





ಆದಾಯಕ್ಕಿಂತ ಅಧಿಕ ಆಸ್ತಿ ಹೊಂದಿರುವ ಪ್ರಕರಣ


ಪ್ರಕರಣದಲ್ಲಿ ಬಂಧಿತರಾಗಿ ಪೊಲೀಸ್ ಕಸ್ಟಡಿಯಲ್ಲಿರುವ ಆರೋಪಿ
ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಿರುವ ಪೊಲೀಸರು
ಸೇವೆಯಿಂದ ಅಮಾನತು ಜೊತೆಗೆ ಲೀನ್ ಗ್ರೇಡ್-2 ಹುದ್ದೆಗೆ ವರ್ಗ





ಬೆಂಗಳೂರು: ಆದಾಯಕ್ಕಿಂತ ಅಧಿಕ ಆಸ್ತಿ ಹೊಂದಿರುವ ಆರೋಪದಡಿ ಬಂಧಿತರಾಗಿ ನ್ಯಾಯಾಂಗ ಬಂಧನ ವಿಧಿಸಲ್ಪಟ್ಟು ಹೆಚ್ಚಿನ ವಿಚಾರಣೆಗಾಗಿ ಲೋಕಾಯಕ್ತ ಪೊಲೀಸರ ಕಸ್ಟಡಿಯಲ್ಲಿರುವ ಕೆ.ಆರ್.ಪುರಂ ತಹಶೀಲ್ದಾರ್ ಪುತ್ತೂರು ಮೂಲದ ಅಜಿತ್ ಕುಮಾರ್ ರೈ ಅವರನ್ನು ಸೇವೆಯಿಂದ ಅಮಾನತುಗೊಳಿಸಿರುವ ಸರಕಾರ ರಾಯಚೂರು ಜಿಲ್ಲೆಯ ಶಿರವಾರ ತಾಲೂಕು ಗ್ರೇಡ್-2 ತಹಸಿಲ್ದಾರ್ ಹುದ್ದೆಗೆ ವರ್ಗಾವಣೆಗೊಳಿಸಿದೆ.ಈ ಪ್ರಕರಣದ ತನಿಖೆಗೆ ಈಗಾಗಲೇ ಲೋಕಾಯುಕ್ತ ಪೊಲೀಸರ ವಿಶೇಷ ತನಿಖಾ ತಂಡ(ಎಸ್ಐಟಿ) ರಚಿಸಲಾಗಿದೆ.
ಭ್ರಷ್ಟಾಚಾರ ಮತ್ತು ಆದಾಯಕ್ಕಿಂತ ಅಧಿಕ ಆಸ್ತಿ ಹೊಂದಿರುವ ಆರೋಪದಲ್ಲಿ ಕರ್ನಾಟಕ ಲೋಕಾಯುಕ್ತ ಪೊಲೀಸರು ಜೂ.೨೮ರಂದು ಅಜಿತ್ ಕುಮಾರ್ ರೈ ಸಹಿತ ರಾಜ್ಯದ 15 ಅಧಿಕಾರಿಗಳ ಮನೆ,ಕಚೇರಿ ಮೇಲೆ ದಾಳಿ ನಡೆಸಿದ್ದರು.ಅಜಿತ್ ಕುಮಾರ್ ರೈಯವರಿಗೆ ಸಂಬಂಧಿಸಿ ಬೆಂಗಳೂರುನಲ್ಲಿರುವ ಅವರ ಕಚೇರಿ, ಮನೆ, ಅವರ ಅಣ್ಣ ಅಶಿತ್ ಕುಮಾರ್ ರೈ ಮನೆ, ಸ್ನೇಹಿತ ಗೌರವ್ ಶೆಟ್ಟಿಯವರ ಮನೆ,ಕೆಯ್ಯೂರು ಗ್ರಾಮದ ಸಾಗುವಿನಲ್ಲಿರುವ ಅಜಿತ್ ಕುಮಾರ್ ರೈಯವರ ತಾಯಿ ಮನೆ ಸೇರಿದಂತೆ ಸುಮಾರು 11 ಕಡೆಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಲಾಗಿತ್ತು.ದಾಳಿ ಸಂದರ್ಭ 40 ಲಕ್ಷ ರೂ. ನಗದು, 700 ಗ್ರಾಮ್ ಚಿನ್ನ, ಕೋಟ್ಯಂತರ ರೂ.ಮೌಲ್ಯದ ಭೂ ದಾಖಲಾತಿ ಪತ್ರಗಳು, ದುಬಾರಿ ಬೆಲೆಯ ಕಾರುಗಳು, ದೇಶ-ವಿದೇಶಿ ಬ್ರ್ಯಾಂಡ್ನ ಮದ್ಯ ಸೇರಿದಂತೆ ಕೋಟ್ಯಂತರ ರೂ.ಬೆಲೆಯ ಸೊತ್ತುಗಳು, ಅಪಾರ ಪ್ರಮಾಣದ ಆಸ್ತಿಗೆ ಸಂಬಂಧಿಸಿದ ದಾಖಲೆಪತ್ರಗಳು ಪತ್ತೆಯಾಗಿದ್ದವು.ಅಜಿತ್ ಕುಮಾರ್ ರೈಯವರ ಸ್ನೇಹಿತರು, ಆಪ್ತರು ಸೇರಿದಂತೆ ಬೇರೆ ಬೇರೆ ಹೆಸರಲ್ಲಿದ್ದ ಭೂಮಿಯ ದಾಖಲೆಪತ್ರಗಳೂ ಪತ್ತೆಯಾಗಿದ್ದು ಇವುಗಳು ಬೇನಾಮಿ ಆಸ್ತಿಗಳು ಎಂದು ಲೋಕಾಯುಕ್ತ ಪೊಲೀಸರು ಶಂಕೆ ವ್ಯಕ್ತಪಡಿಸಿ, ಹೆಚ್ಚಿನ ತನಿಖೆ ನಡೆಸಿದ್ದರು.ಸತತ 30 ಗಂಟೆಗಳ ಪರಿಶೀಲನೆ ವೇಳೆ, ಅಜಿತ್ ಕುಮಾರ್ ರೈಯವರು ಅಕ್ರಮ ಆಸ್ತಿ ಗಳಿಕೆ ಮಾಡಿರುವುದು ಕಂಡುಬಂದಿದ್ದ ಹಿನ್ನೆಲೆಯಲ್ಲಿ ಅವರನ್ನು ಜೂ.29ರಂದು ಲೋಕಾಯುಕ್ತ ಪೊಲೀಸರು ಬಂಧಿಸಿದ್ದರು.ಆರೋಪಿಯನ್ನು ಹೆಚ್ಚಿನ ವಿಚಾರಣೆಗಾಗಿ 7 ದಿನಗಳ ಅವಧಿಗೆ ಪೊಲೀಸ್ ಕಸ್ಟಡಿಗೆ ನೀಡಿ ನ್ಯಾಯಾಧೀಶ ಎಸ್.ವಿ.ಶ್ರೀಕಾಂತ್ ಆದೇಶ ಹೊರಡಿಸಿದ್ದರು.ಈ ಎಲ್ಲ ಬೆಳವಣಿಗೆಗಳ ಮಧ್ಯೆ ಆರೋಪಿ ಅಜಿತ್ ಕುಮಾರ್ ರೈಯವರನ್ನು ಸೇವೆಯಿಂದ ಅಮಾನತುಗೊಳಿಸಿ ಸರಕಾರ ಜೂ.30ರಂದು ಆದೇಶ ಹೊರಡಿಸಿತ್ತು.
ರಾಯಚೂರು ಶಿರವಾರಕ್ಕೆ ವರ್ಗ:
ಕೆ.ಆರ್.ಪುರಂನಲ್ಲಿ ಗ್ರೇಡ್-1 ತಹಸಿಲ್ದಾರ್ ಆಗಿದ್ದ ಅಜಿತ್ ಕುಮಾರ್ ರೈಯವರು ತಮ್ಮ ಬಲ್ಲ ಮೂಲಗಳ ಆದಾಯಕ್ಕಿಂತ ಶೇ.69.8ರಷ್ಟು ಹೆಚ್ಚಿನ ಅಕ್ರಮ ಸಂಪತ್ತನ್ನು ಹೊಂದಿರುವುದು ಲೋಕಾಯುಕ್ತ ದಾಳಿಯಲ್ಲಿ ಪ್ರಾಥಮಿಕ ತನಿಖೆಯಿಂದ ದೃಢಪಟ್ಟಿರುವ ಕಾರಣಕ್ಕಾಗಿ ಹಾಗೂ ಪ್ರಕರಣದಲ್ಲಿ ಬಂಧಿತರಾಗಿ ನ್ಯಾಯಾಂಗ ಬಂಧನದಲ್ಲಿರುವುದರಿಂದ ಕರ್ನಾಟಕ ನಾಗರಿಕ ಸೇವಾ(ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ)ನಿಯಮಾವಳಿಗಳು, 1957ರ ನಿಯಮ 10(1)(ಎ)(ಎ) ಮತ್ತು 10(2)(ಎ)ರನ್ವಯ ಜೂ.28ರಿಂದ ಪೂರ್ವಾನ್ವಯವಾಗಿ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಇಲಾಖಾ ವಿಚಾರಣೆ ಬಾಕಿಯಿರಿಸಿ ಅಜಿತ್ ಕುಮಾರ್ ರೈಯವರನ್ನು ಅಮಾನತ್ತುಗೊಳಿಸಿ ಆದೇಶಿಸಿದ್ದ ಸರಕಾರ ಅವರ ಹುದ್ದೆಯ ಮೇಲಿನ ಲೀನ್ ಅನ್ನು ತಹಸಿಲ್ದಾರ್-ಗ್ರೇಡ್ 1, ಶಿರವಾರ ತಾಲ್ಲೂಕು ರಾಯಚೂರು ಜಿಲ್ಲೆ ಹುದ್ದೆಗೆ ವರ್ಗಾಯಿಸಿ ರಾಜ್ಯ ಕಂದಾಯ ಇಲಾಖೆ(ಸೇವೆಗಳು-3)ಉಪಕಾರ್ಯದರ್ಶಿ ಜಯಲಕ್ಷ್ಮೀಯವರು ಆದೇಶ ಹೊರಡಿಸಿದ್ದಾರೆ.
ಪ್ರಸ್ತುತ ಸ್ಥಳ ನಿರೀಕ್ಷಣೆಯಲ್ಲಿದ್ದ ಅಜಿತ್ ಕುಮಾರ್ ರೈಯವರು ತಮ್ಮ ಬಲ್ಲ ಮೂಲಗಳ ಆದಾಯಕ್ಕಿಂತ ಹೆಚ್ಚಿನ ಅಕ್ರಮ ಸಂಪತ್ತನ್ನು ಹೊಂದಿರುವ ಕುರಿತು ಅವರ ವಿರುದ್ಧ ಬೆಂಗಳೂರು ನಗರ ಪೊಲೀಸ್ ಠಾಣೆಯಲ್ಲಿ ಕಲಂ 13(1)(ಬಿ) ಸಹವಾಚನ 13(2) ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ, 1988ರ ರೀತ್ಯಾ ಜೂ.27ರಂದು ದಾಖಲಿಸಿಕೊಂಡು 23ನೇ ಹೆಚ್ಚುವರಿ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದಿಂದ ಅಗತ್ಯ ಶೋಧನಾ ವಾರಂಟ್ ಪಡೆದುಕೊಂಡು ಜೂ.28ರಂದು ಆರೋಪಿತರ ವಾಸದ ಮನೆ, ಅವರ ತಾಯಿ ವಾಸವಿರುವ ಮನೆ, ಅಣ್ಣನ ಮನೆ ಹಾಗೂ ಆಪಾದಿತರ ಬೇನಾಮಿ ವಾರಸುದಾರರ ಮನೆಗಳಲ್ಲಿ ಶೋಧನೆ ನಡೆಸಲಾಗಿತ್ತು.ಈ ಶೋಧನೆಯಲ್ಲಿನ ಪ್ರಾಥಮಿಕ ತನಿಖೆಯಿಂದ, ಆರೋಪಿಯು ಬಲ್ಲ ಮೂಲಗಳಿಗಿಂತ ಶೇ.69.8ರಷ್ಟು ಅಕ್ರಮ ಆಸ್ತಿ ಹೊಂದಿರುವುದು ಹೊರಹೊಮ್ಮಿರುತ್ತದೆ.ಆರೋಪಿಯು ಹೆಚ್ಚುವರಿಯಾಗಿ ಅಕ್ರಮ ಮೂಲಗಳಿಂದ ಗಳಿಸಿರುವ ಚರ/ಸ್ಥಿರಾಸ್ತಿಗಳ ಮೌಲ್ಯವು ಆರೋಪಿಯು ಸರಕಾರಿ ನೌಕರರ ಶೋಧನಾ ಅವಧಿಯಲ್ಲಿ ನಿಗದಿತ ಮೂಲಗಳಿಂದ ಗಳಿಸಿರುವ ವರಮಾನಕ್ಕಿಂತ ಹೆಚ್ಚಿನ ಮೊತ್ತವಾಗಿರುತ್ತದೆ.ಅಲ್ಲದೆ ಆರೋಪಿಯು ವಿವಿಧ ಬಾಬ್ತುಗಳಿಗಾಗಿ ಮಾಡಿರುವ ಖರ್ಚುವೆಚ್ಚಗಳು, ಮಾಡಿರುವ ಗುಪ್ತ ಹೂಡಿಕೆಗಳು ಹಾಗೂ ಆಸ್ತಿಗಳ ಕುರಿತಂತೆ ಇನ್ನೂ ಹಲವು ಮೂಲಗಳಿಂದ ಮಾಹಿತಿ ಕಲೆ ಹಾಕಬೇಕಾಗಿದೆ.ಇದರಿಂದ ಭವಿಷ್ಯದಲ್ಲಿ ಪ್ರಕರಣದ ತನಿಖೆ ಮುಂದುವರೆದಂತೆ ಹೆಚ್ಚಿನ ಚರ/ಸ್ಥಿರಾಸ್ತಿ ಮತ್ತು ಖರ್ಚುವೆಚ್ಚಗಳ ಒಟ್ಟಾರೆ ಮೌಲ್ಯವು ಇನ್ನೂ ಹೆಚ್ಚಾಗುವ ಸಂಭವವಿರುತ್ತದೆ.ಆರೋಪಿಯನ್ನು ಈಗಾಗಲೇ 7 ದಿನಗಳ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದ್ದು ಅವರು ತಹಸಿಲ್ದಾರ್ ಹುದ್ದೆಯಲ್ಲಿ ಮುಂದುವರೆದಲ್ಲಿ ಪ್ರಕರಣದ ತನಿಖೆಗೆ ಅಡ್ಡಿ ಉಂಟು ಮಾಡುವ ಅಥವಾ ತನಿಖೆಯಲ್ಲಿ ಹಸ್ತಕ್ಷೇಪಗೊಳಿಸುವ ಹಾಗೂ ಸಾಕ್ಷಿ ಪುರಾವೆಗಳನ್ನು ನಾಶಪಡಿಸುವ ಸಂಭವವಿರುವುದರಿಂದ ಕೂಡಲೇ ಅಮಾನತ್ತಿನಲ್ಲಿಡುವಂತೆ ಕರ್ನಾಟಕ ಲೋಕಾಯುಕ್ತದ ಪೊಲೀಸ್ ಮಹಾನಿರ್ದೇಶಕರು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು.ಈ ಹಿನ್ನೆಲೆಯಲ್ಲಿ ಅಜಿತ್ ಕುಮಾರ್ ರೈಯವರನ್ನು ಸೇವೆಯಿಂದ ಅಮಾನತುಗೊಳಿಸಿರುವ ಸರಕಾರ ಅವರ ಹುದ್ದೆಯ ಮೇಲಿನ ಲೀನ್ ಅನ್ನು ರಾಯಚೂರು ಜಿಲ್ಲೆ ಶಿರವಾರ ತಾಲ್ಲೂಕು ಗ್ರೇಡ್-೨ ಹುದ್ದೆಗೆ ವರ್ಗಾಯಿಸಿ ಆದೇಶಿಸಿದೆ.
