ಸಂಘ ಸಂಸ್ಥೆಗಳು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಳ್ಳಬೇಕು: ಬಾಲಕೃಷ್ಣ ಆಳ್ವ ಕೊಡಾಜೆ
ವಿಟ್ಲ: ಮನುಷ್ಯನ ಶರೀರದ ಪ್ರಮುಖ ಅಂಗಗಳಲ್ಲಿ ಒಂದಾದ ಕಣ್ಣನ್ನು ರಕ್ಷಿಸಿಕೊಳ್ಳುವುದು ಎಲ್ಲರ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಉಚಿತ ನೇತ್ರ ಚಿಕಿತ್ಸಾ ಶಿಬಿರಗಳನ್ನು ಆಯೋಜಿಸುವ ಅಗತ್ಯತೆ ಇದೆ ಎಂದು ಮಾಣಿ ಗ್ರಾಮ ಪಂಚಾಯತ್ ಅಧ್ಯಕ್ಷ ಬಾಲಕೃಷ್ಣ ಆಳ್ವ ಕೊಡಾಜೆ ಹೇಳಿದರು.
ಆನಂದಾಶ್ರಮ ಸೇವಾ ಟ್ರಸ್ಟ್ ಪುತ್ತೂರು, ಮಾಣಿ ಗ್ರಾಮ ಪಂಚಾಯತ್, ಪ್ರಾಥಮಿಕ ಆರೋಗ್ಯ ಕೇಂದ್ರ ಮಾಣಿ, ಲಯನ್ಸ್ ಕ್ಲಬ್ ಮಾಣಿ ಮತ್ತು ರೋಟರಿ ಕ್ಲಬ್ ಬಂಟ್ವಾಳ ಇವುಗಳ ಜಂಟಿ ಆಶ್ರಯದಲ್ಲಿ ಮಾಣಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜರುಗಿದ ಉಚಿತ ನೇತ್ರ ಶಿಬಿರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಂಘ ಸಂಸ್ಥೆಗಳು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಳ್ಳಬೇಕು. ಆಗ ಸಮಾಜದ ಕಟ್ಟಕಡೆಯ ವ್ಯಕ್ತಿಯ ಸಮಸ್ಯೆಗಳನ್ನು ಕೂಡಾ ಪರಿಹರಿಸಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಇಂದಿನ ಶಿಬಿರದ ಜವಾಬ್ದಾರಿಯನ್ನು ವಹಿಸಿದ ಜಂಟಿ ಸಂಸ್ಥೆಗಳ ಕಾರ್ಯ ಶ್ಲಾಘನೀಯ. ಸಹಕರಿದ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದರು.
ಆನಂದಾಶ್ರಮ ಸೇವಾ ಟ್ರಸ್ಟಿನ ಸಂಸ್ಥಾಪಕರಾದ ಡಾ.ಗೌರಿ ಪೈಯವರು ಶಿಬಿರವನ್ನು ಉದ್ಘಾಟಿಸಿದರು. ಬಂಟ್ವಾಳ ರೋಟರಿ ಕ್ಲಬ್ಬಿನ ಅಧ್ಯಕ್ಷ ಪ್ರಕಾಶ್ ಬಾಳಿಗ, ಮಾಣಿ ಲಯನ್ಸ್ ಕ್ಲಬ್ ನ ಅಧ್ಯಕ್ಷ ಕೂಸಪ್ಪ ಪೂಜಾರಿ, ಉಪ್ಪಿನಂಗಡಿ ಸರಕಾರಿ ಆಸ್ಪತ್ರೆಯ ನೇತ್ರಾಧಿಕಾರಿ ಡಾ. ಶಾಂತರಾಜ್, ಗಡಿಯಾರ ಶ್ರೀ ದುರ್ಗಾ ಗ್ರಾಮೀಣ ಆರೋಗ್ಯ ಕೇಂದ್ರದ ವೈದ್ಯರಾದ ಡಾ. ಮನೋಹರ ರೈ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಮಾಣಿ ಲಯನ್ಸ್ ಕ್ಲಬ್ ನ ಸ್ಥಾಪಕಾಧ್ಯಕ್ಷ ಗಂಗಾಧರ ರೈ, ನಿಕಟಪೂರ್ವಾಧ್ಯಕ್ಷ ಉಮೇಶ್.ಪಿ, ಕಾರ್ಯದರ್ಶಿ ವಿನ್ಸೆಂಟ್ ಲಸ್ರಾದೊ, ಬಂಟ್ವಾಳ ರೋಟರಿ ಕ್ಲಬ್ಬಿನ ನಿಕಟಪೂರ್ವಾಧ್ಯಕ್ಷ ಪುಷ್ಪರಾಜ ಹೆಗ್ಡೆ, ಮಾಣಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಪ್ರೀತಿ ಡಿನ್ನಾ ಪಿರೇರಾ, ಸದಸ್ಯ ಇಬ್ರಾಹಿಂ.ಕೆ.ಮಾಣಿ, ಅಭಿವೃದ್ಧಿ ಅಧಿಕಾರಿ ಗಿರಿಜಾ, ಆನಂದಾಶ್ರಮ ಸೇವಾ ಟ್ರಸ್ಟಿನ ಸದಸ್ಯ ಪಿ.ಸದಾಶಿವ ಪೈ ಮೊದಲಾದವರು ಉಪಸ್ಥಿತರಿದ್ದರು. ಮಾಣಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಶಶಿಕಲಾ ಸ್ವಾಗತಿಸಿದರು. ಸಿಬ್ಬಂದಿ ಸಹಕರಿಸಿದರು. 154 ಮಂದಿ ಶಿಬಿರಾರ್ಥಿಗಳು ಶಿಬಿರದಲ್ಲಿ ಭಾಗವಹಿಸಿದ್ದರು. ಹನ್ನೊಂದು ಮಂದಿಯನ್ನು ಶಸ್ತ್ರಚಿಕಿತ್ಸೆಗಾಗಿ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಕಳುಹಿಸಲಾಯಿತು. 126 ಮಂದಿಗೆ ಉಚಿತ ಕನ್ನಡಕ ವಿತರಿಸಲಾಯಿತು.