ಪಾಲ್ತಾಡಿ : ಕೊಳ್ತಿಗೆ ಸಿ.ಎ.ಬ್ಯಾಂಕ್ ಶಾಖಾ ವ್ಯವಸ್ಥಾಪಕ ಜಯರಾಮ ಗೌಡ ಅವರಿಗೆ ಶ್ರದ್ಧಾಂಜಲಿ ಸಭೆ

0

ಸ್ವಾಭಿಮಾನ ,ತಾಳ್ಮೆ ,ಪ್ರೀತಿಯ ಪ್ರತಿರೂಪದಂತಿದ್ದರು ಜಯರಾಮ ಗೌಡ 

ಸವಣೂರು : ಇತ್ತೀಚೆಗೆ ನಿಧನರಾದ ಕೊಳ್ತಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಪಾಲ್ತಾಡಿ ಶಾಖಾ ವ್ಯವಸ್ಥಾಪಕರಾಗಿದ್ದ ಜಯರಾಮ ಗೌಡ ಕೆ. ಅವರಿಗೆ ಶ್ರದ್ಧಾಂಜಲಿ ಸಭೆಯು ಪಾಲ್ತಾಡಿ ಶಾಖೆಯ ನವೋದಯ ಸಭಾಂಗಣದಲ್ಲಿ ಜು.4ರಂದು ನಡೆಯಿತು. ಸವಣೂರು ಗ್ರಾ.ಪಂ.ಮಾಜಿ ಅಧ್ಯಕ್ಷೆ ಇಂದಿರಾ ಬಿ.ಕೆ ಮಾತನಾಡಿ,ಜಯರಾಮ ಗೌಡ ಅವರು ತನ್ನ ಸ್ನೇಹಪರತೆಯಿಂದ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು.ಅಕಾಲಿಕವಾಗಿ ಅವರು ನಮ್ಮನ್ನು ಅಗಲಿದ್ದರೂ ಅವರ ಗೌರವಯುತ ಬದುಕು,ಗ್ರಾಹಕ ಸ್ನೇಹಿ ನಡೆ ಶಾಶ್ವತವಾಗಿ ಎಲ್ಲರ ಮನದಲ್ಲಿರುತ್ತದೆ ಎಂದರು.

ಸಂಘದ ನಿರ್ದೇಶಕ ಶ್ರೀಧರ ಗೌಡ ಅಂಗಡಿಹಿತ್ಲು ಮಾತನಾಡಿ, ಜಯರಾಮ ಅವರು ಊಟದ ಸಮಯವನ್ನು ನೋಡದೆ ಗ್ರಾಹಕರು ಬಂದರೆ ಸೇವೆ ನೀಡುತ್ತಿದ್ದರು,ಸಹಕಾರಿ ಕ್ಷೇತ್ರದಲ್ಲಿ ಅವರ ಸೇವೆ ಇನ್ನೂ ಸಿಗಬೇಕಿತ್ತು.ಆದರೆ ವಿಧಿಯಾಟವೇ ಬೇರೆ.ಅವರ ಮನೆಯವರಿಗೆ, ತಂದೆ ತಾಯಿಗೆ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದರು.

ಇನ್ನೋರ್ವ ನಿರ್ದೇಶಕ ಕೆ.ಎಸ್.ವೆಂಕಟ್ರಮಣ ಮಾತನಾಡಿ,ಜಯರಾಮ ಅವರು  ಬಡವರ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದರು,‌ಸ್ವಸಹಾಯ ಸಂಘಕ್ಕೆ ನೀಡುವ ಸಾಲದ ಬಡ್ಡಿ ಕಡಿಮೆ ಮಾಡುವಂತೆ ಮನವಿ ಮಾಡುತ್ತಿದ್ದರು.ಜನರಿಗೆ ಉತ್ತಮ ಸೇವೆ ನೀಡುತ್ತಿದ್ದ ಜಯರಾಮ್ ನಿಜವಾದ ಸಹಕಾರಿ ಎಂದ ಅವರು,ತಂದೆ ತಾಯಿಗೆ ಅಪಾರ ಗೌರವ ಕೊಡುತ್ತಿದ್ದರು, ಕೊಳ್ತಿಗೆ ಹಾಗೂ ಪಾಲ್ತಾಡಿ ಈ ಎರಡೂ ಗ್ರಾಮದ ಜನರ ಪ್ರೀತಿಗೆ ಪಾತ್ರರಾದವರು ಎಂದರು‌.

