ಧೈರ್ಯವಾಗಿದೂರು ನೀಡಿ:ಈ ರೀತಿ ಹಣಕ್ಕಾಗಿ ಪೀಡಿಸುತ್ತಿರುವ ಪ್ರಕರಣಗಳಿದ್ದಲ್ಲಿ ನೊಂದವರು ಧೈರ್ಯವಾಗಿ ಮುಂದೆ ಬಂದು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿ.ಈ ಕುರಿತ ಮಾಹಿತಿಯನ್ನು ಗೌಪ್ಯವಾಗಿಡುವ ಜೊತೆಗೆ ತಪ್ಪಿತಸ್ಥರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮಕೈಗೊಳ್ಳಲಾಗುವುದು
-ಸಿ.ಎ.ಸೈಮನ್, ಎಸ್ಪಿ
ಕರ್ನಾಟಕ ಲೋಕಾಯುಕ್ತ ಮಂಗಳೂರು
ಮಂಗಳೂರು:ಜುಲೈ 31ರಂದು ವಯೋನಿವೃತ್ತಿ ಹೊಂದುತ್ತಿರುವ ಶಿಕ್ಷಕಿಯೋರ್ವರ ಪಿಂಚಣಿ ಉಪದಾನ ದಾಖಲೆ ಪತ್ರಗಳಿಗೆ ಸಹಿ ಮಾಡಲು 5 ಲಕ್ಷ ರೂ.ಲಂಚ ಸ್ವೀಕರಿಸುತ್ತಿದ್ದ ಶಾಲಾ ಸಂಚಾಲಕಿಯನ್ನು ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಪೊಲೀಸರು ಬಂಧಿಸಿರುವ ಘಟನೆ ವರದಿಯಾಗಿದೆ.
ಮಂಗಳೂರು ಹೊರವಲಯದ ಬಜ್ಪೆಯ ಶ್ರೀ ನಿರಂಜನ ಸ್ವಾಮಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಸಂಚಾಲಕಿ ಜ್ಯೋತಿ ಪೂಜಾರಿ ಲೋಕಾಯಕ್ತ ಬಲೆಗೆ ಬಿದ್ದ ಆರೋಪಿ.ಅದೇ ಶಾಲೆಯಲ್ಲಿ ಶಿಕ್ಷಕಿಯಾಗಿ, ಮುಖ್ಯ ಶಿಕ್ಷಕಿಯಾಗಿ ಸುಮಾರು 42 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಶೋಭಾರಾಣಿ ಅವರು ಜು.31ರಂದು ವಯೋ ನಿವೃತ್ತಿ ಹೊಂದಲಿದ್ದು, ತನ್ನ ನಿವೃತ್ತಿ ಪಿಂಚಣಿ ಉಪದಾನ ದಾಖಲೆ ಪತ್ರಗಳಿಗೆ ಸಹಿ ಹಾಕಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಕಳುಹಿಸುವಂತೆ ಅವರು ಶಾಲಾ ಸಂಚಾಲಕಿ ಶ್ರೀಮತಿ ಜ್ಯೋತಿ ಎನ್.ಪೂಜಾರಿಯವರಿಗೆ ಮನವಿ ಪತ್ರದೊಂದಿಗೆ ವಿನಂತಿಸಿ, ಸ್ವೀಕೃತಿ ಪತ್ರ ನೀಡುವಂತೆ ಕೋರಿದ್ದರು.
ಈ ಕುರಿತು ಶಾಲಾ ಸಂಚಾಲಕರಾದ ಜ್ಯೋತಿ ಎನ್.ಪೂಜಾರಿಯವರು 20 ಲಕ್ಷ ರೂ. ಹಣವನ್ನು ಲಂಚವಾಗಿ ಕೇಳಿದ್ದರು ಎಂದು ಶೋಭಾರಾಣಿಯವರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.ಜು.5ರಂದು ಶ್ರೀಮತಿ ಜ್ಯೋತಿ ಎನ್.ಪೂಜಾರಿಯವರು ಶಿಕ್ಷಕಿ ಶ್ರೀಮತಿ ಶೋಭಾರಾಣಿಯವರಿಂದ 5 ಲಕ್ಷ ರೂ.ಲಂಚದ ಹಣವನ್ನು ಸ್ವೀಕರಿಸುತ್ತಿದ್ದಾಗ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು ರೆಡ್ ಹ್ಯಾಂಡ್ ಆಗಿ ಅವರನ್ನು ಬಂಧಿಸಿದ್ದಾರೆ.ಲೋಕಾಯುಕ್ತ ಮಂಗಳೂರು ಎಸ್ಪಿ ಸಿ.ಎ.ಸೈಮನ್ ಅವರ ಮಾರ್ಗದರ್ಶನದಲ್ಲಿ ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯ ಪೊಲೀಸ್ ಉಪಾಧೀಕ್ಷಕರುಗಳಾದ ಶ್ರೀಮತಿ ಕಲಾವತಿ ಕೆ.,ಚಲುವರಾಜು ಬಿ.,ಪೊಲೀಸ್ ನಿರೀಕ್ಷಕರಾದ ವಿನಾಯಕ ಬಿಲ್ಲವ ಇವರು ಸಿಬ್ಬಂದಿಗಳ ಜೊತೆ ಈ ಕಾರ್ಯಾಚರಣೆ ನಡೆಸಿದ್ದರು.