ಪುತ್ತೂರು;ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್, ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ಹಾಗೂ ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ಪುತ್ತೂರು ಇವುಗಳ ಆಶ್ರಯದಲ್ಲಿ ನವಜೀವನ ಸದಸ್ಯರ ಸಮಾವೇಶ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಜನಜಾಗೃತಿ ವೇದಿಕೆಯ ನೂತನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರ ಕಾರ್ಯಕ್ರಮ ಜು.7ರಂದು ಪುತ್ತೂರು ಪುರಭವನದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ, ಸರಕಾರ ಉಚಿತ ಖಚಿತ ಯೋಜನೆಗಳ ಮೂಲಕ ಜನರನ್ನು ಸೋಮಾರಿಯನ್ನಾಗಿ ಮಾಡುತ್ತದೆ. ಆದರೆ ಗ್ರಾಮಾಭಿವೃದ್ಧಿ ಯೋಜನೆಯ ವಿವಿಧ ಕಾರ್ಯಕ್ರಮಗಳ ಮೂಲಕ ಜನರಿಗೆ ಸ್ವಾವಲಂಬಿ ಬದುಕು ನೀಡುತ್ತಿದೆ. ಮದ್ಯ ವರ್ಜನ ಶಿಬಿರದ ಮೂಲಕ ಮುಕ್ತ ದುಶ್ಚಟ ಸಮಾಜ ನಿರ್ಮಾಣಕ್ಕೆ ನಾಂದಿ ಹಾಡುವ ಕೆಲಸ ಮಾಡಿದ್ದಾರೆ. ಯೋಜನೆಯ ಮೂಲಕ ಶಕ್ತಿವಂತ, ಸಾಮರ್ಥ್ಯ ಸಮಾಜದ ನಿರ್ಮಾಣವಾಗಿದೆ. ಸಮಾಜದಲ್ಲಿ ಅದ್ಬುತ ಪರಿವರ್ತನೆ ತಂದು ಸಾಮಾಜಿಕ ಹೊಸ ಬದುಕಿನ ಕೊಡುಗೆ ನೀಡಿದೆ. ಪ್ರಜಾಪ್ರಭುತ್ವದಲ್ಲಿ ಸರಕಾರ ಮಾಡದಿರುವುದನ್ನು ಧರ್ಮಾಧಿಕಾರಿಯಾಗಿ ವಿರೇಂದ್ರ ಹೆಗ್ಗಡೆಯವರು ಮಾಡಿ ತೋರಿಸುವ ಮೂಲಕ ಮನುಕಲಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. ತನ್ನದೇ ಆದ ಕಾರ್ಯಕ್ರಮಗಳ ಮೂಲಕ ಪಾರಂಪರಿಕತೆಯ ಜೊತೆಗೆ ಆಧುನಿಕ ಜೀವನ ಮಾಡುವುದನ್ನು ತೋರಿಸಿಕೊಟ್ಟಿದ್ದಾರೆ. ಮಾನವ ಜೀವನವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೋಯ್ಯುವ ಕೆಲಸ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕವಾಗಿದೆ ಎಂದರು.
ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿ ಪಾಯಸ್ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ರಾಜ್ಯದ ಹಳ್ಳಿ ಗಳ್ಳಿಯಲ್ಲಿರುವ ಏಕೈಕ ಎನ್‌ಜಿಓ ಆಗಿದೆ. ನವಜೀವನ ಸದಸ್ಯರು ಸಮಿತಿ ಸಂಘಟನೆ ಬಲಿಷ್ಠಗೊಳಿಸಬೇಕು. ಒಬ್ಬ ಸದಸ್ಯ ಕನಿಷ್ಠ 5 ಮಂದಿಯನ್ನು ದುಶ್ಚಟ ಮುಕ್ತಗೊಳಿಸಿದವರಿಗೆ ಜಾಗೃತಿ ಮಿತ್ರ ಪುರಸ್ಕಾರದೊಂದಿಗೆ ರೂ.5000 ನಗದು ನೀಡಿ ಗೌರವಿಸಲಾಗುವುದು. ಸ್ವ ಉದ್ಯೋಗ ನಡೆಸುವ ನವಜೀವನ ಸದಸ್ಯರಿಗೆ ರೂ.5000 ನಗದು ನೀಡಲಾಗುತ್ತಿದೆ ಎಂದರು.
