ಉಪ್ಪಿನಂಗಡಿ: ಕೊಚ್ಚಿ ಹೋಗುತ್ತಿರುವ ಕ್ರೀಡಾಂಗಣಕ್ಕೆ ಇಒ ಭೇಟಿ: ಕ್ರಮದ ಭರವಸೆ

0

ಸುದ್ದಿ ಬಿಡುಗಡೆ ವರದಿಯ ಫಲಶೃತಿ

ಉಪ್ಪಿನಂಗಡಿ: ಕಣಿಯ ವ್ಯವಸ್ಥೆ ಇರದೇ ಮಳೆ ನೀರಿನೊಂದಿಗೆ ಮಣ್ಣು ಕೊಚ್ಚಿಕೊಂಡು ಹೋಗಿ ಹಾಳಾಗುತ್ತಿದ್ದ ಉಪ್ಪಿನಂಗಡಿಯ ಪ್ರಥಮ ದರ್ಜೆ ಕಾಲೇಜಿನ ಲಕ್ಷಾಂತರ ರೂ. ವೆಚ್ಚದ ನೂತನ ಕ್ರೀಡಾಂಗಣವನ್ನು ತಾ.ಪಂ. ಇಒ ಅವರು ಜು.7ರಂದು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅದಕ್ಕೆ ಕಣಿಯ ವ್ಯವಸ್ಥೆ ಮಾಡಲು ಸೂಚನೆ ನೀಡಿದ್ದಾರೆ. ಮೈದಾನವು ಹಾಳಾಗುತ್ತಿರುವ ಬಗ್ಗೆ ಜು.7ರ ಸುದ್ದಿ ಬಿಡುಗಡೆ ಪತ್ರಿಕೆಯಲ್ಲಿ ವರದಿ ಪ್ರಕಟವಾಗಿದ್ದು, ಅದರ ಬೆನ್ನಲ್ಲೇ ಅಧಿಕಾರಿಗಳು ಇದಕ್ಕೆ ವ್ಯವಸ್ಥೆ ಕಲ್ಪಿಸುವ ಮೂಲಕ ವರದಿಗೆ ಫಲಶೃತಿ ದೊರಕಿದಂತಾಗಿದೆ.


