ಪುತ್ತೂರು: ಬಿಜೆಪಿ ಸರಕಾರ ಇರುವಾಗಲೇ ಬಿಜೆಪಿ ಸರಕಾರದ ಸಮನ್ವಯ ಸಮಿತಿಯವರು ಪರಿಷ್ಕೃತ ಮಾರ್ಗಸೂಚಿಯಲ್ಲಿ ಹವಾಮಾನ ಬೆಳೆ ವಿಮೆ ಯೋಜನೆಗೆ ಅನುಮೋದನೆ ನೀಡಿಲ್ಲ. ತಂತ್ರಾಂಶದಲ್ಲೂ ಈ ಯೋಜನೆ ಕಾಣಿಸುತ್ತಿಲ್ಲ. ಅದನ್ನು ಬ್ಲಾಕ್ ಮಾಡಲಾಗಿದೆ. ಈ ಸಮಸ್ಯೆ ಕುರಿತು ಶಾಸಕರು ಗೊಂದಲಕಾರಿ ಹೇಳಿಕೆ ನೀಡಿದ್ದಾರೆಂದು ಮಾಜಿ ಶಾಸಕರು ಆರೋಪ ಮಾಡುವುದು ಸರಿಯಲ್ಲ ಎಂದು ಆರ್ಯಾಪು ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ, ಪುತ್ತೂರು ನಗರ ಕಾಂಗ್ರೆಸ್ ಅಧ್ಯಕ್ಷರೂ ಆಗಿರುವ ಹೆಚ್.ಮಹಮ್ಮದ್ ಆಲಿ ಹೇಳಿದ್ದಾರೆ.
ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರ ಸರಕಾರವು ಫಸಲ್ ಭಿಮಾ ಯೋಜನೆಯಲ್ಲಿ ಭತ್ತದ ಬೆಳೆ ಮತ್ತು ವಾಣಿಜ್ಯ ಬೆಳೆಗಳಿಗಾಗಿ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ ಜಾರಿಗೊಳಿಸಿತ್ತು. ಅಡಿಕೆ ಮತ್ತು ಕರಿ ಮೆಣಸು ಬೆಳೆಗೆ ಹವಾಮಾನ ವಿಮಾ ಯೋಜನೆಯಲ್ಲಿ ಅವಕಾಶ ಕಲ್ಪಿಸಲಾಗಿತ್ತು. ಆದರೆ ಹಿಂದಿನ ಬಿಜೆಪಿ ಸರಕಾರವಿದ್ದ ಸಂದರ್ಭದಲ್ಲಿ ಫೆ.6ರಂದು ನಡೆದ ರಾಜ್ಯ ಮಟ್ಟದ ಬೆಳೆ ವಿಮಾ ಸಮನ್ವಯ ಸಮಿತಿ ಸಭೆಯಲ್ಲಿ ರಾಜ್ಯದಲ್ಲಿ ಕೇಂದ್ರ ಸರಕಾರದ ಪರಿಷ್ಕೃತ ಮಾರ್ಗಸೂಚಿಯನ್ವಯ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯನ್ನು ಮಾತ್ರ ಅನುಷ್ಠಾನಗೊಳಿಸಲು ಅನುಮೋದನೆ ನೀಡಿ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಗೆ ಅನುಮೋದನೆ ನೀಡದೆ ಕೈ ಬಿಟ್ಟಿತ್ತು. ಇದರಿಂದಾಗಿ ನಮ್ಮ ಜಿಲ್ಲೆಯ ಅಡಿಕೆ ಮತ್ತು ಕರಿಮೆಣಸು ಬೆಳೆಯುವ ರೈತರಿಗೆ ಅನ್ಯಾಯ ಆಗಿದೆ ಎಂದು ತಿಳಿದ ಈಗಿನ ಶಾಸಕ ಅಶೋಕ್ ಕುಮಾರ್ ರೈಯವರು ಸಂಬಂಧಪಟ್ಟ ಸಚಿವರ ಗಮನಕ್ಕೆ ತಂದು ಅಡಿಕೆ ಮತ್ತು ಕರಿಮೆಣಸು ಬೆಳೆಗೂ ವಿಮಾ ಯೋಜನೆ ಸೌಲಭ್ಯ ಒದಗಿಸಲು ಪ್ರಯತ್ನ ಮಾಡಿದ್ದಾರೆ. ಅಶೋಕ್ ಕುಮಾರ್ ರೈಯವರ ಈ ಪ್ರಯತ್ನವನ್ನು ಜಿಲ್ಲೆಯ ರೈತರು ಶ್ಲಾಘಿಸಿದಾಗ ಮಾಜಿ ಶಾಸಕ ಸಂಜೀವ ಮಠಂದೂರು ಅವರಿಗೆ ಹೊಟ್ಟೆನೋವಾಗಿ ಶಾಸಕ ಅಶೋಕ್ ಕುಮಾರ್ ರೈ ಅವರು ಗೊಂದಲಕಾರಿ ಹೇಳಿಕೆ ನೀಡಿರುವುದಾಗಿ ಆರೋಪಿಸಿದ್ದಾರೆ. ಆದರೆ ಕಳೆದ 5 ವರ್ಷಗಳಿಂದ ಶಾಸಕರಾಗಿದ್ದ ಸಂಜೀವ ಮಠಂದೂರು ಅವರಿಗೆ ಅವರ ಬಿಜೆಪಿ ಸರಕಾರ ಮತ್ತು ಅವರೇ ಶಾಸಕರಾಗಿದ್ದ ಸಂದರ್ಭದಲ್ಲೇ ಸಮನ್ವಯ ಸಮಿತಿಯಲ್ಲಿ ಈ ಯೋಜನೆ ಕೈ ಬಿಡಲಾಗಿದೆ ಎಂಬುದು ಗೊತ್ತಿಲ್ಲ. ಅದಲ್ಲದೆ ವಿಮಾ ತಂತ್ರಾಂಶದಲ್ಲೂ ಈ ಯೋಜನೆ ಕಾಣಿಸುತ್ತಿಲ್ಲ. ಅದನ್ನು ಬ್ಲಾಕ್ ಮಾಡಲಾಗಿದೆ. ಹಾಗಾಗಿ ಈ ಯೋಜನೆಯ ಬಗ್ಗೆ ಮಾಜಿ ಶಾಸಕರಿಗೆ ಸರಿಯಾದ ಜ್ಞಾನವಿಲ್ಲ ಎಂಬುದು ಅವರ ಹೇಳಿಕೆಯಲ್ಲೇ ಗೊತ್ತಾಗಿದೆ ಎಂದರು.
ಫಸಲ್ ಭೀಮಾ ಯೋಜನೆ ಮತ್ತು ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ 2018ರಲ್ಲಿ ಅನುಷ್ಠಾನಗೊಂಡಿದೆ. ಆದರೆ ಸಂಜೀವ ಮಠಂದೂರು ಅವರು 3 ವರ್ಷದ ಹಿಂದೆ ಈ ಯೋಜನೆ ಜಾರಿಗೆ ಬಂದಿದೆ ಎಂದು ಹೇಳಿರುವುದು ಅವರಿಗೆ ಇನ್ನೂ ಜ್ಞಾನೋದಯವಾಗಿಲ್ಲ ಎಂಬುದು ಸ್ಪಷ್ಟವಾಗಿದೆ ಎಂದು ಆಲಿಯವರು ನಾವೆಲ್ಲ ಸೇರಿ ರಾಜಕೀಯ ರಹಿತವಾಗಿ ನಮ್ಮ ಜಿಲ್ಲೆಯ ರೈತರಿಗೆ ತೊಂದರೆ ಆಗುವುದನ್ನು ಸರಿಪಡಿಸುವ ಎಂದರು.
ವಿಮಾ ಯೋಜನೆಯಲ್ಲಿ ರಾಜ್ಯ ಸರಕಾರದ ಪಾಲು ಇದೆ ಎಂದು ಹೇಳಿದ ಆಲಿಯವರು ರಾಜ್ಯದ ರೈತರಿಗೆ ಶೂನ್ಯ ಬಡ್ಡಿದರಲ್ಲಿ ರೂ. 3ಲಕ್ಷ ಕೃಷಿ ಸಾಲ ನೀಡುವ ಯೋಜನೆ ಜಾರಿಗೆ ತಂದದ್ದೇ ಸಿದ್ದರಾಮಯ್ಯ ಅವರು ಆದರೆ ಮಠಂದೂರು ಅವರು ಇದನ್ನು ಬಿಜೆಪಿ ಸರಕಾರ ಜಾರಿಗೆ ತಂದದ್ದು ಎಂದು ಸುಳ್ಳು ಹೇಳಿಕೆ ನೀಡುತ್ತಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈ, ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಾಜಾರಾಮ್ ಕೆ.ಬಿ., ಮುಂಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷ ಯಾಕೂಬ್ ಮುಲಾರು, ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಉಪಸ್ಥಿತರಿದ್ದರು.