ವಿಟ್ಲ: ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಬಂಟ್ವಾಳ ತಾಲೂಕಿನ ಮಾಣಿ ಸಮೀಪದ ರಾಷ್ಟ್ರೀಯ ಹೆದ್ದಾರಿಗೆ ತಾಗಿಕೊಂಡಿರುವ ಗಡಿಯಾರ ಸರಕಾರಿ ಶಾಲೆಯ ಬಳಿ ಗುಡ್ಡ ಕುಸಿತ ಉಂಟಾಗಿದೆ. ಅಪಾಯಕಾರಿ ಸನ್ನಿವೇಶ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು ಮತ್ತು ಗುತ್ತಿಗೆ ವಹಿಸಿಕೊಂಡ ಕಂಪೆನಿಯ ಸಿಬ್ಬಂದಿಗಳು ಸಮಸ್ಯೆ ಪರಿಹರಿಸಿ ಕೊಡುವುದಾಗಿ ಭರವಸೆ ನೀಡಿದ್ದಾರೆ.
ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಮದ್ಯೆ ಇರುವ ಬಂಟ್ವಾಳ ತಾಲೂಕಿನ ಮಾಣಿ ಸಮೀಪದ ಗಡಿಯಾರ ಎಂಬಲ್ಲಿರುವ ಸರಕಾರಿ ಶಾಲೆ ಮತ್ತು ವಿದ್ಯುತ್ ಟವರ್ ಕೆಲ ದಿನಗಳಿಂದ ಸುರಿಯುವ ಮಳೆಗೆ ಗುಡ್ಡ ಜರಿದು ಬೀಳುವ ಹಂತದಲ್ಲಿತ್ತು. ಶಾಲೆಯ ಕಟ್ಟಡ ಅಪಾಯದಲ್ಲಿದ್ದ ಕಾರಣ ಶಾಲಾ ಆಡಳಿತ ಮಂಡಳಿ ಶಾಲೆಗೆ ರಜೆ ನೀಡಿತ್ತು.
ರಾಷ್ಟ್ರೀಯ ಹೆದ್ದಾರಿ ಬಿಸಿರೋಡಿನಿಂದ ಅಡ್ಡಹೊಳೆವರೆಗೆ ಚತುಷ್ಪಥ ಕಾಮಗಾರಿ ಹಿನ್ನೆಲೆ ರಸ್ತೆಯ ಬದಿಯಲ್ಲಿ ಮಣ್ಣು ಅಗೆತ ಮಾಡಿದ ಕಂಪೆನಿ ಸಕಾಲದಲ್ಲಿ ಗುಡ್ಡ ಜರಿಯದಂತೆ ತಡೆಗೊಡೆ ನಿರ್ಮಾಣ ಮಾಡಿರಲಿಲ್ಲ. ಇದರಿಂದಾಗಿ ಶಾಲೆಯ ಅಂಗಳ ಕುಸಿಯುವ ಹಂತ ತಲುಪಿತ್ತು, ವಿದ್ಯುತ್ ಟವರ್ ಬೀಳುವ ಸ್ಥಿತಿಯಲ್ಲಿತ್ತು.
ಈ ಬಗ್ಗೆ ಮಾಹಿತಿ ಅರಿತ ಬಂಟ್ವಾಳ ತಹಶಿಲ್ದಾರ್ ಬಿ.ಎಸ್.ಕೂಡಲಗಿ, ಬಿ.ಇ.ಒ.ಜ್ಞಾನೇಶ್ ಹಾಗೂ ಗುತ್ತಿಗೆ ವಹಿಸಿಕೊಂಡ ಕೆ.ಎನ್.ಆರ್.ಸಿ.ಕಂಪೆನಿಯ ಪ್ರಮುಖರು ಶಾಲೆಗೆ ಭೇಟಿ ನೀಡಿದರು. ಸ್ಥಳದಲ್ಲಿ ಗುಡ್ಡ ಜರಿತದಿಂದ ಮುಂದೆ ಸಂಭವಿಸಬಹುದಾದ ಅಪಾಯದ ಬಗ್ಗೆ ಮಾಹಿತಿ ಪಡೆದ ಬಳಿಕ ಶಾಲಾ ಮುಖ್ಯೋಪಾಧ್ಯಾಯ ಸದಾನಂದ ಟಿ.ಎಮ್. ಮತ್ತು ಗ್ರಾಮಸ್ಥರ ಜೊತೆ ಅಧಿಕಾರಿಗಳು ಮಾತುಕತೆ ನಡೆಸಿ ಸಮಸ್ಯೆ ಪರಿಹಾರಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ.