ಪುತ್ತೂರು: ಅಡಿಕೆ ಮತ್ತು ಕಾಳುಮೆಣಸನ್ನು ಪ್ರಧಾನಮಂತ್ರಿಯವರ ಫಸಲ್ ಬಿಮಾ ಯೋಜನೆಯಿಂದ ಹೊರಗಿಡಲಾಗಿದೆ ಎನ್ನುವ ಗೊಂದಲವಿದೆ. ಆದರೆ ಇವುಗಳನ್ನು ಹೊರಗಿಟ್ಟಿಲ್ಲ, ಟೆಂಡರ್ ನಡೆಯುತ್ತಿದೆ. ಈ ಬಗ್ಗೆ ಸಂಬಂಧಪಟ್ಟ ಕೇಂದ್ರ ಸಚಿವರ ಜೊತೆಗೆ ಸಂಪರ್ಕದಲ್ಲಿವೆ. ರೈತರಿಗೆ ಬೆಂಬಲ ಕೊಡುವ ಕೆಲಸವನ್ನು ಖಂಡಿತಾ ಕ್ಯಾಂಪ್ಕೋ ಮಾಡುತ್ತದೆ ಎಂದುಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿಯವರು ಹೇಳಿದ್ದಾರೆ. ಜು.4 ರಂದು
ಸುದ್ದಿ ಜೊತೆಗೆ ಮಾತನಾಡಿದ ಕಿಶೋರ್ ಕುಮಾರ್ ಕೊಡ್ಗಿಯವರು, ಕೇಂದ್ರ ಸರಕಾರದ ಫಸಲ್ ಬಿಮಾ ಯೋಜನೆಯಲ್ಲಿ ಈವರೆಗೆ ಅಡಿಕೆ, ಕಾಳುಮೆಣಸು, ಭತ್ತ ಹೀಗೆ ವಿವಿಧ ಬೆಳೆಗಳಿಗೆ ವಿಮಾ ಯೋಜನೆಯನ್ನು ಜಾರಿಗೊಳಿಸಲಾಗಿತ್ತು. ಕಳೆದ ಎರಡು ವರ್ಷಗಳಲ್ಲಿ ಹವಾಮಾನ ವೈಪರೀತ್ಯದಿಂದಾಗಿ ವಿಮೆ ಒದಗಿಸುವ ವಿಮಾ ಕಂಪನಿಗಳಿಗೆ ನಷ್ಟವಾಗಿದೆ. ಅವರ ನಿರೀಕ್ಷೆಯ ಮೊತ್ತಕ್ಕಿಂತ ಅಧಿಕ ಮೊತ್ತ ವಿಮೆಯ ರೂಪದಲ್ಲಿ ಹೋಗಿದೆ. ಹೀಗಾಗಿ ಕೆಲವು ವಿಮಾ ಕಂಪನಿಯವರು ಇದಕ್ಕೆ ಬಿಡ್ ಹಾಕಲು ತಯಾರಿಲ್ಲ. ಹೀಗಾಗಿ ಯಾವುದೇ ಕಾರಣಕ್ಕೂ ಯೋಜನೆ ನಿಲ್ಲಬಾರದು ಎಂದು ಸರಕಾರಕ್ಕೆ ಒತ್ತಡ ತರುತ್ತಿzವೆ. ಜನರಿಗೆ ತೊಂದರೆಯಾಗದ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕೆಂದು ಮನವಿ ಸಲ್ಲಿಸಿವೆ ಎಂದು ಹೇಳಿದರು.