ಉಡುಪಿ ವಿಭಾಗದ ಪ್ರಾದೇಶಿಕ ನಿರ್ದೇಶಕ ದುಗ್ಗೇ ಗೌಡ ಮಾತನಾಡಿ, ವ್ಯಕ್ತಿ ಸಮಾಜದ ಶಕ್ತಿ. ನಮ್ಮಲ್ಲಿ ಕೀಳರಿಮೆ ಬೇಡ. ಮಾನವ ಸಂಪತ್ತು ದೇಶದ ಸಂಪತ್ತು. ಅದರ ಸದ್ಬಳಕೆಯಾಗಬೇಕು. ಇದನ್ನು ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆಯವರು ಯೋಜನೆಯ ಮೂಲಕ ಸಾಕಾರಗೊಳಿಸಿದ್ದಾರೆ. ಜನಜಾಗೃತಿ ವೇದಿಕೆಯು ಧರ್ಮ, ಪಕ್ಷ, ಜಾತ್ಯಾತೀತ ವಾಗಿ ಸಮಾಜದಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದರು.
ಜನಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ಪದ್ಮನಾಭ ಶೆಟ್ಟಿ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಜನಜಾಗೃತಿ ವೇದಿಕೆಯು ರಾಜ್ಯ ಮಟ್ಟದಲ್ಲಿ ವಿಸ್ತಾರವಾಗಿ ಬೆಳೆಯುತ್ತಿದೆ. ದುಶ್ಚಟ ಮುಕ್ತ ಸಮಾಜ ನಿರ್ಮಾಣದಲ್ಲಿ ಜನಜಾಗೃತಿ ವೇದಿಕೆಯು ಪ್ರಮುಖ ಪಾತ್ರ ವಹಿಸುತ್ತಿದೆ. ಸಂಸ್ಥೆ ಬೆಳೆಯುವ ಮೂಲಕ ವ್ಯಕ್ತಿಯನ್ನು ವೇದಿಕೆಯು ಬೆಳೆಸುತ್ತಿದೆ ಎಂದರು.
ಮಾಜಿ ಜಿಲ್ಲಾಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಶೌರ್ಯ ವಿಪತ್ತು ನಿರ್ವಹಣಾ ತಂಡದ ಕಾರ್ಯವು ಉತ್ತಮ ಕಾರ್ಯಕ್ರಮವಾಗಿದೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು.
ನೂತನ ಅಧ್ಯಕ್ಷ ಯು.ಲೋಕೇಶ್ ಹೆಗ್ಡೆ ಮಾತನಾಡಿ, ಸಮಾಜದ ದುಶ್ಚಟದ ವಿರುದ್ಧ ಜನಜಾಗೃತಿಯು ಅರಿವು ಮೂಡಿಸಿ ದೋಷ ಮುಕ್ತ ಸಮಾಜ ನಿರ್ಮಾಣ ಮಾಡುತ್ತಿದೆ. ಆರ್ಥಿಕ ಜೊತೆ ಸಮಾಜದ ಕುಂದು ಕೊರತೆಗಳನ್ನು ನಿವಾರಿಸುವಲ್ಲಿ ಯೋಜನೆಯು ಪ್ರಮುಖ ಪಾತ್ರವಹಿಸಿದೆ. ವೇದಿಕೆಯ ಅಧ್ಯಕ್ಷನಾಗಿ ನಿಯಮ, ನಿಬಂದನೆಗಳಿಗೆ ಒಳಪಟ್ಟು ಕಾರ್ಯನಿರ್ವಹಿಸಲಾಗುವುದು ಎಂದರು.
ಅಧ್ಯಕ್ಷತೆ ವಹಿಸಿದ್ದ ತಾಲೂಕು ಜನ ಜಾಗೃತಿ ವೇದಿಕೆ ತಾಲೂಕು ಅಧ್ಯಕ್ಷ ಮಹಾಬಲ ರೈ ವಳತ್ತಡ್ಕ ಮಾತನಾಡಿ, ಕಳೆದ ನಾಲ್ಕು ವರ್ಷಗಳಲ್ಲಿ ಜನಜಾಗೃತಿ ವೇದಿಕೆಯ ಅಧ್ಯಕ್ಷನಾಗಿ ಉತ್ತಮ ಕಾರ್ಯಕ್ರಮಗಳ ಮೂಲಕ ನವ ಜೀವನ ಸದಸ್ಯರನ್ನು ಬಲಿಷ್ಠಗೊಳಿಸಲು ಪ್ರಯತ್ನ ಮಾಡಿದ್ದೇನೆ. ಇನ್ನು ಮುಂದೆ ಯೋಜನೆಯ ಎಲ್ಲಾ ಕೆಲಸ ಕಾರ್ಯಗಳಲ್ಲಿಯೂ ನಿರಂತರ ಸೇವೆ ನೀಡಲು ತಾನು ಸಿದ್ದನಿರುವುದಾಗಿ ಅವರು ತಿಳಿಸಿದರು.