ಸವಣೂರು ಗ್ರಾ.ಪಂ.ಮಾಜಿ ಉಪಾಧ್ಯಕ್ಷ ಕಿಟ್ಟಣ್ಞ ರೈ ನಡುಕೂಟೇಲು ಮಾತನಾಡಿ, ಜಯರಾಮ ಅವರು ಎಲ್ಲರಲ್ಲಿಯೂ ಹೊಂದಾಣಿಕೆಯಿಂದ ಬೆರೆತು ಗ್ರಾಹಕರ ಪ್ರೀತಿ,ವಿಶ್ವಾಸ ಗಳಿಸಿದ್ದರು ಎಂದರು.

ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ವಸಂತ ಕುಮಾರ್ ರೈ ಮಾತನಾಡಿ,ಹುಟ್ಟು ಆಕಸ್ಮಿಕ ಸಾವು ನಿಶ್ಚಿತ ,ಹುಟ್ಟು ಸಾವಿನ ನಡುವೆ ಅವರು ಮಾಡಿದ ಕಾರ್ಯ ಶಾಶ್ವತ, ಜಯರಾಮ ಅವರು ಸ್ವಾಭಿಮಾನ ,ತಾಳ್ಮೆ ,ಪ್ರೀತಿಯ ಪ್ರತಿರೂಪದಂತೆ ಇದ್ದು, ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಬೆಳೆದು ಬಂದವರು.ಅವರು ನೀಡಿದ ಸೇವೆ ಹಾಗೂ ಆದರ್ಶ ಶಾಶ್ವತ ಎಂದರು.

ಡಾ.ರಾಮಚಂದ್ರ ಭಟ್ ಮಾಡಾವು,ನಾಭಿರಾಜ ಆರಿಗ ಬಂಬಿಲಗುತ್ತು ಅವರು ಮಾತನಾಡಿ ನುಡಿನಮನ ಸಲ್ಲಿಸಿದರು.

ವೇದಿಕೆಯಲ್ಲಿ ಪಾಲ್ತಾಡಿ ಚಾಕೋಟೆತ್ತಡಿ ಶ್ರೀ ಧರ್ಮರಸು ಉಳ್ಳಾಕುಲು ದೈವಸ್ಥಾನದ ಅಧ್ಯಕ್ಷ ಸಂಜೀವ ಗೌಡ,ಸವಣೂರು ಗ್ರಾ.ಪಂ.ಸದಸ್ಯ ಭರತ್ ರೈ ,ನವೋದಯ ಸ್ವಸಹಾಯ ಸಂಘಗಳ ಪ್ರೇರಕಿ ಕಲ್ಪವಲ್ಲಿ,ನವೋದಯ ಸ್ವಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷೆ  ಮೋಹಿನಿ ಬಾಲಕೃಷ್ಣ ಗೌಡ ಬಾಕಿಜಾಲು ಉಪಸ್ಥಿತರಿದ್ದರು.

ಸಭೆಯಲ್ಲಿ ಸವಣೂರು ಗ್ರಾ.ಪಂ.ಸದಸ್ಯೆ ಸುಂದರಿ ಬಂಬಿಲ,ಕೊಳ್ತಿಗೆ ಗ್ರಾ.ಪಂ.ಸದಸ್ಯ ಪ್ರಮೋದ್ ಕೆ.ಎಸ್,ಕೊಳ್ತಿಗೆ ಸಿಎ ಬ್ಯಾಂಕ್ ಮಾಜಿ ನಿರ್ದೇಶಕ ದಿವಾಕರ ಬಂಗೇರ ಬೊಳಿಯಾಲ, ವಿವಿಧ ಸಂಘ ಸಂಸ್ಥೆಗಳ ಪ್ರಮುಖರು,ನವೋದಯ ಸ್ವಸಹಾಯ ಸಂಘದ ಸದಸ್ಯರು ಪಾಲ್ಗೊಂಡಿದ್ದರು. ಸಭೆಯಲ್ಲಿ  ಮೌನ ಪ್ರಾರ್ಥನೆ ಸಲ್ಲಿಸಿ ಶ್ರದ್ಧಾಂಜಲಿ ಅರ್ಪಿಸಲಾಯಿತು.ಜಯರಾಮ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.

ಕೊಳ್ತಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಪಾಲ್ತಾಡಿ ಶಾಖಾ ವ್ಯವಸ್ಥಾಪಕ ಭರತ್ ರಾಜ್ ಅವರು, ಜಯರಾಮ ಅವರ ವ್ಯಕ್ತಿ ಪರಿಚಯವನ್ನು ಸಭೆಯ ಮುಂದಿಟ್ಟರು. ನವೋದಯ ಸ್ವಸಹಾಯ ಸಂಘದ ಸದಸ್ಯೆ ಪುಷ್ಪಲತಾ ಅವರು ನಿರೂಪಿಸಿದರು.

LEAVE A REPLY

Please enter your comment!
Please enter your name here