ನಮ್ಮ ಯಾವುದೇ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸುತ್ತಿದ್ದು, ಅಡಿಕೆಯ ಬೆಂಬಲ ಬೆಲೆ ರೂ.250 ಇದ್ದುದನ್ನು ರೂ.350 ಮಾಡುವಲ್ಲಿ ಕೂಡ ನಾವು ಯಶಸ್ವಿಯಾಗಿವೆ. ನಮ್ಮ ಮನವಿಗೆ ಸ್ಪಂದನೆ ನೀಡಿ ಕೇಂದ್ರ ಸರಕಾರ ಕಳೆದ ಮಾರ್ಚ್‌ನಿಂದ ಅಡಿಕೆಗೆ 350 ರೂ. ಬೆಂಬಲ ಬೆಲೆಯನ್ನು ಕೂಡ ಘೋಷಿಸಿದೆ. ಆದರೆ ಮಾರುಕಟ್ಟೆ ವ್ಯವಸ್ಥೆಯಲ್ಲಿ ಅಲ್ಪಸ್ವಲ್ಪ ತೊಡಕುಗಳಿವೆ. ಅಕ್ರಮವಾಗಿ ಅಡಿಕೆ, ಕಾಳುಮೆಣಸು ಬರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಈ ಬಗ್ಗೆ ಸೂಕ್ತ ಕ್ರಮ ಜರುಗಿಸುವ ಬಗ್ಗೆ ಕೇಂದ್ರದ ಹಣಕಾಸು ಸಚಿವರು, ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸುತ್ತಿರುವುದರಿಂದ ನಾಗಪುರದಲ್ಲಿ ಅಕ್ರಮ ಅಡಿಕೆ ಸಾಗಾಟ ಜಾಲದ ಕಿಂಗ್‌ಪಿನ್‌ನ್ನು ಬಂಧಿಸಲಾಗಿದೆ. ಈ ಮೂಲಕ ಮುಂದಿನ ದಿನಗಳಲ್ಲಿ ಅಡಿಕೆ ಬೆಳೆಗಾರರಿಗೆ ಚೈತನ್ಯ ತುಂಬುವ ಕೆಲಸ ಆಗುತ್ತದೆ. ಮಾರುಕಟ್ಟೆಯಲ್ಲಿ ಏರುಪೇರು ಸಹಜ. ಬೇಡಿಕೆಗೆ ಅನುಗುಣವಾಗಿ ಕ್ಯಾಂಪ್ಕೋ ಸಂಸ್ಥೆ ಅಡಿಕೆ ಧಾರಣೆ ಕೆಳಮಟ್ಟಕ್ಕೆ ಹೋಗದಂತೆ ಎಲ್ಲಾ ಶಕ್ತಿಯನ್ನು ಉಪಯೋಗಿಸಿ ರೈತರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ ಎಂದು ಕಿಶೋರ್ ಕುಮಾರ್ ಕೊಡ್ಗಿ ಹೇಳಿದರು.
ವಿಪರೀತ ಮಳೆ ಬಂದಾಗ ಕೊಳೆರೋಗದಿಂದ ಅಡಿಕೆ ಫಸಲು ನಾಶವಾಗುತ್ತದೆ. ಆಗ ರೈತರಿಗೆ ಈ ನಷ್ಟವನ್ನು ತಡೆದುಕೊಳ್ಳುವ ಶಕ್ತಿ ಇರುವುದಿಲ್ಲ. ಹೀಗಾಗಿ ಈ ವಿಚಾರದ ಬಗ್ಗೆ ಈಗಾಗಲೇ ಸಂಬಂಧಪಟ್ಟ ಮಂತ್ರಿಗಳಿಗೆ ಪತ್ರ ಬರೆಯಲಾಗಿದೆ. ಈಗ ರಾಜ್ಯ ವಿಧಾನಸಭಾ ಕಲಾಪ ನಡೆಯುತ್ತಿದ್ದು, ಕೃಷಿ ಸಚಿವರಾದ ಚೆಲುವರಾಯಸ್ವಾಮಿಯವರಿಗೆ, ಜಿಲ್ಲೆಯ ಎಲ್ಲಾ ಶಾಸಕರ ಮೂಲಕ ಪತ್ರ ಬರೆದು ರೈತರಿಗೆ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳಿ ಎನ್ನುವ ಮನವಿ ಸಲ್ಲಿಸಲಾಗಿದೆ. ಅದು ಖಂಡಿತಾ ಫಲಕಾರಿಯಾಗುತ್ತದೆ.
-ಕಿಶೋರ್ ಕುಮಾರ್ ಕೊಡ್ಗಿ, ಅಧ್ಯಕ್ಷರು ಕ್ಯಾಂಪ್ಕೋ