ಮಾಜಿ ಶಾಸಕಿ ಶಕುಂತಳಾ ಟಿ.ಶೆಟ್ಟಿ, ಜನಜಾಗೃತಿ ವೇದಿಕೆ ಮಾಜಿ ಜಿಲ್ಲಾಧ್ಯಕ್ಷ ಶಶಿ ಕುಮಾರ್ ರೈ ಬಾಲ್ಯೊಟ್ಟು, ತಾಲೂಕು ಮಾಜಿ ಅಧ್ಯಕ್ಷ ದಂಬೆಕಾನ ಸದಾಶಿವ ರೈ, ಜನಜಾಗೃತಿ ವೇದಿಕೆ ಉಪಾಧ್ಯಕ್ಷ ಅರುಣ್ ಕುಮಾರ್ ಪುತ್ತಿಲ, ಕೋಶಾಧಿಕಾರಿ ಪ್ರವೀಣ್ ಚಂದ್ರ ಆಳ್ವ, ಪ್ರಗತಿ ಬಂಧು ಸ್ಚ ಸಹಾಯ ಸಂಘಗಳ ಕೇಂದ್ರ ಒಕ್ಕೂಟದ ಅಧ್ಯಕ್ಷ ಉದಯ ಕುಮಾರ್, ಜನಜಾಗೃತಿ ವೇದಿಕೆಯ ವಿವಿಧ ವಲಯಗಳ ಅಧ್ಯಕ್ಷರಾದ ಪುತ್ತೂರಿನ ಸತೀಶ್ ನಾಯ್ಕ್, ಬನ್ನೂರಿನ ರಾಮಣ್ಣ ಗೌಡ ಗುಂಡೋಲೆ, ಅರಿಯಡ್ಕದ ವಿಕ್ರಂ ರೈ ಸಾಂತ್ಯ, ಕೆದಂಬಾಡಿಯ ಶ್ಯಾಮ್ ಸುಂದರ್ ರೈ, ಕುಂಬ್ರದ ಪ್ರಕಾಶ್ಚಂದ್ರ ರೈ ಕೈಕಾರ, ಉಪ್ಪಿನಂಗಡಿಯ ಲೋಕೇಶ್ ಬೆತ್ತೋಡಿ, ಬೆಟ್ಟಂಪಾಡಿಯ ರವಿ ಕಟೀಲ್ತಡ್ಕ, ಶೌರ್ಯ ವಿಪತ್ತ ನಿರ್ವಹಣಾ ಘಟಕದ ಮುಖ್ಯಸ್ಥ ಜೈವನ್ ಪಟಗಾರ್, ಕ್ಯಾಪ್ಟನ್‌ಗಳಾದ ಮನೋಜ್ ಸುವರ್ಣ, ಸುರೇಶ್, ಜನಜಾಗೃತಿ ವೇದಿಕೆ ಯೋಜನಾಧಿಕಾರಿ ಗಣೇಶ್, ಜನ ಜಾಗೃತಿ ವೇದಿಕೆ ಕಡಬ ತಾಲೂಕು ಅಧ್ಯಕ್ಷ ಮಹೇಶ್ ಸವಣೂರು, ಸುಳ್ಯ ತಾಲೂಕು ಅಧ್ಯಕ್ಷ ಲೋಕನಾಥ ಅಮೆಚ್ಚೂರು, ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸನ್ಮಾನ:
ರಾಜ್ಯ ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತರಾಗಿರುವ ತಾಲೂಕು ಮಾಜಿ ಅಧ್ಯಕ್ಷ ದಂಬೆಕಾನ ಸದಾಶಿವ ರೈ, ಜನ ಜಾಗೃತಿ ವೇದಿಕೆ ನಿಕಟಪೂರ್ವ ಅಧ್ಯಕ್ಷ ಮಹಾಬಲ ರೈ ವಳತ್ತಡ್ಕರವರನ್ನು ಸನ್ಮಾನಿಸಲಾಯಿತು. ನವಜೀವನ ಸದಸ್ಯರಾದ ಗೋಪಾಲ ಆನೆಮಜಲು, ಚಂದ್ರಶೇಖರ ರೈ, ನೇಮಣ್ಣ ಗೌಡ, ಕುಂಞಣ್ಣ ನಾಯ್ಕ, ಪ್ರಭಾಕರ ಗೌಡ, ಗೋಪಾಲಕೃಷ್ಣ, ಸುರೇಶ ಪೂಜಾರಿ, ವಿಠಲ ಪೂಜಾರಿ ಹಾಗೂ ಐತ್ತಪ್ಪರವರನ್ನು ಗೌರವಿಸಲಾಯಿತು. ರಾಜ್ಯದಲ್ಲಿ 23ನೇ ಸ್ಥಾನ ಹಾಗೂ ತಾಲೂಕಿನಲ್ಲಿ ಪ್ರಥಮ ಸ್ಥಾನ ಪಡೆದ ಬಲ್ನಾಡು ಶೌರ್ಯ ವಿಪತ್ತು ತಂಡ, ತಾಲೂಕಿನಲ್ಲಿ ದ್ವಿತೀಯ ಸ್ಥಾನ ಪಡೆದ ಬೆಟ್ಟಂಪಾಡಿ ತಂಡ ಹಾಗೂ ತೃತೀಯ ಸ್ಥಾನ ಪಡೆದ ಕುಂಬ್ರ ತಂಡವನ್ನು ಗೌರವಿಸಲಾಯಿತು.
ಜವಾಬ್ದಾರಿ ಹಸ್ತಾಂತರ:
ಜನಜಾಗೃತಿ ವೇದಿಕೆ ಅಧ್ಯಕ್ಷ ಮಹಾಬಲ ರೈ ವಳತ್ತಡ್ಕರವರು ನೂತನ ಅಧ್ಯಕ್ಷ ಲೋಕೇಶ್ ಹೆಗ್ಡೆ ಹಾಗೂ ವಲಯಲಾಧ್ಯಕ್ಷರಿಗೆ ಜವಾಬ್ದಾರಿ ಹಸ್ತಾಂತರ ಮಾಡಿದರು. ಜನಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ಪದ್ಮನಾಭ ಶೆಟ್ಟಿ ಜವಾಬ್ದಾರಿ ಹಸ್ತಾಂತರ ನಡೆಸಿದರು.
ಸಂಪೂರ್ಣ ಸುರಕ್ಷಾ ಯೋಜನೆಯಲ್ಲಿ ದೊಡ್ಡಡ್ಕದ ರತ್ನಾವತಿ, ಉಪ್ಪಳಿಗೆ ಮಮತಾ ಹಾಗೂ ರಘುನಾಥ ಪಾಟಾಳಿಯವರಿಗೆ ಚೆಕ್ ವಿತರಣೆ, ಜನಮಂಗಲ ಕಾರ್ಯಕ್ರಮದಲ್ಲಿ ಕೃಷ್ಣಪ್ಪ ನಾಯ್ಕರವರಿಗೆ ವ್ಹೀಲ್ ಚೆಯರ್, ಸುಜ್ಞಾನ ನಿಧಿ ಯೋಜನೆಯಲ್ಲಿ ಮೊನಿಷಾ, ಧನ್ಯತಾ ಹಾಗೂ ಮೋಕ್ಷಿತಾರವರಿಗೆ ಆದೇಶ ಪತ್ರ ವಿತರಿಸಲಾಯಿತು.
ಸತ್ಯನಾರಾಯಣ ಪೂಜೆ:
ಕಾರ್ಯಕ್ರಮದ ಪ್ರಾರಂಭದಲ್ಲಿ ಅರ್ಚಕ ಉದಯನಾರಾಯಣ ಕಲ್ಲೂರಾಯರವರ ನೇತೃತ್ವದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ನೆರವೇರಿತು.
ಜಿಲ್ಲಾ ನಿರ್ದೇಶಕ ಪ್ರವೀಣ್ ಕುಮಾರ್ ಸ್ವಾಗತಿಸಿದರು. ತಾಲೂಕು ಯೋಜನಾಧಿಕಾರಿ ಶಶಿಧರ್ ವರದಿ ವಾದಿಸಿದರು. ಕೃಷಿ ಅಧಿಕಾರಿ ಉಮೇಶ್ ಕಾರ್ಯಕ್ರಮ ನಿರೂಪಿಸಿದರು. ಪುತ್ತೂರು ವಲಯ ಮೇಲ್ವಿಚಾರಕಿ ಶ್ರುತಿ ವಂದಿಸಿದರು.