ನೆಲ್ಯಾಡಿ: ನಮ್ಮ ನಾಡಿನ ಸಂಸ್ಕೃತಿಯ ಪ್ರತೀಕವಾಗಿರುವ ಧೀಮಂತ ಕಲೆ ಯಕ್ಷಗಾನವನ್ನು ಉಳಿಸಿ ಬೆಳೆಸುವ ದೃಷ್ಟಿಯಿಂದ ಗೋಳಿತ್ತಟ್ಟು ಶಾಂತಿನಗರ ಸರ್ಕಾರಿ ಶಾಲೆಯ ಪಾತ್ರ ಅನನ್ಯವಾದದ್ದು ಎಂದು ಹಿರಿಯ ಚಿಂತಕ, ಸಾಮಾಜಿಕ ಕಾರ್ಯಕರ್ತ ಸಾಂತಪ್ಪ ಗೌಡ ಮೇಲೂರು ಹೇಳಿದರು.
ಅವರು ಗೋಳಿತ್ತಟ್ಟು ಶಾಂತಿನಗರ ಸರಕಾರಿ ಹಿ.ಪ್ರಾ.ಶಾಲೆಯ ವಿದ್ಯಾರ್ಥಿಗಳಿಗಾಗಿ ಆರಂಭಿಸಿರುವ ಯಕ್ಷಗಾನ ತರಬೇತಿ ತರಗತಿಯನ್ನು ಉದ್ಘಾಟಿಸಿ ಮಾತನಾಡಿದರು. ಯಕ್ಷಗಾನವು ತಲೆಯಿಂದ ಕಾಲಿನವರೆಗೆ ಸಕಲ ಅಂಗಾಂಗಳನ್ನು ಸುಸ್ಥಿತಿಯಲ್ಲಿಡುವ ಹಾಗೂ ಮಾನಸಿಕವಾಗಿ ಮನುಷ್ಯನನ್ನು ಪರಿಪೂರ್ಣಗೊಳಿಸುವ ಅದ್ಬುತ ಕಲೆ ಎಂದು ಸಾಂತಪ್ಪ ಗೌಡ ಹೇಳಿದರು.
ಮುಖ್ಯ ಶಿಕ್ಷಕ ಪ್ರದೀಪ್ ಬಾಕಿಲ ಅವರು ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿ, ಶಾಲೆಯಲ್ಲಿ ಯಕ್ಷಗಾನ ತರಗತಿ ಪ್ರಾರಂಭಿಸಿರುವ ಉದ್ದೇಶ ತಿಳಿಸಿದರು. ಸಾವಿರಾರು ರೂ.ನೀಡಿ ದೂರದೂರಿಗೆ ಹೋಗಿ ಶಿಕ್ಷಣ ಪಡೆಯುವ ಬದಲು, ಭರತನಾಟ್ಯ, ಯಕ್ಷಗಾನ, ಇಂಗ್ಲಿಷ್ ಸಂಹವನ ಕಲೆ, ಸಭಾ ನಿರ್ವಹಣೆ ಕುರಿತು ಜ್ಞಾನವಿರುವ ಪ್ರಬುದ್ಧ ಶಿಕ್ಷಕರಿಂದ ಇವೆಲ್ಲವನ್ನು ಇಲ್ಲಿ ಉಚಿತವಾಗಿ ಪಡೆಯಬಹುದು ಎಂದರು.
ಶಾಲಾ ಸ್ಥಾಪಕರಲ್ಲಿ ಓರ್ವರಾದ ವೆಂಕಪ್ಪ ಗೌಡ ಪೆರ್ಲ ಶುಭಹಾರೈಸಿದರು. ಇನ್ನೋರ್ವ ಅತಿಥಿ ಸಿಆರ್‌ಪಿ ಮಂಜುನಾಥ್‌ರವರು ಮಾತನಾಡಿ, ಶಾಂತಿನಗರ ಶಾಲೆಯು ಅತ್ಯುತ್ತಮ ಶಿಕ್ಷಣ ನೀಡುವ ಮೂಲಕ ಶಿಕ್ಷಣ ಇಲಾಖೆಯು ಹೆಮ್ಮೆ ಪಡುವ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದರು. ಯಕ್ಷಗಾನ ಗುರು ಮೋಹನ ಶರವೂರು ಮಾತನಾಡಿ, ಯಾವುದೇ ಫಲಾಪೇಕ್ಷೆಯಿಲ್ಲದೆ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಅದ್ಬುತ ರೀತಿಯಲ್ಲಿ ತರಬೇತಿ ನೀಡಲಾಗುವುದು ಎಂದು ಹೇಳಿದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಪುರುಷೋತ್ತಮ ಗುರುಂಪು ಅಧ್ಯಕ್ಷತೆ ವಹಿಸಿದ್ದರು.
ಶಾಲಾ ದಾನಿ ವಿನೋದ ಬಾಲಕೃಷ್ಣ ಡೆಂಬಲೆ, ಎಸ್‌ಡಿಎಂಸಿ ಉಪಾಧ್ಯಕ್ಷೆ ಮೀನಾಕ್ಷಿ ಬಾಂಕೋಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಿಕ್ಷಕ ಮಂಜುನಾಥ ಮಣಕವಾಡ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಪ್ರಮೀಳಾ ವಂದಿಸಿದರು. ಶಿಕ್ಷಕಿಯರಾದ ವೀಕ್ಷಿತಾ, ತಾರಾ ಸಹಕರಿಸಿದರು. ಕಾರ್ಯಕ್ರಮದಲ್ಲಿ ಎಸ್‌ಡಿಎಂಸಿ ಸದಸ್ಯರು, ಪೋಷಕರು, ವಿದ್ಯಾರ್ಥಿಗಳು, ಊರವರು ಉಪಸ್ಥಿತರಿದ್ದರು.