ಪ್ರಕರಣದ ತನಿಖೆಗೆ ಎಸ್ಐಟಿ ರಚನೆ ಸುಮಾರು 500 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಬೇನಾಮಿ ಆಸ್ತಿಗಳನ್ನು ಹೊಂದಿರುವ ಆರೋಪ ಹೊತ್ತಿರುವ ತಹಶೀಲ್ದಾರ್ ಅಜಿತ್ ಕುಮಾರ್ ರೈ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ದಾಖಲಿಸಿರುವ ಪ್ರಕರಣದ ತನಿಖೆಗೆ ಲೋಕಾಯುಕ್ತ ಪೊಲೀಸ್ ವಿಭಾಗದಲ್ಲಿ ಈಗಾಗಲೇ ವಿಶೇಷ ತನಿಖಾ ತಂಡ (ಎಸ್ಐಟಿ) ರಚಿಸಲಾಗಿದೆ.ಲೋಕಾಯುಕ್ತದ ಬೆಂಗಳೂರು ನಗರ ಘಟಕದ ಡಿವೈಎಸ್ಪಿ ಪ್ರಮೋದ್ ಕುಮಾರ್ ಎಸ್ಐಟಿಯ ನೇತೃತ್ವ ವಹಿಸಿದ್ದು,ಜೊತೆಗೆ ಇಬ್ಬರು ಡಿವೈಎಸ್ಪಿ, ನಾಲ್ವರು ಇನ್ಸ್ಪೆಕ್ಟರ್ಗಳು ತಂಡದಲ್ಲಿದ್ದಾರೆ.ಇತರ ಹಲವು ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಈ ತಂಡಕ್ಕೆ ನಿಯೋಜಿಸಲಾಗಿದೆ.
ಪೊಲೀಸ್ ಕಸ್ಟಡಿ ಅವಧಿ ಇಂದು ಪೂರ್ಣ
ಬಂಧಿತ ಆರೋಪಿ ತಹಸಿಲ್ದಾರ್ ಎಸ್.ಅಜಿತ್ ಕುಮಾರ್ ರೈಯವರನ್ನು ಬಂಧಿಸಿದ್ದ ಲೋಕಾಯುಕ್ತ ಪೊಲೀಸರು ಜೂ.29ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.ಪ್ರಕರಣದ ಕುರಿತು ಇನ್ನೂ ಹೆಚ್ಚಿನ ತನಿಖೆ ಅಗತ್ಯವಿರುವುದರಿಂದ ಆರೋಪಿಯನ್ನು ಹತ್ತು ದಿನಗಳ ಅವಧಿಗೆ ತಮ್ಮ ಕಸ್ಟಡಿಗೆ ನೀಡುವಂತೆ ಲೋಕಾಯುಕ್ತ ಪೊಲೀಸರು ಮಾಡಿದ್ದ ಮನವಿಯನ್ನು ಪುರಸ್ಕರಿಸಿದ್ದ ನ್ಯಾಯಾಲಯ 7 ದಿನಗಳ ಅವಧಿಗೆ ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿತ್ತು.ಪೊಲೀಸ್ ಕಸ್ಟಡಿ ಅವಧಿ ಜು.5ರಂದು ಮುಗಿದ ಬಳಿಕ ಲೋಕಾಯುಕ್ತ ಪೊಲೀಸರು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.