ಕಳೆದ ವರ್ಷ ರಾಷ್ಟ್ರಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟ ಈ ಕಾಲೇಜಿನಲ್ಲಿ ಆಯೋಜಿಸಲಾಗಿದ್ದು, ಇದಕ್ಕಾಗಿ ಶಾಸಕರ, ದಾನಿಗಳ, ಇಲಾಖಾ ಅನುದಾನ ಹೀಗೆ ಎಲ್ಲಾ ಕಡೆಯಿಂದ ಸಹಕಾರ ಪಡೆದು ಗುಡ್ಡದಂತಹ ಪ್ರದೇಶವನ್ನು ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಉತ್ತಮವಾದ ಕ್ರೀಡಾಂಗಣವನ್ನಾಗಿ ಮಾಡಲಾಗಿತ್ತು. ಆದರೆ ಕೆಲವು ದಿನಗಳ ಹಿಂದೆ ಸುರಿದ ಮಳೆಗೆ ಕ್ರೀಡಾಂಗಣದ ಸುತ್ತ ಕಣಿಯ ವ್ಯವಸ್ಥೆ ಮಾಡದ್ದರಿಂದ ಕ್ರೀಡಾಂಗಣದ ಮಣ್ಣು ಕೊಚ್ಚಿ ಹೋಗಲು ಆರಂಭವಾಗಿತ್ತು. ಗ್ರಾ.ಪಂ. ಸದಸ್ಯರು, ಜನಪ್ರತಿನಿಧಿಗಳು, ಕಾಲೇಜಿನ ಪ್ರಾಚಾರ್ಯರು, ದೈಹಿಕ ಶಿಕ್ಷಣ ನಿರ್ದೇಶಕರು, ಪ್ರಮುಖರನ್ನೊಳಗೊಂಡ ವಾಟ್ಸಫ್ ಗ್ರೂಫ್‌ನಲ್ಲಿ ಈ ಬಗ್ಗೆ ಸಾಮಾಜಿಕ ಕಾರ್ಯಕರ್ತ ಕೈಲಾರು ರಾಜಗೋಪಾಲ ಭಟ್ ಅವರು ಜೂ. 23ರಂದೇ ಮಾಹಿತಿ ಹಂಚಿಕೊಂಡಿದ್ದರಲ್ಲದೆ, ಹೀಗೆ ಆದಲ್ಲಿ ಮುಂದೆ ಮೈದಾನದ ಲೋಡ್‌ಗಟ್ಟಲೆ ಮಣ್ಣೆಲ್ಲಾ ಕೊಚ್ಚಿ ಹೋಗಲಿದೆ ಎಂದು ಎಚ್ಚರಿಸಿದ್ದರು. ಆದರೆ ಯಾರಿಂದಲೂ ಅದಕ್ಕೆ ಸ್ಪಂದನೆ ಬಂದಿರಲಿಲ್ಲ. ಈಗ ಸುರಿಯುತ್ತಿರುವ ಮಳೆಗೆ ಮತ್ತಷ್ಟು ಮಣ್ಣು ಕೊಚ್ಚಿಕೊಂಡು ಹೋಗಿದ್ದು, ಅಲ್ಲೇ ಪಕ್ಕದ ಯಶೋಧರ ಅವರ ತೋಟದಲ್ಲಿ ಅಳವಡಿಸಿರುವ ಮೋರಿಯಲ್ಲಿ ಮಣ್ಣು ನಿಂತು ಅವರ ತೋಟ ಕೃತಕ ನೆರೆಗೆ ತುತ್ತಾಗುವಂತಾಯಿತು. ಈ ಬಗ್ಗೆ ಜು.೭ರ ಸುದ್ದಿ ಬಿಡುಗಡೆ ಪತ್ರಿಕೆಯಲ್ಲಿ ಈ ಬಗ್ಗೆ ವರದಿ ಪ್ರಕಟ ಮಾಡಿದ್ದು, ಅದೇ ದಿನ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲದೇ, ಕ್ರೀಡಾಂಗಣದ ಸುತ್ತಲೂ ಕಣಿಯ ವ್ಯವಸ್ಥೆ ಮಾಡಲು ಸೂಚಿಸಿದ್ದಾರೆ. ಯಶೋಧರ ಅವರ ತೋಟದಲ್ಲಿ ಬಿದ್ದ ಮಣ್ಣನ್ನು ಗ್ರಾ.ಪಂ. ತೆರವುಗೊಳಿಸಲು ಮುಂದಾಗಿದೆ. ಈ ಸಂದರ್ಭ ಉಪ್ಪಿನಂಗಡಿ ಗ್ರಾ.ಪಂ. ಪಿಡಿಒ ವಿಲ್ಫ್ರೆಡ್ ಲಾರೆನ್ಸ್ ರೊಡ್ರಿಗಸ್, ಗ್ರಾಮ ಲೆಕ್ಕಾಧಿಕಾರಿ ರಮೇಶ, ಕಾಲೇಜಿನ ಪ್ರಾಚಾರ್ಯ ಪ್ರೊ. ಸುಬ್ಬಪ್ಪ ಕೈಕಂಬ, ಪಿಡಿ ಪ್ರವೀಣ್ ಕುಡಮರ, ಗ್ರಾಮ ಸಹಾಯಕ ಯತೀಶ ಮಡಿವಾಳ, ಗ್ರಾ.ಪಂ. ಸದಸ್ಯರಾದ ತೌಸೀಫ್ ಯು.ಟಿ., ವಿದ್ಯಾಲಕ್ಷ್ಮಿ ಪ್ರಭು, ಸಾಮಾಜಿಕ ಕಾರ್ಯಕರ್ತ ಕೈಲಾರು ರಾಜಗೋಪಾಲ ಭಟ್, ಯಶೋಧರ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here