ರಾಮಕುಂಜ: ಮಳೆನೀರು ತೋಟಕ್ಕೆ ನುಗ್ಗಿರುವುದರಿಂದ ತೋಟ ಸಂಪೂರ್ಣ ಜಲಾವೃತಗೊಂಡಿರುವ ಘಟನೆ ಕಡಬ ತಾಲೂಕಿನ ರಾಮಕುಂಜ ಗ್ರಾಮದ ಅಮೈ ಎಂಬಲ್ಲಿ ನಡೆದಿದೆ.
ಕಳೆದ ನಾಲ್ಕೈದು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯ ನೀರು ಅಮೈ ನಿವಾಸಿ ಸುಲೈಮಾನ್ ಎಂಬವರ ಅಡಿಕೆ ತೋಟಕ್ಕೆ ನುಗ್ಗಿದ್ದು, ತೋಟ ಸಂಪೂರ್ಣ ಜಲಾವೃತಗೊಂಡಿದೆ. ಸುಲೈಮಾನ್‌ರವರಿಗೆ ಸೇರಿದ ಸುಮಾರು 70 ಸೆಂಟ್ಸ್ ಜಾಗದಲ್ಲಿ ಅಡಿಕೆ ತೋಟವಿದ್ದು ತೋಟ ಸಂಪೂರ್ಣ ಜಲಾವೃತಗೊಂಡಿದೆ. ಸುಮಾರು 2 ಅಡಿಗೂ ಹೆಚ್ಚು ನೀರು ತೋಟದಲ್ಲಿ ನಿಂತಿದೆ. ಇದರಿಂದ ಅಡಿಕೆ ಗಿಡಗಳು ಹಾನಿಗೊಳ್ಳುವ ಸಾಧ್ಯತೆ ಇದೆ ಎಂದು ಸುಲೈಮಾನ್‌ರವರು ಆತಂಕ ವ್ಯಕ್ತಪಡಿಸಿದ್ದಾರೆ. ಅಲ್ಲದೇ ತೋಟದ ಸಮೀಪದಲ್ಲೇ ಅವರ ಮನೆಯೂ ಇದ್ದು ನೀರು ಮನೆಗೂ ನುಗ್ಗುವ ಸಾಧ್ಯತೆ ಇದೆ ಎಂದಿದ್ದಾರೆ.
ಹರಿದುಹೋಗಿರುವ ನೀರಿಗೆ ತಡೆ:
ಸುಲೈಮಾನ್‌ರವರ ಪಕ್ಕದ ಜಮೀನಿನ ಮಾಲಕರು ಅವರ ಕೃಷಿಭೂಮಿ ಅಭಿವೃದ್ಧಿಯ ವೇಳೆ ಕೃಷಿಭೂಮಿಗೆ ಮಣ್ಣು ಹಾಕಿ ಏರಿಸಿದ್ದಾರೆ. ಈ ವೇಳೆ ಜಮೀನಿನ ಮಧ್ಯೆ ಹರಿದುಹೋಗುತ್ತಿದ್ದ ಕಣಿಗೂ ಮಣ್ಣು ತುಂಬಿಸಿರುವುದರಿಂದ ನೀರು ಹರಿದುಹೋಗದಂತೆ ಆಗಿದೆ. ಅಲ್ಲದೇ ಜಮೀನಿಗೆ ತಡೆಗೋಡೆ ನಿರ್ಮಿಸಿರುವುದರಿಂದ ನೀರು ಹರಿದುಹೋಗಲು ತಡೆಯೊಡ್ಡಿದಂತೆ ಆಗಿದೆ. ಇದರಿಂದಾಗಿ ಮಳೆಯ ನೀರು ಸಂಪೂರ್ಣ ಸುಲೈಮಾನ್‌ರವರ ಅಡಿಕೆ ತೋಟದಲ್ಲಿಯೇ ತುಂಬಿಕೊಂಡಿದ್ದು ತೋಟ ಸಂಪೂರ್ಣ ಜಲಾವೃತಗೊಂಡಿದೆ. ಇದರಿಂದ ಕೃಷಿ ನಾಶವಾಗಲಿದೆ ಎಂದು ಸುಲೈಮಾನ್‌ರವರು ಆತಂಕ ವ್ಯಕ್ತಪಡಿಸಿದ್ದಾರೆ.
ಗ್ರಾ.ಪಂ.ಗೆ ದೂರು:
ಹರಿದುಹೋಗಿರುವ ಮಳೆನೀರಿಗೆ ತಡೆಯೊಡ್ಡಲಾಗಿದೆ ಎಂದು ಆರೋಪಿಸಿ ಸುಲೈಮಾನ್‌ರವರು ರಾಮಕುಂಜ ಗ್ರಾಮ ಪಂಚಾಯತ್‌ಗೆ ದೂರು ನೀಡಿದ್ದಾರೆ. ಗ್ರಾ.ಪಂ.ಅಧ್ಯಕ್ಷೆ ಮಾಲತಿ ಎನ್.ಕೆ., ಉಪಾಧ್ಯಕ್ಷ ಪ್ರಶಾಂತ್ ಆರ್.ಕೆ., ಪಿಡಿಒ ಲಲಿತಾ ಜಿ.ಡಿ.ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಸುಲೈಮಾನ್‌ರವರು ಈ ವಿಚಾರವನ್ನು ತಹಶೀಲ್ದಾರ್ ಅವರ ಗಮನಕ್ಕೂ ತಂದು ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಸಮಸ್ಯೆಗೆ ಪರಿಹಾರ ಸಿಗದೇ ಇದ್ದಲ್ಲಿ ನಮ್ಮ ಕೃಷಿ ನಾಶಗೊಳ್ಳಲಿದ್ದು ನಾವೂ ಆತ್ಮಹತ್ಯೆಯೇ ಮಾಡಿಕೊಳ್ಳಬೇಕಾಗಿದೆ. ಆದ್ದರಿಂದ ಸ್ಥಳ ತನಿಖೆ ನಡೆಸಿ ನ್ಯಾಯ ಒದಗಿಸಿಕೊಡುವಂತೆ ಸುಲೈಮಾನ್‌ರವರು ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.