, ಸಾಹಿತ್ಯ ಪರಿಷತ್ ವತಿಯಿಂದ ಮಕ್ಕಳ ಸಾಹಿತ್ಯಕ್ಕೆ ಒತ್ತು ನೀಡಲಾಗುತ್ತಿದೆ. ಈಗಾಗಲೇ 75 ಕಡೆಗಳಲ್ಲಿ ಮಕ್ಕಳಿಗಾಗಿ ಕವಿ, ಕಥೆ ರಚನಾ ಕಮ್ಮಟ ನಡೆಸಲಾಗಿದೆ. ಇದನ್ನು ಪುಸ್ತಕ ರೂಪಕ್ಕೆ ತಂದು ಬಿಡುಗಡೆಗೊಳಿಸಲಾಗುವುದು. ಮಕ್ಕಳಲ್ಲಿ ಸಾಹಿತ್ಯಾಸಕ್ತಿ ಮೂಡಿಸಲು ಇನ್ನಷ್ಟೂ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಹೇಳಿದರು. ರಾಜ್ಯದ ಬೇರೆ ಬೇರೆ ಶಾಲೆಗಳಲ್ಲಿ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯ ತುಳು ವಿಷಯದಲ್ಲಿ ಪೂರ್ಣಾಂಕ ಪಡೆದುಕೊಂಡ ವಿದ್ಯಾರ್ಥಿಗಳನ್ನು ಗುರುತಿಸಲಾಗಿದ್ದು ಶೀಘ್ರದಲ್ಲಿ ಅವರನ್ನೂ ಅಭಿನಂದಿಸಲಾಗುವುದು ಎಂದು ಕೆ.ಸೇಸಪ್ಪ ರೈ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತು ಕಡಬ ತಾಲೂಕು ಘಟಕದ ಮಾಜಿ ಅಧ್ಯಕ್ಷ ಜನಾರ್ದನ ಗೌಡ ಪಣೆಮಜಲು, ಕೋಶಾಧಿಕಾರಿ ಬಾಲಚಂದ್ರ ಮುಚ್ಚಿಂತಾಯ, ಕಡಬ ಹೋಬಳಿ ಅಧ್ಯಕ್ಷ ಪದ್ಮಪ್ಪ ಗೌಡ ರಾಮಕುಂಜ, ಕಡಬ ತಾಲೂಕು ಘಟಕದ ಸದಸ್ಯರಾದ ಎ.ಎನ್.ಕೊಳಂಬೆ, ಮಾಯಿಲಪ್ಪ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕನ್ನಡ ಸಾಹಿತ್ಯ ಪರಿಷತ್ತು ಕಡಬ ತಾಲೂಕು ಘಟಕದ ಸದಸ್ಯ ವೆಂಕಟ್ರಮಣ ಆರ್.ಸ್ವಾಗತಿಸಿ, ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ಪ್ರೇಮಾ ವಂದಿಸಿದರು. ಶಿಕ್ಷಕ ಕಿಶೋರ್‌ಕುಮಾರ್ ಕಾರ್ಯಕ್ರಮ ನಿರೂಪಿಸಿದರು.
65 ವಿದ್ಯಾರ್ಥಿಗಳಿಗೆ ಗೌರವಾರ್ಪಣೆ:
ಕಡಬ ತಾಲೂಕಿನ ವಿವಿಧ ಶಾಲೆಗಳ ಸುಮಾರು 65 ವಿದ್ಯಾರ್ಥಿಗಳಿಗೆ ಪುಸ್ತಕ, ಪ್ರಮಾಣಪತ್ರ, ಕನ್ನಡ ಶಾಲು, ಸ್ಮರಣಿಕೆ ನೀಡಿ ಗೌರವಿಸಲಾಯಿತು. ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ 625ರಲ್ಲಿ 624 ಅಂಕ ಪಡೆದುಕೊಂಡ ಕಾಣಿಯೂರು ಪ್ರಗತಿ ಆಂಗ್ಲಮಾಧ್ಯಮ ಪ್ರೌಢಶಾಲೆಯ ಉತ್ತಮ್, 623 ಅಂಕ ಪಡೆದುಕೊಂಡ ಸುಬ್ರಹ್ಮಣ್ಯ ಕುಮಾರಸ್ವಾಮಿ ವಿದ್ಯಾಲಯದ ಮಹತಿ, 622 ಅಂಕ ಪಡೆದುಕೊಂಡ ಸುಬ್ರಹ್ಮಣ್ಯ ಕುಮಾರಸ್ವಾಮಿ ವಿದ್ಯಾಲಯದ ಅಭಿಜ್ಞಾರನ್ನು ಗೌರವಿಸಲಾಯಿತು. ಎಸ್‌ಎಸ್‌ಎಲ್‌ಸಿ ಕನ್ನಡ ಭಾಷೆಯಲ್ಲಿ ಪೂರ್ಣಾಂಕ ಪಡೆದುಕೊಂಡ 62 ವಿದ್ಯಾರ್ಥಿಗಳಿಗೆ ಗೌರವಾರ್ಪಣೆ ಮಾಡಲಾಯಿತು. ಕಸಾಪ ಕಡಬ ತಾಲೂಕು ಘಟಕದ ಕೋಶಾಧಿಕಾರಿ ಬಾಲಚಂದ್ರ ಮುಚ್ಚಿಂತಾಯರವರು ವಿದ್ಯಾರ್ಥಿಗಳ ಹೆಸರು ವಾಚಿಸಿದರು.