ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಸ್ವರ್ಣದ ಸದಸ್ಯ, ನ್ಯಾಯವಾದಿ, ನೋಟರಿಯೂ ಆಗಿರುವ ಕೆ. ಭಾಸ್ಕರ ಕೋಡಿಂಬಾಳ, 2023-24ನೇ ಸಾಲಿಗೆ ರೋಟರಿ ಜಿಲ್ಲೆ 3181, ವಲಯ 5ರ ಸೇನಾನಿಯಾಗಿ ಆಯ್ಕೆಯಾಗಿರುತ್ತಾರೆ.
ಮಂಗಳೂರಿನ ಎಸ್.ಡಿ.ಎಂ. ಕಾನೂನು ಮಹಾವಿದ್ಯಾಲಯದಲ್ಲಿ ಕಾನೂನು ಪದವಿಯನ್ನು ಪಡೆದ ಇವರು, ಪುತ್ತೂರಿನಲ್ಲಿ ಹಿರಿಯ ವಕೀಲರಾಗಿದ್ದ ದಿ. ಅಂಬೆಕಲ್ಲು ರಾಧಾಕೃಷ್ಣ ಗೌಡರ ಕಚೇರಿಯಲ್ಲಿ ಕಿರಿಯ ವಕೀಲನಾಗಿ ವೃತ್ತಿಯನ್ನು ಆರಂಭಿಸಿ, ಬಳಿಕ ಸ್ವಂತ ಕಚೇರಿಯನ್ನು ಹೊಂದಿಕೊಂಡು ವೃತ್ತಿಯನ್ನು ಮುಂದುವರೆಸಿಕೊಂಡು ಬರುತ್ತಿದ್ದಾರೆ.
ಕರ್ನಾಟಕ ಸರಕಾರದ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು, ಇದರ ನಿರ್ದೇಶಕರಾಗಿ, ಪುತ್ತೂರು ತಾಲೂಕು ವಕೀಲರ ಸಂಘದ ಅಧ್ಯಕ್ಷರಾಗಿ, ರೋಟರಿ ಕ್ಲಬ್ ಪುತ್ತೂರು ಸ್ವರ್ಣ, ಇದರ ಅಧ್ಯಕ್ಷರಾಗಿ ಈ ಹಿಂದೆ ಸೇವೆಯನ್ನು ಸಲ್ಲಿಸಿದ್ದರು. ಪ್ರಕೃತ ಪುತ್ತೂರು ತಾಲೂಕು ಒಕ್ಕಲಿಗ ಗೌಡ ಸಮುದಾಯದ ನ್ಯಾಯ ತೀರ್ಮಾನ ಸಮಿತಿಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಮದ್ಯಪಾನದ ದುಷ್ಪರಿಣಾಮಗಳ ಕುರಿತು ಜನ ಜಾಗೃತಿ ಮೂಡಿಸುವ ಹೆಣದೂರು ಎಂಬ ಬೀದಿ ನಾಟಕ ಹಾಗೂ ಕೋಮು ಸಾಮರಸ್ಯ ಸಂದೇಶ ಸಾರುವ ಕೆಂಪು ಕಾಡು ಎಂಬ ಬೀದಿ ನಾಟಕಗಳನ್ನು ನಿರ್ಮಾಣ ಮಾಡಿ, ಅದರ ನಲುವತ್ತಕ್ಕೂ ಮಿಕ್ಕಿದ ಪ್ರದರ್ಶನಗಳನ್ನು ಶ್ರವಣರಂಗ ಪ್ರತಿಷ್ಠಾನ ಸವಣೂರು, ಇದರ ಸದಸ್ಯ ಕಲಾವಿದ ಶಿಕ್ಷಕರ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ನೀಡಿರುತ್ತಾರೆ. ವೃತ್ತಿಯಲ್ಲಿ ವಕೀಲರಾಗಿದ್ದುಕೊಂಡು, ಸಾಹಿತ್ಯ ಮತ್ತು ಸಮಾಜ ಸೇವೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡ ಇವರು ಈಗಾಗಲೇ ಬುತ್ತಿಯೂಟ ಎಂಬ ಕೃತಿಯೊಂದನ್ನು ಹೊರತಂದಿದ್ದಾರೆ.
ಇವರ ಪತ್ನಿ ಶುಭಲತಾ ಕೆ., ಶಿಕ್ಷಕಿಯಾಗಿದ್ದು, ಜಯವರ್ಧನ್ ಕೆ.ಬಿ. ಮತ್ತು ಹರ್ಷವರ್ಧನ ಕೆ.ಬಿ. ಎಂಬ ಈರ್ವರು ಮಕ್ಕಳೊಂದಿಗೆ ಬನ್ನೂರಿನ ಜೋಡುಕಟ್ಟೆ ಎಂಬಲ್ಲಿ ವಾಸ್ತವ್ಯವಿದ್ದಾರೆ.