ಹಲ್ಲಿನ ಆರೋಗ್ಯ ಕಾಪಾಡಿಕೊಳ್ಳಿ-ಡಾ.ಸೀತಾರಾಮ ಭಟ್
ಪುತ್ತೂರು: ಶ್ರೀ ಷಣ್ಮುಖ ಯುವಕ ಮಂಡಲ ಸರ್ವೆ ಮತ್ತು ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠ ಕಲ್ಲಮ ಇದರ ನೇತೃತ್ವದಲ್ಲಿ ಕೆವಿಜಿ ಡೆಂಟಲ್ ಕಾಲೇಜು ಮತ್ತು ಆಸ್ಪತ್ರೆ ಸುಳ್ಯ ಇದರ ಸಹಯೋಗದಲ್ಲಿ ಉಚಿತ ದಂತ ಚಿಕಿತ್ಸಾ ಶಿಬಿರ ಜು.9ರಂದು ಕಲ್ಲಮ ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠದಲ್ಲಿ ನಡೆಯಿತು.
ಸಭಾ ಕಾರ್ಯಕ್ರಮ ಉದ್ಘಾಟಿಸಿದ ಕಲ್ಲಮ ಶ್ರೀ ಗುರು ರಾಘವೇಂದ್ರ ಮಠದ ವ್ಯವಸ್ಥಾಪಕರಾದ ಡಾ.ಸೀತಾರಾಮ ಭಟ್ ಮಾತನಾಡಿ ರಾಘವೇಂದ್ರ ಮಠ ಹಾಗೂ ಯುವಕ ಮಂಡಲದ ನೇತೃತ್ವದಲ್ಲಿ ಸಮಾಜಕ್ಕೆ ಉತ್ತಮವೆನಿಸಿದ ಕಾರ್ಯಕ್ರಮ ಆಯೋಜನೆಗೊಂಡಿದ್ದು ಊರ ಜನರು ಇದರ ಸದುಪಯೋಗಪಡಿಸಿಕೊಂಡು ಹಲ್ಲಿನ ಆರೋಗ್ಯ ಕಾಪಾಡಿಕೊಳ್ಳಿ ಎಂದು ಹೇಳಿ ಶುಭ ಹಾರೈಸಿದರು.
ಸರ್ವೆ ಶ್ರೀ ಷಣ್ಮುಖ ಯುವಕ ಮಂಡಲದ ಅಧ್ಯಕ್ಷ ಗೌತಮ್‌ರಾಜ್ ಕರುಂಬಾರು ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಸುಳ್ಯ ಕೆವಿಜಿ ದಂತ ಮಹಾ ವಿದ್ಯಾಲಯ ಮತ್ತು ಆಸ್ಪತ್ರೆಯ ದಂತ ತಜ್ಞರಾದ ಡಾ. ಶಿವಾನಂದ ಷಣ್ಮುಖ ಯುವಕ ಮಂಡಲದ ಗೌರವ ಸಲಹೆಗಾರರಾದ ಶಶಿಧರ್ ಎಸ್.ಡಿ, ವೀರಪ್ಪ ಗೌಡ ಕರುಂಬಾರು, ಶ್ರೀನಿವಾಸ್ ಎಚ್.ಬಿ, ಕೆವಿಜಿ ದಂತ ಮಹಾವಿದ್ಯಾಲಯದ ದಂತ ವೈದ್ಯೆ ಡಾ.ಮೇಘಶ್ರೀ ಉಪಸ್ಥಿತರಿದ್ದರು. ಷಣ್ಮುಖ ಯುವಕ ಮಂಡಲದ ಪ್ರ.ಕಾರ್ಯದರ್ಶಿ ಮನೋಜ್ ಕುಮಾರ್ ಸೊರಕೆ ಸ್ವಾಗತಿಸಿದರು. ಜೊತೆ ಕಾರ್ಯದರ್ಶಿ ಚಿರಾಗ್ ರೈ ವಂದಿಸಿದರು. ಕಾರ್ಯಕಾರಿ ಸಮಿತಿ ಸಂಚಾಲಕ ರಾಮಣ್ಣ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ಸುಮಾರು 50 ಮಂದಿ ಯೋಜನೆಯ ಪ್ರಯೋಜನ ಪಡೆದುಕೊಂಡರು.
ಸಮಾಜಕ್ಕೆ ಅರ್ಥಪೂರ್ಣ ಸಂದೇಶ:
ಗ್ರಾಮೀಣ ಭಾಗದ ಜನರಿಗೆ ಪ್ರಯೋಜನವಾಗಲಿ ಎನ್ನುವ ಕಾರಣಕ್ಕೆ ದಂತ ಚಿಕಿತ್ಸಾ ಶಿಬಿರವನ್ನು ಏರ್ಪಡಿಸಿದ್ದೆವು. ನಮ್ಮ ಯುವಕ ಮಂಡಲವು ಹಲವಾರು ಸಮಾಜಮುಖಿ ಕಾರ್ಯಗಳನ್ನು ನಡೆಸುತ್ತಾ ಬಂದಿದ್ದು ಕಲ್ಲಮ ಗುರು ರಾಘವೇಂದ್ರ ಮಠದಂತಹ ಧಾರ್ಮಿಕ ಕೇಂದ್ರದಲ್ಲಿ ಇಂತಹ ಕಾರ್ಯಕ್ರಮ ಮೂಡಿಬಂದಿರುವುದು ಸಮಾಜಕ್ಕೆ ಒಂದು ಅರ್ಥಪೂರ್ಣ ಸಂದೇಶವಾಗಿದೆ.
ಮುಂದಕ್ಕೆ ಉಚಿತ ವೈದ್ಯಕೀಯ (ಆರೋಗ್ಯ) ಶಿಬಿರವನ್ನು ಆಯೋಜಿಸುವ ಯೋಜನೆಯನ್ನು ಹಾಕಿಕೊಂಡಿದ್ದುಮುಂದಿನ ದಿನಗಳಲ್ಲಿ ಅದನ್ನು ಶ್ರೀ ಗುರು ರಾಘವೇಂದ್ರ ಮಠದ ಸಹಕಾರದೊಂದಿಗೆ ಸಾಕಾರಗೊಳಿಸಲಾಗುವುದು.
-ಗೌತಮ್‌ರಾಜ್ ಕರುಂಬಾರು, ಅಧ್ಯಕ್ಷರು ಶ್ರೀ ಷಣ್ಮುಖ ಯುವಕ ಮಂಡಲ ಸರ್ವೆ