ವಿಟ್ಲ: ಮನೆಯೊಂದರ ಮೇಲೆ ಗುಡ್ಡ ಕುಸಿದು ಬಿದ್ದು ಮನೆಯೊಳಗಿದ್ದ ಇಬ್ಬರು ಮಹಿಳೆಯರ ಪೈಕಿ ಓರ್ವರು ಮೃತಪಟ್ಟ ಘಟನೆ ಬಂಟ್ವಾಳ ತಾಲೂಕಿನ ಸಜೀಪಮುನ್ನೂರು ಗ್ರಾಮದ ನಂದಾವರ ಗುಂಪುಮನೆ ಎಂಬಲ್ಲಿ ನಡೆದಿದೆ.
ನಂದಾವರ ನಿವಾಸಿ ಮಹಮ್ಮದ್ ರವರ ಪತ್ನಿ ಝರೀನಾ(49 ವ.) ಮೃತಪಟ್ಟವರಾಗಿದ್ದಾರೆ. ಅವರ ಪುತ್ರಿ ಶಫಾ(20 ವ.) ಗಾಯಗೊಂಡವರಾಗಿದ್ದಾರೆ. ಜು.7ರಂದು ಬೆಳಗ್ಗೆ 6 ಗಂಟೆ ವೇಳೆ ಈ ದುರ್ಘಟನೆ ಸಂಭವಿಸಿದೆ. ಘಟನೆ ವೇಳೆ ಮಣ್ಣಿನಡಿ ಮಹಮ್ಮದ್ ಅವರ ಪತ್ನಿ ಝರೀನಾ ಮತ್ತು ಮಗಳು ಸಫಾ ಸಿಲುಕಿದ್ದರು. ಕೂಡಲೇ ಸ್ಥಳೀಯರು ಸಂಬಂಧಪಟ್ಟವರಿಗೆ ಮಾಹಿತಿ ರವಾನಿಸಿದ್ದು ಸ್ಥಳಕ್ಕೆ ಎನ್.ಡಿ.ಆರ್.ಎಫ್, ಪೊಲೀಸ್, ಸಿ.ಆರ್.ಎಫ್. , ಅಗ್ನಿಶಾಮಕ ತಂಡ ಆಗಮಿಸಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಆರೋಗ್ಯ ಇಲಾಖೆ ಸಿಬಂದಿ, ಆಂಬುಲೆನ್ಸ್ ಜೊತೆಗೆ ಹಾಜರಿದ್ದು, ಪೂರಕ ವ್ಯವಸ್ಥೆ ಕಲ್ಪಿಸಿದ್ದಾರೆ. ಬೆಳಗ್ಗೆ 8 ಗಂಟೆವರೆಗೆ ರಕ್ಷಣಾ ಕಾರ್ಯಾಚರಣೆ ನಡೆದಿದ್ದು, ಇವರಲ್ಲಿ ಮಹಮ್ಮದ್ ಮತ್ತು ಸಫಾ ಅವರನ್ನು ಸುರಕ್ಷಿತವಾಗಿ ಹೊರಕ್ಕೆ ತರಲಾಗಿದೆ. ಆದರೆ ಝರೀನಾ ಅವರು ಮಣ್ಣಿನಡಿ ಸಿಲುಕಿದ್ದು ಅವರನ್ನು ಹೊರಕ್ಕೆ ತಂದು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಆದರೆ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ ಎಂದು ಬಂಟ್ವಾಳ ತಹಶೀಲ್ದಾರ್ ಎಸ್.ಬಿ.ಕೂಡಲಗಿ ತಿಳಿಸಿದ್ದಾರೆ.